Advertisement

ಅಕ್ಷಯ ವಸನ

12:36 PM Jan 05, 2018 | |

ಗಿರಿಕೆ ಮಗಳು ಗಿರಿಯಮ್ಮ ನಾಟಿ ನೆಡಲು ಬರ್ಬೆಕಂತೆ! ಬರ್ತಾಳಪ್ಪ  ಬರ್ತಾಳೇ ತಲೆಬಾಚುತ್ತಿದ್ದಾಳೆ’ ಹೀಗೆ ಆರಂಭವಾಗಿ ಹೂವು ಮುಡಿಯುತ್ತಿದ್ದಾಳೆ… ಕಾಡಿಗೆ ಹಚ್ಚುತ್ತಿದ್ದಾಳೆ… ಬೊಟ್ಟು ಇಡುತ್ತಿ ದ್ದಾಳೆ… ಬಳೆ ತೊಡುತ್ತಿದ್ದಾಳೆ ಎಂದು ಮುಂದುವರೆಯುತ್ತ ಸೀರೆ ಉಡುತ್ತಿದ್ದಾಳೆ ಎಂಬಲ್ಲಿ ನೇಜಿ ನೆಡುವ ಹೆಣ್ಣಿನ ಅಲಂಕಾರವು ಪೂರ್ಣಗೊಳ್ಳುತ್ತದೆ. ತುಳುನಾಡಿನ ನೇಜಿ ಗದ್ದೆಯಲ್ಲಿ ಹುಟ್ಟಿರುವ ತುಳು ಕಬಿತೆಯ ಕನ್ನಡಾನುವಾದವಿದು. ಕಣ್ಣಲ್ಲಿ ನಕ್ಷತ್ರ ಹೊಳೆಯುವಂತೆ ತೆಳುವಾಗಿ ಕಾಡಿಗೆ ಹಚ್ಚಿಕೊಂಡು, ಎಣ್ಣೆಗೂದಲ ನಡುವೆ ಬೈತಲೆ ತೆಗೆದು ಅಂಬಡೆಸೂಡಿ ಹಾಕಿ, ನಾಮಗೋರಟೆ ಹೂದಂಡೆ ಮುಡಿದು, ಬಾಳೆಕಾಯಿ ಸಂಚಿಯಿಂದ ಎಲೆಯಡಿಕೆ ತೆಗೆದು ಮೆಲ್ಲುತ್ತ, ಕೆಂಪು ತುಟಿಗಳಲ್ಲಿ ಮಾತಿಗೊಮ್ಮೆ ಗೊಳ್ಳೆಂದು ನಗುತ್ತ, ಕೈಮಗ್ಗದ ಸೀರೆಯ ಸೆರಗುತುದಿಯನ್ನು ಮುಂದಕ್ಕೆಳೆದು ಸೊಂಟಕ್ಕೆ ಸಿಕ್ಕಿಸಿಕೊಂಡು, ನೆರಿಗೆಯನ್ನು ಮೊಣಗಂಟಿನತನಕ ಎತ್ತಿಕಟ್ಟಿಕೊಂಡು, ಕೊರಳಿಗೆ ಕೊರಳು ಸೇರಿಸಿ ಡೆನ್ನಾನ ಹಾಡುತ್ತ ಕೆಸರು ಗದ್ದೆಯಲ್ಲಿ ಹಿಂದೆ ಹಿಂದೆ ಹೆಜ್ಜೆಯಿಡುತ್ತ ನೇಜಿ ನೆಡುವ ಕೊರಪಲು, ಯಮುನಾ, ಯೆಂಕಮ್ಮ, ನತ್ತಲ್‌ ಬಾಯಿ, ಪೀಂಚೊಲು, ಪಾರು, ನರ್ಸಿ! ಈ ಮಗ್ಗದ ಸೀರೆಯ ನೀರೆಯರ ದೈವಿಕವಾದ ಚಂದವನ್ನು ನೋಡಲೆಂದು ಇಣುಕಿ ಇಣುಕಿಯೇ ಕೊಕ್ಕರೆಗಳ ಕತ್ತು ಉದ್ದವಾಗಿರಬೇಕು! ಅವರ ಹಾಡಿನ ಲಯಕ್ಕೆ ತಕ್ಕಂತೆ ಮುಂದೆ ಹಿಂದೆ ಮೂತಿ ಕುಣಿಸುತ್ತ ನಡೆಯುವುದು ಕೂಡ ತಲೆತಲಾಂತರದಿಂದ ಅವುಗಳಿಗೆ ರೂಢಿಯಾಗಿಬಿಟ್ಟಿದೆ!

