Advertisement

ಮೈತ್ರಿಯ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್‌-ಬಿಎಸ್ಪಿಗೆ ಗುಡ್‌ಬೈ! ಅಖೀಲೇಶ್‌ ಯಾದವ್ ಸ್ಪಷ್ಟನೆ

10:37 PM Nov 14, 2020 | sudhir |

ನವದೆಹಲಿ: “ಉತ್ತರಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ನೊಂದಿಗಾಗಲೀ, ಬಿಎಸ್‌ಪಿಯೊಂದಿಗಾಗಲೀ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರಮುಖ ಪಕ್ಷಗಳ ಬದಲಿಗೆ ಸಣ್ಣಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತೇವೆ.’

Advertisement

ಹೀಗೆಂದು ಹೇಳಿರುವುದು ಸಮಾಜವಾದಿ ಪಕ್ಷ(ಎಸ್ಪಿ)ದ ಅಧ್ಯಕ್ಷ ಅಖೀಲೇಶ್‌ ಯಾದವ್‌. ಇತ್ತೀಚೆಗೆ ಮುಗಿದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಸೋಲುಂಡ ಹಿನ್ನೆಲೆಯಲ್ಲಿ ಅಖೀಲೇಶ್‌ರ ಈ ಹೇಳಿಕೆ ಮಹತ್ವ ಪಡೆದಿದೆ. ಬಿಹಾರದಲ್ಲಿ ಆರ್‌ಜೆಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸರ್ಕಾರ ರಚಿಸಲು ಅಗತ್ಯವಿದ್ದ ಮ್ಯಾಜಿಕ್‌ ಸಂಖ್ಯೆ ಪಡೆಯಲು ವಿಫ‌ಲವಾಗಿತ್ತು. ಇದಕ್ಕೆ ಕಾರಣ ಮಿತ್ರಪಕ್ಷ ಕಾಂಗ್ರೆಸ್‌ನ ಕಳಪೆ ಸಾಧನೆ ಎಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉ.ಪ್ರದೇಶದಲ್ಲಿ ಅಖೀಲೇಶ್‌ ಕೂಡ ಎಚ್ಚರಿಕೆಯ ಹೆಜ್ಜೆಯಿಡುತ್ತಿರುವುದು ಅವರ ಮಾತುಗಳಿಂದಲೇ ಸ್ಪಷ್ಟವಾಗಿದೆ.

ಮೈತ್ರಿಯ ಮಾತೇ ಇಲ್ಲ:
ಶನಿವಾರ ತಮ್ಮ ಹುಟ್ಟೂರು ಇಟಾವಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಖೀಲೇಶ್‌ ಯಾದವ್‌, “ಯಾವ ