Advertisement

ಅಕ್ಷರ ರೂಪದಲ್ಲಿ ಅಕ್ಷಯ ಧರ್ಮಸ್ಥಳ

10:19 AM Feb 07, 2019 | |

ಹೊನ್ನಾವರ: ನವೆಂಬರ್‌ 25, 1948ರಂದು ವೀರೇಂದ್ರ ಹೆಗ್ಗಡೆಯವರು ಜನಿಸಿದಾಗ ಅಂದಿನ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ಮಂಜಯ್ಯ ಹೆಗ್ಗಡೆಯವರು ಇನ್ನು ಧರ್ಮಸ್ಥಳದ ಜ್ಯೋತಿ ಬೆಳಗುತ್ತದೆ ಅಂದಿದ್ದರಂತೆ. ವಿದ್ಯಾಭ್ಯಾಸ ಮುಗಿಸಿದ ವೀರೇಂದ್ರ ಹೆಗ್ಗಡೆಯವರು ಅ.24, 1968ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿ ಪಟ್ಟಕ್ಕೇರಿದರು.

Advertisement

ನೇತ್ರಾವತಿಯಲ್ಲಿ ನೀರು ಹರಿಯುತ್ತಲೇ ಇದೆ, ಹೆಗ್ಗಡೆಯವರು ಪಟ್ಟಕ್ಕೇರಿ 50 ವರ್ಷಗಳಾದವು. ಧರ್ಮಸ್ಥಳ ಧಾರ್ಮಿಕ ಕ್ಷೇತ್ರಗಳ ಆಡಳಿತ, ಆದಾಯದ ಸದ್ಬಳಕೆ, ಬಹುಮುಖ ಸಮಾಜ ಸೇವೆಗೆ ಜಾಗತಿಕ ಮಾನ್ಯತೆ ಪ್ರಾಪ್ತವಾಗಿದೆ. ಭಕ್ತರಿಗೆ, ಸಮಾಜಕ್ಕೆ ಧರ್ಮಸ್ಥಳ ನೀಡಿದ ಕೊಡುಗೆಗಳ ಕುರಿತು ಹಲವು ಸಂದರ್ಭಗಳಲ್ಲಿ ಅಸಂಖ್ಯೆ ಲೇಖನಗಳು ಬಂದಿವೆ. ಹೀಗಾಗಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ನಿಮಿತ್ತ ಸಮಿತಿ ಅಧಿಕೃತವಾಗಿ 13 ಕೃತಿಗಳನ್ನು ಪ್ರಕಟಿಸಿದೆ.

ಧರ್ಮಸ್ಥಳದ ವಿವಿಧ ಸಾಮಾಜಿಕ, ಧಾರ್ಮಿಕ ಚಿಂತನೆ ಮತ್ತು ಸಾಧನೆಗಳ ಕುರಿತು ಈ ಕೃತಿಗಳಲ್ಲಿ ಹೇಳಲಾಗಿದೆ. ಮುದ್ರಣ ವೆಚ್ಚಕ್ಕಿಂತ ಕಡಿಮೆ ಬೆಲೆಯಲ್ಲಿ ಬಹುವರ್ಣದ 200ರಿಂದ 250ಪುಟಗಳ ಈ ಕೃತಿಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಹೆಗ್ಗಡೆಯವರ ಕುರಿತು ಹೇಳುವ 136 ಪುಟಗಳ ಬಹುವರ್ಣ ಮುದ್ರಿತ ಕೇವಲ ಛಾಯಾಚಿತ್ರಗಳ ಸ್ವರ್ಣ ದರ್ಶನ ಪುಸ್ತಕ ಪ್ರಕಟವಾಗಿದ್ದು ಸಾವಿರ ಶಬ್ದ ಹೇಳಲಾರದ ಸಂಗತಿಗಳನ್ನು ಹೆಗ್ಗಡೆಯವರ ಕುರಿತಾಗಿ ಈ ಪುಸ್ತಕ ಹೇಳಿದೆ. ಗದ್ದೆ ನಾಟಿಯನ್ನು ಪರಿಶೀಲಿಸುವ ಹೆಗ್ಗಡೆಯವರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಧಾನಿ, ರಾಷ್ಟ್ರಪತಿಗಳಿಂದ ಸ್ವೀಕರಿಸುವಾಗ, ಅಸಂಖ್ಯೆ ಅಭಿಮಾನಿಗಳಿಂದ ಸುತ್ತುವರಿದಾಗ ಹೀಗೆ ಅಮೂಲ್ಯ ಚಿತ್ರಗಳಿದ್ದು ಎಲ್ಲ ಪುಟದಲ್ಲೂ ಸ್ಥಿತಪ್ರಜ್ಞ ಮುಗುಳ್ನಗುವಿನ ಹೆಗ್ಗಡೆಯವರ ವ್ಯಕ್ತಿತ್ವದ ದರ್ಶನವಾಗುತ್ತದೆ.

