Advertisement

ಆಲಂಕಾರು: ನೇಜಿಗೆ ಎಲೆ ಮಡಚುವ ರೋಗ

11:41 PM Dec 11, 2022 | Team Udayavani |

ಆಲಂಕಾರು: ಕರಾವಳಿಯ ರೈತರ ಅಡಿಕೆ ಬೆಳೆ ಈಗಾಗಲೇ ಹಲವೆಡೆ ಎಲೆಚುಕ್ಕಿ ರೋಗ ಹಾಗೂ ಹಳದಿ ರೋಗಕ್ಕೆ ತುತ್ತಾಗಿ ನಾಶ‌ವಾಗುತ್ತಿದೆ. ಇದೀಗ ನೇಜಿಗೆ ಎಲೆ ಮಡಚುವ ರೋಗ ಕಂಡು ಬಂದಿದ್ದು, ಕೆಲವೊಂದು ರೈತರು ನಾಟಿ ಮಾಡಿದ ನೇಜಿ ಸಂಪೂರ್ಣವಾಗಿ ಕಳೆದುಕೊಂಡು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಕಡಬ ತಾಲೂಕಿನ ಅಲ್ಲಲ್ಲಿ ಈ ರೋಗ ಕಂಡು ಬಂದಿದ್ದು ರೈತರು ಅಪಾರ ಪ್ರಮಾಣದ ಗದ್ದೆ ಕೃಷಿಯನ್ನು ಕಳೆದುಕೊಂಡಿದ್ದಾರೆ.

Advertisement

ಆಲಂಕಾರು ಗ್ರಾಮದ ನೆಕ್ಕರೆ, ಪೆರಾಬೆ ಗ್ರಾಮದ ಮೂಲೆತ್ತ ಮಜಲು ಎಂಬಲ್ಲಿ ನಾಟಿ ಮಾಡಿದ ಸುಮಾರು 10 ಎಕ್ರೆ ಗದ್ದೆಯ ನೇಜಿ ಸಂಪೂರ್ಣ ರೋಗದಿಂದ ನಾಶವಾಗಿದೆ. ನಾಟಿ ಮಾಡಿದ 1 ತಿಂಗಳ ನೇಜಿ ಕೃಷಿಗೆ ಈ ರೋಗ ಹೆಚ್ಚು ಬಾಧಿಸಿದೆ.

ಮರು ಬಿತ್ತನೆಗೆ ಬೀಜದ ಅಭಾವ
ಮರು ಬಿತ್ತನೆಗೆ ರೈತರಿಗೆ ಬಿತ್ತನೆ ಬೀಜದ ಅಭಾವ ಕಾಡುತ್ತಿದೆ. ಹದ ಮಾಡಿದ ಗದ್ದೆಯನ್ನು ಖಾಲಿ ಬಿಡಲು ರೈತನ ಮನಸ್ಸು ಒಪ್ಪದ ಕಾರಣ ಬಿತ್ತನೆ ಬೀಜಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಬೀಜ ಸಂಪಾದಿಸಿಕೊಡುವುದಕ್ಕಾಗಿ ಯತ್ನಿಸುತ್ತಿದ್ದಾರೆ.

ಪೈರು ಕಳೆದುಕೊಂಡಿರುವ ರೈತರು ಮರು ನಾಟಿಗಾಗಿ ಸಿದ್ಧತೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಈ ರೈತರಿಗೆ ನೀರಿನ ಅಭಾವ ಕಾಡಲಿದೆ. ರೈತನ ಯೋಜನೆಯಂತೆ ನಡೆದಿದ್ದರೆ ಡಿಸೆಂಬರ್‌ ತಿಂಗಳು ಪೈರು ತೆನೆ ಬಿಡುವ ಹಂತದವರೆಗೆ ಬೆಳೆಯುತ್ತಿತ್ತು ಮತ್ತು ಜನವರಿ ಅಂತ್ಯಕ್ಕೆ ಕಟಾವಿಗು ಬರುತ್ತಿತ್ತು. ಆದರೆ ಇದೀಗ ಡಿಸೆಂಬರ್‌ ತಿಂಗಳಲ್ಲಿ ನೇಜಿ ನಾಟಿ ಮಾಡುವ ಪರಿಸ್ಥಿತಿ ಬಂದಿರುವುದರಿಂದ ಜನವರಿ ತಿಂಗಳಲ್ಲಿ ರೈತರಿಗೆ ತಮ್ಮ ಗದ್ದೆಗಳಿಗೆ ನೀರಿನ ಅಭಾವ ಕಾಡಲಿದೆ. ನೀರಿನ ಸಮಸ್ಯೆ ಎದುರಾದರೆ ಇಲ್ಲಿಯು ರೈತ ನಾಟಿ ಮಾಡಿದ ನೇಜಿಯನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ.

ಮೋಡದ ವಾತಾವರಣದಿಂದ ಹುಳದ ಬಾಧೆ ಹೆಚ್ಚಳ
ಮೋಡ ಕವಿದ ವಾತಾವರಣ ಹಾಗೂ ಆಗಾಗ ಮಳೆ ಬರುವುದರಿಂದ ಈ ಹುಳದ ಬಾಧೆ ಹೆಚ್ಚಾಗುತ್ತಿದೆ. ಕೀಟನಾಶಕ ಸಿಂಪಡಣೆಯಿಂದ ಈ ರೋಗ ನಿಯಂತ್ರಿಸಬಹುದು. ಕ್ಲೋರೋ ಪೈರಿ ಪಾಸ್‌ ಕೀಟನಾಶಕವನ್ನು ಲೀಟರ್‌ಗೆ 2 ಎಂಎಲ್‌ ಅಥವಾ ಮೊನೋಪ್ರೊಟೋಪಾಸನ್ನು ಲೀಟರ್‌ಗೆ 1.5 ಎಂಎಲ್‌ ಅಥವಾ ಫಿರಿಡಾನ್‌ ಎಕ್ರೆಗೆ 3 ಕೆ.ಜಿ.ಯಷ್ಟು ಒಂದು ಬಾರಿ ಉಪಯೋಗಿಸಿದರೆ ಈ ಹುಳವನ್ನು ನಿಯಂತ್ರಿಸಬಹುದು. ಕೃಷಿ ಇಲಾಖೆಯಲ್ಲಿ ಈ ಎಲ್ಲ ಕೀಟ ನಾಶಕಗಳು ದೊರೆಯುತ್ತಿದ್ದು ಸರಕಾರದ ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುವುದು ಎಂದು ಕಡಬ ತಾ| ಸಹಾಯಕ ಕೃಷಿ ಅಧಿಕಾರಿ ಬರ್ಮಣ್ಣ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next