ವಿಜಯಪುರ: ಭಾರೀ ಮಳೆಯ ಪರಿಣಾಮ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯಕ್ಕೆ ಒಳ ಹರಿವು ಹೆಚ್ಚುತ್ತಲೇ ಇದ್ದು, ಕೃಷ್ಣಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಶನಿವಾರ ಬೆಳಿಗ್ಗೆ ಸುಮಾರು 2.50 ಲಕ್ಷ ಕ್ಯೂಸೆಕ್ ಒಳ ಹರಿವು ಇತ್ತು. ಜಲಾಶಯದ ಗರಿಷ್ಠ ಮಟ್ಟ 519.60 ಮೀ. ಇದ್ದು, ಇಂದಿನ ಮಟ್ಟ : 516.79ಮೀ. ನೀರಿನ ಸಂಗ್ರಹವಿದೆ.
ಗರಿಷ್ಠ 123.081 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 81.898 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಹೀಗಾಗಿ ಶಾಸ್ತ್ರೀ ಜಲಾಶಯದ ಎಲ್ಲ 26 ಗೇಟ್ ಗಳನ್ನು ತೆರೆದು 3.50 ಲಕ್ಷ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರ್ಮಿಸಿರುವ ಕೊಯ್ನಾ ಸೇರಿದಂತೆ ಬಹುತೇಕ ಜಲಾಶಯಗಳು ಭರ್ತಿಯಾಗಿ, ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಪರಿಣಾಮ ನದಿ ತೀರದ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆ ಹಾಳಾಗುವ ಭೀತಿ ರೈತರಲ್ಲಿ ಶುರುವಾಗಿದೆ.
ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದಿಂದ ಕೃಷ್ಣಾ ನದಿ ಮೂಲಕ ಕೆಳ ಭಾಗದಲ್ಲಿ ರಾಯಚೂರು-ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯಕ್ಕೆ ಹರಿಬಿಡಲಾಗುತ್ತಿದೆ.