Advertisement
ಹಿಂದೂ ಸಂಪ್ರದಾಯದ ಪ್ರಕಾರ ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಶುಭವೆಂಬ ನಂಬಿಕೆಯಿದೆ. ಅದರಂತೆಯೇ ವರ್ಷವಿಡಿ ಈ ದಿನಕ್ಕಾಗಿ ಕೆಲವರು ಕಾದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ವಾಡಿಕೆ. ಜತೆಗೆ ಅಕ್ಷಯ ತೃತೀಯ ದಿನದಂದು ರಿಯಾಯಿತಿ ಹಾಗೂ ಹಲವು ಕೊಡುಗೆಗಳಿರುತ್ತವೆ ಹೀಗಾಗಿ ಗ್ರಾಹಕರು ಚಿನ್ನ ಖರೀದಿಗೆ ಮುಂದಾಗಿದ್ದಾರೆ.
Related Articles
Advertisement
ಒಂದು ಗ್ರಾಂ ನಾಣ್ಯ: ಅಕ್ಷಯ ತೃತೀಯ ದಿನದಂದು ಪ್ರತಿಯೊಬ್ಬರು ಚಿನ್ನ ಖರೀದಿಸಬೇಕೆಂಬ ಉದ್ದೇಶದಿಂದ ನಗರದ ಬಹುತೇಕ ಚಿನ್ನದ ಮಳಿಗೆಗಳಲ್ಲಿ 1 ಗ್ರಾಂ ಚಿನ್ನದ ನಾಣ್ಯಗಳನ್ನು ತಯಾರಿಸಿ ಇಡಲಾಗಿದೆ. ಈ ನಾಣ್ಯಕ್ಕೆ ಗ್ರಾಹಕರಿಂದ ಯಾವುದೇ ರೀತಿಯ ತಯಾರಿಕಾ ವೆಚ್ಚ ಪಡೆಯದೆ ಮೂಲ ಬೆಲೆಗೆ ನೀಡುವ ಕೊಡುಗೆಯನ್ನು ಘೋಷಿಸಲಾಗಿದೆ.
ರಾಜಕೀಯ ನಾಯಕರ ಚಿನ್ನದ ಭಾವಚಿತ್ರಗಳಿಗೆ ಭಾರಿ ಬೇಡಿಕೆ!: ಅಕ್ಷಯ ತೃತೀಯ (ಮೇ 7)ದ ಚಿನ್ನ ಖರೀದಿಯಲ್ಲಿ ರಾಜಕೀಯ ನಾಯಕರ ಭಾವಚಿತ್ರವುಳ್ಳ ಒಡವೆಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ತಮಿಳುನಾಡಿನ ರಾಜಕೀಯ ಬೆಂಬಲಿಗರ ಪ್ರವೃತ್ತಿ ಕರ್ನಾಟಕ್ಕೂ ಕಾಲಿಟ್ಟಿದ್ದೂ, ನೆಚ್ಚಿನ ಪಕ್ಷಗಳ ಚಿಹ್ನೆ ಮತ್ತು ನಾಯಕರ ಚಿತ್ರವುಳ್ಳ ಒಡವೆಗಳಿಗೆ ಬೆಂಬಲಿಗರು ಮತ್ತು ಕಾರ್ಯಕರ್ತರು ಬೇಡಿಕೆ ಸಲ್ಲಿಸಿದ್ದಾರೆ.
ಹಲವು ಮಂದಿ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ದುಪ್ಪಟ್ಟಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ರಾಜಕೀಯ ಪಕ್ಷಗಳ ಚಿಹ್ನೆಯ ಆಭರಣ ಧರಿಸುವುದರಿಂದ ನಾಯಕರಿಗೆ ಮತ್ತು ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂಬಂತೆ ಅಕ್ಷಯ ತೃತೀಯ ನಂಬಿಕೆಯ ಸ್ವರೂಪ ಬದಲಾಗಿದೆ. ಆ ದಿನ ಅಂತಹ ಒಡವೆ ಧರಿಸಿದರೆ ತಮಗು ಕೂಡ ಉನ್ನತ ಸ್ಥಾನಮಾನಗಳು ಧಕ್ಕುತ್ತವೆ ಎಂಬ ನಂಬಿಕೆ ಕಾರ್ಯಕರ್ತರಲ್ಲಿ ಮತ್ತು ಬೆಂಬಲಿಗರಲ್ಲಿ ಮೂಡಿದೆ.
