ಲಂಡನ್:ಯುನೈಟೆಡ್ ಕಿಂಗ್‌ಡಮ್ ವಿತ್ತ ಸಚಿವ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರಿಗೆ ಬ್ರಿಟನ್ ನಿವಾಸಿಯಲ್ಲ (ನಾನ್-ಡೊಮಿಸೈಲ್) ಎಂಬ ಪ್ರಮಾಣ ಪತ್ರ ನೀಡಿ ತೆರಿಗೆ ವಿನಾಯಿತಿ ನೀಡಿದ ಬಗ್ಗೆ ಹಾಗೂ ಆ ಮಾಹಿತಿ “ದ ಇಂಡಿಪೆಂಡೆಂಟ್’ ಪತ್ರಿಕೆಗೆ ಸೋರಿಕೆಯಾಗಿರುವುದರ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.
ಯು.ಕೆ. ಸರ್ಕಾರದ ಭಾಗವೇ ಆಗಿರುವ ವೈಟ್‌ಹಾಲ್ ತನಿಖಾ ವಿಭಾಗ ಒಟ್ಟೂ ಬೆಳವಣಿಗೆಗಳ ಬಗ್ಗೆ ಪರಿಶೀಲನೆ ಹಾಗೂ ತನಿಖೆ ನಡೆಸಲಿದೆ. ಪ್ರತಿಪಕ್ಷ ಲೇಬರ್ ಪಾರ್ಟಿಯೇ ಈ ಮಾಹಿತಿ ಪತ್ರಿಕೆಗೆ ಸೋರಿಕೆಯಾಗಲು ಕಾರಣ ಎಂದು ಸಚಿವ ರಿಷಿ ಸುನಕ್ ಅವರ ಬೆಂಬಲಿಗರು ವಾದಿಸುತ್ತಿದ್ದಾರೆ.
ಬೋರಿಸ್ ಜಾನ್ಸನ್ ಸರ್ಕಾರದ ಹಿರಿಯ ಅಧಿಕಾರಿಯ ಪ್ರಕಾರ, ವ್ಯಕ್ತಿಯೊಬ್ಬರ ವೈಯಕ್ತಿಕ ತೆರಿಗೆ ಮಾಹಿತಿ ಬಹಿರಂಗಪಡಿಸುವುದು ಗಂಭೀರ ಅಪರಾಧ. ಈ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ. ಹೀಗಾಗಿ, ಆ ಮಾಹಿತಿಯನ್ನು ಯಾರು ಹೊಂದಿದ್ದರು ಸೇರಿದಂತೆ ಹಲವು ಅಂಶಗಳ ಬಗ್ಗೆ ಮಾಹಿತಿ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.
ರಾಜೀನಾಮೆಗೆ ಮುಂದಾಗಿದ್ದರೇ?:
ಸದ್ಯ ಉಂಟಾಗಿರುವ ತೆರಿಗೆ ವಿನಾಯಿತಿ ವಿವಾದದಿಂದಾಗಿ ಬೇಸತ್ತಿರುವ ವಿತ್ತ ಸಚಿವ ರಿಷಿ ಸುನಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಹೇಳಲಾಗಿದೆ. ಆದರೆ, ಪ್ರಧಾನಿ ಬೋರಿಸ್ ಜಾನ್ಸನ್ ಅವರೇ ಸಹೋದ್ಯೋಗಿಯನ್ನು ಕರೆದು ಸಮಾಧಾನಪಡಿಸಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಸ್ಥಾನ ತ್ಯಜಿಸುವ ನಿಮಿತ್ತ, ಡೌನಿಂಗ್ ಸ್ಟ್ರೀಟ್‌ನಿಂದ ತಮಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಹಲವು ವಾಹನಗಳು ಅಲ್ಲಿ ನಿಂತಿವೆ ಎಂದು ಯು.ಕೆ.ಯ ಹಲವು ಮಾಧ್ಯಮಗಳು ವರದಿ ಮಾಡಿವೆ.