ಮೊದಲ ತುಳುಮಾನ್ಯ ಕೃತಿಯನ್ನು ಡಾ| ಕೆ. ಚಿನ್ನಪ್ಪ ಗೌಡ ರಚಿಸಿದ್ದು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಹೆಗ್ಗಡೆಯವರ ಕೊಡುಗೆಯನ್ನು ಹೇಳುತ್ತದೆ. ಎರಡನೇಯ ದಿವ್ಯ ಜೀವನ ಕೃತಿಯನ್ನು ಮಲ್ಲಿಕಾರ್ಜುನ ಹೊಸಪಾಳ್ಯ ರಚಿಸಿದ್ದು ದುಶ್ಚಟಗಳ ವಿರುದ್ಧ ಹೆಗ್ಗಡೆಯವರು ನಡೆಸುತ್ತಿರುವ ಅಭಿಯಾನದ ವಿವರಗಳನ್ನು, ಯಶಸ್ಸನ್ನು ದಾಖಲಿಸಿದೆ. ಮೂರನೇ ಬೋಯ ನೆರಳಲ್ಲಿ ಕೃತಿಯನ್ನು ಪ್ರೊ| ಎಂ.ಎ. ಹೆಗಡೆ ಸಂಪಾದಿಸಿದ್ದು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ವಿವರಿಸುತ್ತದೆ. ನಾಲ್ಕನೇ ಕೃತಿ ಮರಳಿ ಪ್ರಕೃತಿಗೆ ಲಕ್ಷ್ಮೀ ಮಚ್ಚಿನ ರಚಿಸಿದ್ದು ನಿಸರ್ಗ ಚಿಕಿತ್ಸೆ, ಯೋಗ ಮತ್ತು ಶಾಂತಿವನ ಟ್ರಸ್ಟ್‌ನ ಕಾರ್ಯಕ್ರಮಗಳ ಮುಖಾಂತರ ಧರ್ಮಸ್ಥಳದ ಕೊಡುಗೆಯನ್ನು ಹೇಳುತ್ತದೆ. ಐದನೇ ಸಂಸ್ಕೃತಿ ಸಂಶೋಧನಾ ಕೃತಿಯನ್ನು ಡಾ| ಪಾದೇಕಲ್ಲು ಕೃಷ್ಣ ಭಟ್ ರಚಿಸಿದ್ದು ಐತಿಹಾಸಿಕ, ಪೌರಾಣಿಕ ವಿಷಯಗಳಿಗೆ ಧರ್ಮಸ್ಥಳದ ಕೊಡುಗೆಯನ್ನು ತಿಳಿಸುತ್ತದೆ.

ಆರನೇ ಕೃತಿ ಮಂಜೂಷಾ ಕರಂಡವನ್ನು ಡಾ| ಚೂಡಾಮಣಿ ನಂದಗೋಪಾಲ ರಚಿಸಿದ್ದು ಹೆಗ್ಗಡೆಯವರ ಹೆಮ್ಮೆಯ ಮಂಜೂಷಾ ಸಂಗ್ರಹಾಲಯದ ಅಮೂಲ್ಯ ಸಂಪತ್ತನ್ನು ಹೆಗ್ಗಡೆಯವರು ರಕ್ಷಿಸಿದ ದಾಖಲೆಗಳನ್ನು ಒದಗಿಸುತ್ತದೆ. ಏಳನೇ ಕ್ರಿಯಾಶೀಲ ಸಹೋದರರು ಕೃತಿಯನ್ನು ಡಾ| ಬಿ.ಪಿ. ಸಂಪತ್‌ಕುಮಾರ ರಚಿಸಿದ್ದು ಹೆಗ್ಗಡೆಯವರ ಸಹೋದರರು ಮತ್ತು ಅವರ ಕುಟುಂಬದವರೆಲ್ಲಾ ಸೇರಿ ಒಂದಾಗಿ ಧರ್ಮಸ್ಥಳವನ್ನು ಸಮಾಜದ ಸಂಪತ್ತಾಗಿ ಬೆಳೆಸಿದ ವಿವರದ ದಾಖಲೆ ನೀಡುತ್ತಿದ್ದು, ಎಂಥವರೂ ಹೆಮ್ಮೆಪಡಬೇಕು. ಎಂಟನೇಯದ್ದು ಧರ್ಮಸ್ಥಳದ ಜೀವಸೆಲೆ ಹೇಮಾವತಿ ಎಂಬ ಕೃತಿಯನ್ನು ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡತಿಯವರು ಧರ್ಮಸ್ಥಳದ ಎಲ್ಲ ಯೋಜನೆಗಳಿಗೆ ಬೆಂಬಲವಾಗಿ, ಬೆನ್ನೆಲುಬಾಗಿ, ಮಾರ್ಗದರ್ಶಿಯಾಗಿ ನಿಂತಿದ್ದನ್ನು ಹೇಳುತ್ತದೆ. ಒಂಬತ್ತನೇದ್ದು ದಾನಪುರುಷಾರ್ಥ ಕೃತಿಯನ್ನು ಡಾ| ಪ್ರಸನ್ನಕುಮಾರ ಐತಾಳ ರಚಿಸಿದ್ದು ಧರ್ಮಸ್ಥಳದ ಚತುರ್ವಿಧ ದಾನ ಹೆಗ್ಗಡೆಯವರಿಂದ ಬಹುವಿಧದ ದಾನವಾಗಿ ನಾಡಿನಾದ್ಯಂತ ವಿವಿಧ ಸಂಸ್ಥೆಗಳ ರೂಪದಲ್ಲಿ ತಲೆ ಎತ್ತಿರುವುದನ್ನು ಹೇಳುತ್ತದೆ.

