Advertisement

ಅಕ್ಕಿಆಲೂರು: ದೇಶದ ಸಾಹಿತ್ಯ ಲೋಕಕ್ಕೆ ಕನ್ನಡದ ಕೊಡುಗೆ ಅನನ್ಯ

05:23 PM Feb 06, 2024 | Team Udayavani |

ಉದಯವಾಣಿ ಸಮಾಚಾರ
ಅಕ್ಕಿಆಲೂರು: ವಿಶ್ವಮಾನ್ಯವಾಗಿರುವ ಭಾರತ ದೇಶದಲ್ಲಿಂದು ನಡೆದಿರುವ ಸಾಕಷ್ಟು ಪೂರಕ ಬದಲಾವಣೆಗಳಿಗೆ ನಾವೆಲ್ಲರೂ
ಸಾಕ್ಷಿಯಾಗುತ್ತಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ದೇಶದ ಸಾರಸ್ವತ ಲೋಕಕ್ಕೆ ಕರುನಾಡಿನ ಕೊಡುಗೆ ಅಪಾರವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಮುಖ್ಯಸ್ಥ ಡಾ| ಎ.ಸಿ. ವಾಲಿ ಹೇಳಿದರು.

Advertisement

ಪಟ್ಟಣದಲ್ಲಿ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದಿಂದ ಆಯೋಜಿಸಿದ್ದ 32ನೇ ಕನ್ನಡ ನುಡಿ ಸಂಭ್ರಮದ
ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾರನ್ನು ಕೇವಲವಾಗಿ ಕಾಣಬಾರದು. ಎಲ್ಲರಲ್ಲೂ ಅಸಾಮಾನ್ಯ
ಸಾಮರ್ಥವಿರುತ್ತದೆ. ಅದನ್ನು ಗುರುತಿಸುವ ಪ್ರಯತ್ನ ನಮ್ಮದಾಗಬೇಕು.

ಸಮಾಜದಲ್ಲಿ ಮಾನವೀಯತೆ ಮತ್ತು ಧರ್ಮದ ಗುಣಗಳು ಹೆಚ್ಚಾಗುತ್ತಿದೆ. ಕನ್ನಡ ಕಟ್ಟಲು ಸರ್ಕಾರದ ಮೇಲೆ ನಾವು ಅವಲಂಬಿತರಾಗದೇ, ಸ್ವಯಂ ಪ್ರೇರಣೆಯಿಂದ ನಾಡಾಭಿಮಾನ ರಾಷ್ಟ್ರೀಯ ಮನೋಧರ್ಮ, ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿ ಮತ್ತು ಪ್ರಾಚೀನತೆಗೆ ಕನ್ನಡ ಬಹುದೊಡ್ಡ ಕೊಡುಗೆ ನೀಡಿದೆ. ಅದನ್ನು ನಾವೇ ಉಳಿಸಿಕೊಳ್ಳಬೇಕು. ನಮ್ಮ ಮೂಲಸನಾತನ ಸಂಸ್ಕೃತಿ, ಆಚರಣೆಗಳಿಗೆ ಹಿನ್ನಡೆಯಾಗದಂತೆ ನಾವು ಜಾಗೃತರಾಗಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬೇಕೆಂದರೂ ಸಿಗದ ನಮ್ಮ ಶ್ರೇಷ್ಠ ಆಚಾರ-ವಿಚಾರಗಳನ್ನು ನಾವೆ ಗೌರವಿಸಬೇಕು ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಸತೀಶ ಕುಲಕರ್ಣಿ ಮಾತನಾಡಿ, ಯುವ ಸಾಹಿತಿಗಳಿಗೆ ವಿನೂತನ ಆಲೋಚನೆಗಳಿರಬೇಕು. ವೈಚಾರಿಕತೆ ಮತ್ತು ನೈತಿಕತೆ ಆಧಾರದ ಮೇಲೆ ಸಾಹಿತ್ಯಗಳು  ರಚನೆಯಾಗಿ ಸಮುದಾಯದ ಬೆಳಕಾಗಿ ಪ್ರಜ್ವಲಿಸುವಂತಾಗಬೇಕು. ಗಡಿಭಾಗಗಳಲ್ಲಿ ಇಂದಿಗೂ ನಡೆದಿರುವ ಭಾಷೆ, ನೆಲ-ಜಲದ ಕುರಿತ ವೈರುಧ್ಯ ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದೆ. ಜನಪದ ಸಂಸ್ಕೃತಿಗೆ ಘಾಸಿಯಾದಾಗ ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ನ್ಯಾಯವಾದಿ ಸಂದೀಪ ಪಾಟೀಲ ಮಾತನಾಡಿ, ಕನ್ನಡ ಭಾಷೆ ಬೆಳೆಯುವುದು ಜೈಕಾರ
ಹಾಕುವುದರಿಂದಲ್ಲ ಬದಲಿಗೆ ಓದುವುದು, ಬರೆಯುವುದು ಮತ್ತು ಮಾತನಾಡುವುದರ ಮೇಲೆ ಕನ್ನಡದ ಅಸ್ತಿತ್ವ ಅಡಗಿದೆ. ರಾಷ್ಟ್ರೀಯ ಮನೋಧರ್ಮ, ನಾಡಾಭಿಮಾನ ಅಳವಡಿಸಿಕೊಂಡರೆ ಶಿಕ್ಷಣವಿಲ್ಲದಿದ್ದರು ಜಗತ್ತು ಆಳುವ ನೈತಿಕ ಆತ್ಮವಿಶ್ವಾಸ ನಮ್ಮಲ್ಲಿ ಕರಗತವಾಗುತ್ತದೆ ಎಂದರು.

Advertisement

ವಿರಕ್ತಮಠದ ಶಿವಬಸವ ಶ್ರೀಗಳು ಮಾತನಾಡಿದರು. ನಂತರ ಪ್ರಶಾಂತ ದೈವಜ್ಞ ವಿರಚಿತ ಬಾಬಣ್ಣನ ಚುಟುಕುಗಳು ಕೃತಿ
ಬಿಡುಗಡೆಗೊಂಡಿತು. ಹಾವೇರಿ ಪೃಥ್ವಿ ನೃತ್ಯ ಲೋಕ ತಂಡದಿಂದ, ಕಾಲೇಜು ವಿಭಾಗದಿಂದ ನಡೆದ ನೃತ್ಯ ಸಂಭ್ರಮ ಮನಸೂರೆಗೊಂಡಿತು. ಶಿವಮೊಗ್ಗದ ಅನುಷಾ ಮೇಲೋಡಿಸ್‌, ಸರಿಗಮಪ ಖ್ಯಾತಿಯ ಮಹನ್ಯಾ ಪಾಟೀಲ ಗೀತ ಸಂಭ್ರಮ ನಡೆಸಿಕೊಟ್ಟರು. ತಹಶೀಲ್ದಾರ್‌ ರವಿ ಕೊರವರ, ವಿ.ವಿ. ಸಾಲಿಮಠ, ಶರತ್‌ ಸಣ್ಣವೀರಪ್ಪನವರ, ರಾಜಶೇಖರ ಮಳಗಿ, ಷಣ್ಮುಖಪ್ಪ ಮುಚ್ಚಂಡಿ ಸೇರಿದಂತೆ  ಪ್ರಮುಖರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next