ಬಿಜೆಪಿ ಬೆಂಬಲಿಗರು ತಾವರೆ, ಮೋದಿ ಹಾಗೂ ಯಡಿಯೂರಪ್ಪ ಮುಖದ ನಮೂನೆ ಅಥವಾ ಭಾವಚಿತ್ರವುಳ್ಳ ಡಾಲರ್ ಮತ್ತು ಉಂಗುರಗಳಿಗೆ ಹಾಗೂ ಕಾಂಗ್ರೆಸ್‌ನ ಕಾರ್ಯಕರ್ತರು ಇಂದಿರಾಗಾಂಧಿ ಮತ್ತು ಸೋನಿಯಾಗಾಂಧಿ ಮುಖಚಿತ್ರ ಹೊಂದಿರುವ ಒಡವೆಗಳಿಗೆ ಬೇಡಿಕೆಯನ್ನಿಟ್ಟಿದ್ದಾರೆ.
ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅವರು ಕೂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವಚಿತ್ರವುಳ್ಳ ಆಭರಣಗಳನ್ನು ಮಾಡಿಕೊಡುವಂತೆ ತಿಳಿಸಿದ್ದಾರೆ. ಇದರೊಂದಿಗೆ ಸ್ಥಳೀಯ ನಾಯಕರ ಮುಖಚಿತ್ರವಿರುವ ಒಡವೆಗಳಿಗೂ ಆಯಾ ಭಾಗದಲ್ಲಿರುವ ಚಿನ್ನದ ಅಂಗಡಿಗಳಿಗೆ ಬೇಡಿಕೆ ಬಂದಿದೆ.
ಮೋದಿ ಮತ್ತು ಸೋನಿಯಾಗಾಂಧಿ ಭಾವಚಿತ್ರದ ಆಭರಣಗಳಿಗೆ ಸಾರ್ವಜನಿಕರಿಂದಲೂ ಬೇಡಿಕೆ ಉಂಟಾಗಿದೆ. ಅದರಲ್ಲೂ ಮುಖ್ಯವಾಗಿ ಅನಿವಾಸಿ ಭಾರತೀಯರಿಂದ ಮೋದಿ ಭಾವಚಿತ್ರವಿರುವ ಡಾಲರ್, ಪೆಂಡೆಂಟ್, ಬ್ರೈಸ್‌ಲೈಟ್ ಮತ್ತು ಉಂಗುರುಗಳಿಗೆ ಹೆಚ್ಚಿನ ಆರ್ಡರ್ ಬರುತ್ತಿದೆ.
ಅಲ್ಲದೆ ಬೆಳ್ಳಿ ಆಭರಣಗಳಿಗೆ ಸೂಕ್ತವಾಗುವ ವಿನ್ಯಾಸದಲ್ಲಿ ಮೋದಿ ಡಾಲರ್ ಮಾಡಿಕೊಂಡುವಂತೆ ಅನಿವಾಸಿ ಭಾರತೀಯರು ಚಿನ್ನದ ವ್ಯಾಪಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಿ. ರಾಮಾಚಾರಿ.ಅಕ್ಷಯ ತೃತೀಯಕ್ಕೆ ಅಭಿಮಾನಿಗಳ ಪ್ರವರ ಇದಾದರೆ, ಆಭರಣ ಮಾರಾಟಗಾರರು ನಾವೇನು ಕಮ್ಮಿಯಿಲ್ಲ ಎಂಬಂತೆ ಗ್ರಾಹಕರಿಂದ ಬರುವ ಬೇಡಿಕೆಗೂ ಮುನ್ನವೇ ಮೋದಿ, ಕಮಲದ ಚಿಹ್ನೆ, ಹಸ್ತದ ಚಿಹ್ನೆಯುಳ್ಳ ಆಭರಣಗಳ ಪ್ರತಿಕೃತಿಗಳನ್ನು ಮಾಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಅಕ್ಷಯ ತೃತೀಯ ಈ ಬಾರಿ ನಗರದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜತೆಗೆ ಚಿನ್ನದ ಬೆಲೆಯೂ ಕಡಿಮೆಯಾಗಿರುವುದು ಸಹ ಇದಕ್ಕೆ ಕಾರಣವಾಗಿದೆ. ಅದರಂತೆ ಮಂಗಳವಾರ ಬೆಳಗ್ಗೆ 7 ರಿಂದಲೇ ಮಳಿಗೆ ಆರಂಭವಾಗಲಿದ್ದು, ರಾತ್ರಿ 10.30ರವರೆಗೆ ತೆರೆದಿರಲಿದೆ. ಬಡವರು ಅಕ್ಷಯ ತೃತೀಯ ಆಚರಿಸಬೇಕೆಂಬ ಉದ್ದೇಶದಿಂದ 1 ಚಿನ್ನದ ನಾಣ್ಯ ಹಾಗೂ 5 ಗ್ರಾಂ ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಲಾಗುತ್ತಿದೆ.
-ಟಿ.ಎ. ಶರವಣ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