ಆಳಂದ: ಮಹಿಳೆಯರು ಸ್ವ-ಸಹಾಯ ಸಂಘ ಗಳನ್ನು ಕಟ್ಟಿಕೊಂಡು ಅವುಗಳಿಗೆ ಇರುವ ಸೌಲಭ್ಯ, ಸಾಲ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಂಘ ಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆಯ ಧಾರವಾಡದ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ ಸಲಹೆ ನೀಡಿದರು.
ಪಟ್ಟಣದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಸಂಘ ಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆ, ಗ್ರಾಮ ಸ್ವರಾಜ್ಯ ಸೌಹಾರ್ದ ಪತ್ತಿನ ಸಂಘ ನಿಯಮಿತ (ನಾಗಲೇಗಾಂವ)ದ ಆಶ್ರಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘವು ಹೈನುಗಾರಿಕೆ, ಗುಡಿ ಕೈಗಾರಿಕೆ, ಮನೆ ಸಾಲ ಹೀಗೆ ವಿವಿಧ ರೀತಿಯ ಸಾಲ ನೀಡುತ್ತದೆ. ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಕಲಬುರಗಿಯ ಸಂಘಮಿತ್ರ ಹಣಕಾಸು ಸೇವಾ ಸಂಸ್ಥೆ ವ್ಯವಸ್ಥಾಪಕ ಧರ್ಮರಾಜ ದೇಶಮುಖ ಮಾತನಾಡಿ, ಏಳು ಸ್ವಸಾಹಯ ಸಂಘಗಳಿಗೆ ತಲಾ 25 ಸಾವಿರ ರೂ.ಗಳಂತೆ ಸಾಲವಿತರಣೆ ಮಾಡಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಸ್ವರಾಜ್ಯ ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಮಾತನಾಡಿ, ಮಹಿಳೆಯರು ಸಂಘ ಮಿತ್ರ ಶಕ್ತಿ ತುಂಬಿಕೊಂಡು ಆರ್ಥಿಕ ಶಿಕ್ಷಣ ನೀತಿಗಳನ್ನು ಪಾಲಿಸಿ, ಉಳಿತಾಯ ಮಾಡಬೇಕು. ಇದರಿಂದ ಆರ್ಥಿಕ ಲಾಭವಾಗುತ್ತದೆ ಎನ್ನುವುದನ್ನು ಮನಗಾಣಬೇಕು ಎಂದು ಸಲಹೆ ನೀಡಿದರು.
ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸೇವಾ ಸಂಸ್ಥೆ ವ್ಯವಸ್ಥಾಪಕ ರವಿಕುಮಾರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ, ಸದಸ್ಯ ಶ್ರೀಶೈಲ ವಿ. ಪಾಟೀಲ, ಆನಂದ ಎಸ್. ದೇಶಮುಖ, ವಲಯ ವ್ಯವಸ್ಥಾಪಕ ಶಿವಲಿಂಗಯ್ಯ ಹಿರೇಮಠ, ಅಣ್ಣರಾಯ ಪಾಟೀಲ, ಶರಣಬಸಪ್ಪ, ಅಂಗನ ವಾಡಿ ಕಾರ್ಯಕರ್ತೆ ಸಂಘದ ಅಧ್ಯಕ್ಷೆ ಪುಷ್ಪಾವತಿ ಚಟ್ಟಿ, ಗಜರಾಬಾಯಿ, ಸುನಂದಾ, ಚಂದ್ರಕಲಾ, ಬಂಡೆಮ್ಮಾ ಹಾಗೂ ಸಂಘದ ಮಹಿಳೆಯರು ಇದ್ದರು.
ಮಡಿವಾಳಯ್ಯ ಬಿ. ಮಠಪತಿ ನಿರೂಪಿಸಿದರು. ವಿದ್ಯಾರ್ಥಿನಿಯರಾದ ವರ್ಷಾ, ಸ್ವಪ್ನಾ, ಮಿನಾಕ್ಷಿ, ರೇಷ್ಮಾ, ಲಕ್ಷ್ಮೀ ಪ್ರಾರ್ಥನಾ ಗೀತೆ ಹಾಡಿದರು. ಅಣ್ಣರಾವ ಪಾಟೀಲ ಸ್ವಾಗತಿಸಿದರು, ದೀಪಕ ವಿ. ಗುಂಡಗೊಳೆ ವಂದಿಸಿದರು. ಇದೇ ವೇಳೆ ಭಾಗ್ಯವಂತಿ ನಿರಂತರ ಉಳಿತಾಯ ಸಂಘ ಸೇರಿ ಏಳು ಸಂಘಗಳಿಗೆ ತಲಾ 25 ಸಾವಿರ ರೂಪಾಯಿಯಂತೆ ಒಟ್ಟು 13.50 ಲಕ್ಷ ರೂ. ಸಾಲ ವಿತರಣೆ ಮಾಡಲಾಯಿತು.