Advertisement

“ಅಮ್ಮ ಕೊಟ್ಟ ಸೀರೆ ಮಡಚಲಾಗುವುದಿಲ್ಲ, ಅಪ್ಪಕೊಟ್ಟ ಕಾಸು ಎಣಿಸಲಾಗುವುದಿಲ್ಲ!’ ಒಗಟಿನ ಬಾಲ್ಯ. ಮುಂಜಾನೆ ಕನಕಾಂಬರಗಳು ಅಂಬರವನ್ನು ಕಂಡು ಅಂಬ್ರೆಲ್ಲಾ ಬಿಡಿಸುತ್ತಿದ್ದವು.ಅವುಗಳನ್ನು ಖುಷಿಯಿಂದ ಬಿಡಿಸಿ ಪಚ್ಚೆಕೊರಳ ಗಂಧದಲ್ಲೇ ಮಾಲೆ ಹೆಣೆಯುತ್ತಿದ್ದ ಅಮ್ಮನ ಮಡಿಲಲ್ಲಿ ಮಲಗಿ ಪುಟ್ಟ ಪಕಳೆ ಬೆರಳುಗಳು ಸೀರೆಯ ಸೆರಗನ್ನು ಸುರುಳಿ ಸುತ್ತುತ್ತ ಮಡಚುತ್ತಿದ್ದವು. ಹರಿದ ಸೀರೆಯ ತೂತುಗಳಲ್ಲಿ ಕಣ್ಣುಗಳು ನೋಟ ನೆಟ್ಟು ನಕ್ಷತ್ರಗಳನ್ನು ಎಣಿಸುತ್ತಲೇ ಇರುಳು ಕಳೆದು ಬೆಳಕು ಸಿಕ್ಕಿತ್ತು. ಅಮ್ಮ ತವರುಮನೆಯಿಂದ ಬಳುವಳಿಯಾಗಿ ಬಂದಿದ್ದ ಕಬ್ಬಿಣದ ಕೆಂಪು ಪೆಟ್ಟಿಗೆಯ ತುಂಬ ನಾಜೂಕಾಗಿ ಮಡಚಿಟ್ಟ ಜರತಾರಿಯಂಚಿನ ರೇಶ್ಮೆ ಸೀರೆಗಳು! ಅವುಗಳ ನುಣುಪನ್ನು ನೇವರಿಸಲು ಬಳಿಬರುವ ಪುಟ್ಟ ಮಣ್ಣು ಕೈಗಳನ್ನು ಅಮ್ಮ ಬೆಕ್ಕಿನಂತೆ ಕೈಯ ಚೋಟಿನಲ್ಲಿ ಹೊಡೆದೋಡಿಸುತ್ತಿದ್ದಳು. ನೋಡನೋಡ ಆ ಸೀರೆಗಳ ನವಿಲುಗರಿಯಂತಹ ಒಡಲ ತುಂಬ ನೀರೆಯರ ಗೊಂಚಲು ಗೊಂಚಲು ಕಥೆಗಳು ಕಣ್ತೆರೆಯುತ್ತ ಅಮ್ಮನ ಕೈಬೆರಳುಗಳ ಸೋಂಕಿಗೇ ಜೀವಪಡೆದು ಉದ್ದಾನುದ್ದ ಬಿಚ್ಚಿಕೊಳ್ಳುತ್ತಿದ್ದವು. 

