ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಕೇಂದ್ರ ಸ್ಥಾನ ಆಲಮಟ್ಟಿಗೆ ಸ್ಥಳಾಂತರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಜೂ.21ರಂದು ಪ್ರತಿಭಟನೆ ನಡೆಸಿ ಸಾಂಕೇತಿಕವಾಗಿ ಧರಣಿ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ಅಧ್ಯಕ್ಷ ಯಾಸೀನ್ ಜವಳಿ ಹೇಳಿದರು.
ಪ್ರವಾಸಿ ಮಂದಿರ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಲಮಟ್ಟಿ ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್ನೆಲ್ ಎಂಡಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿಯ ಕೃಷ್ಣಾ ಮೇಲ್ದಂಡೆ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕಾದರೆ ಕೆಬಿಜೆಎನ್ನೆಲ್ ಎಂಡಿ ಕಚೇರಿ ಕೇಂದ್ರಸ್ಥಾನ ಆಲಮಟ್ಟಿಯಲ್ಲಿಯೇ ಇದ್ದು, ಯುಕೆಪಿಯ ಎಲ್ಲ ಯೋಜನೆ ಪೂರ್ಣಗೊಳಿಸಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಬಿಜೆಎನ್ನೆಲ್ ಎಂ.ಡಿ ಕಚೇರಿ ಕೇಂದ್ರ ಸ್ಥಾನ ಆಲಮಟ್ಟಿಗೆ ಸ್ಥಳಾಂತರ ಮಾಡುವ ಕುರಿತು ನ್ಯಾಯಾಲಯ ಮತ್ತು ಸರ್ಕಾರ ಹಲವಾರು ಬಾರಿ ಆದೇಶ ನೀಡಿದರೂ ಕೆಬಿಜೆಎನ್ನೆಲ್ ಎಂ.ಡಿ ಮಾತ್ರ ನ್ಯಾಯಾಲಯ ಮತ್ತು ಸರ್ಕಾರದ ಆದೇಶಕ್ಕೆ ಕಿಮತ್ತು ನೀಡುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರ ಮತ್ತು ಸಚಿವರ ಆದೇಶಕ್ಕೆ ಕಿಮ್ಮತ್ತು ನೀಡದ ಕೆಬಿಜೆಎನ್ನೆಲ್ ಎಂ.ಡಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದರು.
ಉತ್ತರ ಕರ್ನಾಟಕದವರೇ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲು ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದವರು. ಅವರಿಗೆ ಯುಕೆಪಿಗೆ ಸಂಬಂಧಿಸಿದ ಅಂತಾರಾಜ್ಯ ವಿವಾದಗಳ ಬಗ್ಗೆ ಎರಡು ಕೃಷ್ಣಾ ನ್ಯಾಯಾಧಿಕರಣಗಳು ನೀಡಿರುವ ತೀರ್ಪಿನ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಇಷ್ಟೆಲ್ಲ ಇದ್ದರೂ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದಿರಲು ಕಾರಣವೇನು?, ಸರ್ಕಾರದ ಆದೇಶ ಪಾಲನೆ ಮಾಡದಿರುವ ಅಧಿಕಾರಿಗಳನ್ನು ರಕ್ಷಿಸುತ್ತಿರುವವರು ಯಾರು? ಎಂದು ಪ್ರಶ್ನಿಸಿದರು.
ಯುಕೆಪಿ ಯೋಜನೆ ವ್ಯಾಪ್ತಿಯ ಏಳು ಜಿಲ್ಲೆಯ ಸಚಿವರು, ವಿಧಾನಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಸಂಸದರು ಸೇರಿದಂತೆ ವಿವಿಧ ಸಂಸ್ಥೆಗಳ ಜನಪ್ರತಿನಿಧಿಗಳು ಈ ಕುರಿತು ಚಕಾರ ಎತ್ತದಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ. ಇದರ ಪರಿಹಾರಕ್ಕೆ ಉತ್ತರ ಕರ್ನಾಟಕದ ಅಭಿವೃದ್ಧಿ ಸಂಘಟನೆ ಶ್ರಮಿಸುತ್ತಿದೆ. ಆದರೆ ಯಾವ ವ್ಯಕ್ತಿಯ ವಿರುದ್ಧವೂ ಅಲ್ಲ ಎಂದರು.
ಜೂ.21ರಂದು ಹೋರಾಟ ಪಕ್ಷಾತೀತ, ಜಾತ್ಯತೀತವಾಗಿ ನಡೆಯುತ್ತಿದೆ. ಇದಕ್ಕೆ ಈ ಭಾಗದ ಎಲ್ಲ ಪ್ರಗತಿಪರ ಸಂಘಟನೆಗಳು, ಚಿಂತಕರು, ಪಕ್ಷಾತೀತವಾಗಿ ಜನಪ್ರತಿನಿಧಿಗಳು ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು. ಈ ವೇಳೆ ಸಂಘಟನೆಯ ಪ್ರೇಮ ಚಲವಾದಿ ಇದ್ದರು.