Advertisement

ಹತ್ತನೇ ಕೃತಿ ಭಾಗ್ಯದ ಬಾಗಿಲು ಕುರಿತು ಡಾ| ಕಾರಂತ ಪೆರಾಜೆ ಬರೆದಿದ್ದು ಶ್ರೀ ಕ್ಷೇತ್ರದ ಪರಂಪರೆ ಗ್ರಾಮಾಭಿವೃದ್ಧಿ ಯೋಜನೆಯಾಗಿ ವಿಶ್ವರೂಪತಾಳಿ ನಾಡಿನ ಒಂದು ಕೋಟಿ ಜನರ ಏಳ್ಗೆಗೆ ಕಾರಣವಾದ ಇತಿಹಾಸವನ್ನು ಹೇಳಿದ್ದಾರೆ. ಹನ್ನೊಂದನೇ ಧರ್ಮಸ್ಥಳದ ರಥಿಕರು ಕೃತಿಯನ್ನು ಡಾ| ಎಲ್‌.ಎಚ್. ಮಂಜುನಾಥ ರಚಿಸಿದ್ದು ಹೆಗ್ಗಡೆಯವರ ಮಾರ್ಗದರ್ಶನದಂತೆ ದುಡಿದ ಪ್ರಮುಖ ಸಿಬ್ಬಂದಿ ಕುರಿತು ಬರೆದಿದ್ದಾರೆ. ತಮ್ಮ ನೌಕರ ವೃಂದದವರ ಮೇಲೆ ಅಪಾರ ಪ್ರೀತಿ, ಅಭಿಮಾನ ಹೊಂದಿದ ಹೆಗ್ಗಡೆಯವರು ಪ್ರಶಸ್ತಿಗಳನ್ನು ಮಂಜುನಾಥ ಸ್ವಾಮಿಗೆ ಅರ್ಪಿಸಿ, ಶ್ರೇಯಸ್ಸನ್ನು ಕಾರ್ಯಕರ್ತರಿಗೆ ಹಂಚುತ್ತಾರೆ. ಕಾರ್ಯಕರ್ತರು ಒಂದು ಕುಟುಂಬದಂತೆ ದುಡಿಯುತ್ತಾರೆ. ಹೆಗ್ಗಡೆಯವರು ಅವರನ್ನು ಮನೆಯವರಂತೆ ನೋಡಿಕೊಳ್ಳುತ್ತಾರೆ. ಹನ್ನೆರಡನೇ ಕೃತಿ ಸಾಧನೆಯ ಪಥದಲ್ಲಿ ಸುವರ್ಣ ಹೆಜ್ಜೆಗಳು ಚಂದ್ರಶೇಖರ ಎಸ್‌. ಅಂಥರ ಇವರಿಂದ ರಚಿತವಾಗಿದೆ. ಹೆಗ್ಗಡೆಯವರ 50ವರ್ಷದ ಸಾಧನೆಯನ್ನು ಕಿರಿದಾಗಿ, ಒಟ್ಟಾಗಿ ಇಲ್ಲಿ ಹೆಳಲಾಗಿದೆ. ಈ ಸಾಲಿನಲ್ಲಿ ಇನ್ನಷ್ಟು ಕೃತಿಗಳು ಬರಲಿವೆ.

ಅತಿರೇಕ, ಆಡಂಬರ, ಅಹಂಕಾರ, ಹೊಗಳಿಕೆಯ ಒಂದಕ್ಷರವೂ ಇಲ್ಲ. ಸ್ಥಿತಪ್ರಜ್ಞತೆಯಿಂದ ಧರ್ಮಸ್ಥಳದ ವಿಶ್ವರೂಪದರ್ಶನ ಮಾಡಿಸುವ ಈ ಕೃತಿಗಳು ಇಂತಹ ಹಾದಿಯಲ್ಲಿ ನಡೆಯಬೇಕು ಎನ್ನುವವರಿಗೆ ನಂದಾದೀಪ. ಮಂಜಯ್ಯ ಹೆಗ್ಗಡೆಯವರ ಮಾತು ಸತ್ಯವಾಗಿದೆ.

•ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next