ಕತೆ ಕತೆ ಕಾರಣ
ಸೀರೆ ನೇಯ್ದಿಟ್ಟು ಅದೃಶ್ಯಳಾಗುವ ರಾಜಕುಮಾರಿಯ ಅಜ್ಜಿಕಥೆಯಿಂದ ಹಿಡಿದು, ಕೀಜವ ಹಕ್ಕಿಯ ಮೊಟ್ಟೆಯಲ್ಲಿ ಹುಟ್ಟಿದ ದೇಯಿಬೈದ್ಯೆತಿಯನ್ನು ವಿವಾಹ ಮುನ್ನವೇ ಮೈನೆರೆದಳೆಂದು ಬ್ರಾಹ್ಮಣನು ಕಣ್ಣಿಗೆ ಅರಿವೆ ಕಟ್ಟಿ ಕಾಡಿಗೆ ಬಿಡುವ ಕೋಟಿಚೆನ್ನಯ ಪಾಡªನದ ಕಥೆ;  ಸತ್ಯನಾಪುರದ ಆರ್ಯ ಬನ್ನಾರ್‌ ಬಿರ್ಮಮಾಲವಜ್ಜನಿಗೆ ಬೆರ್ಮರು ಹಿಂಗಾರ ಹೂವಲ್ಲಿ ಕರುಣಿಸಿದ ಎಳೆಮಗು ಸಿರಿಯ ಚಂದ ನೋಡಿ ಬಸಲೂರ ಕಾಂತಣ್ಣಾಳ್ವನು ಮಗು ಮೈಗೆ ಅನಿಸೀರೆ ಹಾಕಿ ಮದುವೆಯ ಹಕ್ಕು ಸ್ಥಾಪಿಸುವುದು, ಮುಂದೆ ಮದುವೆಯಾಗಿ ಬಸುರಿಯಾದಾಗ ಆತ ತಂದ ಬಯಕೆಯ ಸೀರೆಯನ್ನು ಅವನ ಸೂಳೆ ಸಿದ್ದುವು ಉಟ್ಟು ಕಳಚಿದ್ದನ್ನು ಈ ಸತ್ಯದ ಮಗಳು ಅರಿತು ಬಯಕೆ ಮನೆಯಲ್ಲೇ ಎಲ್ಲರೆದರು ಅದನ್ನು ಧಿಕ್ಕರಿಸಿ ಅಜ್ಜ ಕೊಟ್ಟ ಸೀರೆಯನ್ನೇ ಉಡುವ ಕೊನೆಯಿರದ ಪ್ರತಿಭಟನೆಯ ಸಿರಿಗಥೆ; ಕಲಿಯಕಾಟಕೆ ಪಗಡೆಯಾಡಿ ಸೋತು ಕಾಡುಪಾಲಾಗಿ ಅರಿವೆ ಕಳಕೊಂಡ ನಳನು ನಿದ್ದೆಯಲ್ಲಿದ್ದ ದಮಯಂತಿಯ ಅರ್ಧ ಸೀರೆಯನ್ನೇ ಹರಿದು ಉಟ್ಟುಕೊಂಡು ತೊರೆದು ಹೋಗುವ ಕಥೆ; ನಾರುಡುಗೆಯಲ್ಲಿ ಕಾಡು ಸೇರಿದ ಸೀತೆಯ ಅಪಹರಣದ ಕಥೆ; ಗಾಂಧಾರಿಯು ಪ್ರೀತಿಯ ನದಿ ಹರಿಯದಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡದ್ದರಿಂದ ಮಕ್ಕಳು ದೂರ್ತರಾಗಿ ಬಟ್ಟೆಗೆಟ್ಟ ಕಥೆ; ಕೃಷ್ಣೆಯು ಕೃಷ್ಣನ ಗಾಯಕ್ಕೆ ಹರಿದು ಕಟ್ಟಿದ ಸೆರಗಿನ ತುಂಡೇ ಅವಳ ವಸ್ತ್ರಾಪಹರಣ ಕಾಲದಲ್ಲಿ ಅಕ್ಷಯವಸನವಾಗಿ ಮಾನಕಾಯ್ದ ಕಥೆ; ಶುಕ್ರಾಚಾರ್ಯನ ಮಗಳು ದೇವಯಾನಿ ಹಾಗೂ ರಾಕ್ಷಸಕನ್ಯೆ ಶರ್ಮಿಷ್ಟೆಯರ ಅರಿವೆ ಬದಲಾಗಿ ರಾಜಕುಮಾರಿಯು ದಾಸಿಯಾಗುವ ದಾಸಿಯು ರಾಣಿ ಪಟ್ಟಕ್ಕೇರುವ ಇರವಿನ ಕಥೆ! ಕೀಚಕನಿಗಾಗಿ ಸೀರೆಯುಟ್ಟ ಭೀಮನ ಕಥೆ; ಬೃಹನ್ನಳೆ, ಶಿಖಂಡಿ, ಮಂಗಳಮುಖೀಯರ  ಕಥೆ! ಹೆಚ್ಚುತ್ತಿರುವ ಅತ್ಯಾಚಾರದ ಆತಂಕದ ಕಥೆ! ಮೊನ್ನೆ ಮೊನ್ನೆ ಮಾವನ ಬೊಜ್ಜದ ದಿನವೇ ಸೀರೆಗಾಗಿ ಹೊಡೆದಾಡಿಕೊಂಡ ಸೊಸೆಯರ ಕಥೆ- ಎಲ್ಲವನ್ನೂ ಮೀರಿ ಈ ಲೌಕಿಕ ಸೀರೆಯನ್ನೇ ಕಳಚಿ ಆಗಸಕೆ ಆತ್ಮವ ಸುತ್ತಿಕೊಂಡು ಬೆಳಕು ಬೆಳಕಲಿ ನಡೆದ ಅಕ್ಕನ ಮಹಾಕಥೆ!

ಕಾಡಿಗೆಗಾಗಿ ಕಣ್ಣು, ಬಣ್ಣಕ್ಕಾಗಿ ಮುಖ, ಲಿಪ್‌ಸ್ಟಿಕ್ಕಿಗಾಗಿ ತುಟಿ, ಸೀರೆಗಾಗಿ ಮೈ! ಎಂಬಷ್ಟು ಸೌಂದರ್ಯಪ್ರಜ್ಞೆಯು ಮೆಟೀರಿಯಲಿಸ್ಟಿಕ್‌ ಆಗುತ್ತಿರುವ ಮಾದಕ ಬಣ್ಣದ ಕಾಲವಿದು! ಈಗ ಕೈಮಗ್ಗದ ಸೀರೆಯನ್ನು ದಾಟಿಕೊಂಡು ರೇಶ್ಮೆ, ಕಾಟನ್‌, ವಾಯಿಲ್‌, ನೈಲಾನ್‌, ಸಿಂಥೆಟಿಕ್‌, ಶಿಫಾನ್‌, ಬಾಂದಿನಿ ಸೀರೆಸಾಗರ! ಸೀರೆಗಳ ಪ್ರವಾಹದಲ್ಲೇ ಕೊಚ್ಚಿಹೋಗುತ್ತಿದ್ದಾಳಲ್ಲ ನೀರೆ! ಬೀರಿನತುಂಬ ಸೀರೆಗಳದ್ದೇ ಪಿಸುಮಾತು! ಮಳಿಗೆಗಳಲ್ಲಂತೂ ಸೀರೆಯುಟ್ಟ ತಲೆಯಿಲ್ಲದ ಮುಂಡಗಳು! ನೀರುಳ್ಳಿ ಸಿಪ್ಪೆಯಂಥ ಅವುಗಳ ತೆಳ್ಳಗಿನ ಚಂದಕ್ಕೆ ಕಣ್ಣುರಿದು ಹಿತ್ತಲಲ್ಲಿ ಉದ್ದುದ್ದ ದಂಟಿನ ಸುರುಳಿಸುಳ್ಳಿ ಹೂವುಗಳು ಎದ್ದುಬಿದ್ದು ಅಳುತ್ತಿವೆ! ಅಟ್ಟ ಹತ್ತುವಾಗಲೂ ಪುಟ್ಟಕ್ಕಳಿಗೆ ಪಟ್ಟೆಸೀರೆ! ನೀರಿಗೆ ಹೋಗುವಾಗಲೂ ನೀರಜಾಳಿಗೆ ಧಾರೆಸೀರೆ! ಸಿನೆಮಾ ಧಾರಾವಾಹಿಗಳಲ್ಲಂತೂ ಮೂರೂ ಹೊತ್ತು ಮನೆಯಲ್ಲೇ ಇರುವ ಗೃಹಿಣಿ ಪಾತ್ರಗಳು ಕೂಡ ಮೈತುಂಬ ಒಡವೆ ಹೇರಿಕೊಂಡು ಒಡಲ ತುಂಬ ರೇಷ್ಮೆಸೀರೆ ಅಂಟಿಸಿಕೊಂಡು ಅಡುಗೆಮನೆ, ಬಚ್ಚಲುಮನೆ ಎಲ್ಲೆಂದರಲ್ಲಿ ಓಡಾಡುವುದನ್ನು ಕಂಡು ಸೀರೆ ಅಲರ್ಜಿಯಾಗಿ ಪಕ್ಕದಮನೆಯ ಪಾರಜ್ಜಿ ಈಗ ಚೂಡಿದಾರ್‌ ಹಾಕಲಾರಂಭಿಸಿದ್ದಾರೆ! ಗಿಡದಲ್ಲಿ ಬಿಂಕದಿಂದ ತೂಗಾಡುವ ಮಿಠಾಯಿ ಹೂ, ದಾಸವಾಳ ಹೂ ಫ್ರಾಕುಗಳು ಅವರನ್ನೇ ಕೈಬೀಸಿ ಕರೆಯುತ್ತ ಬಿದ್ದು ಬಿದ್ದು ನಗುತ್ತಿವೆ!

ಕಾತ್ಯಾಯಿನಿ ಕುಂಜಿಬೆಟ್ಟು

Advertisement
Advertisement

Udayavani is now on Telegram. Click here to join our channel and stay updated with the latest news.

Next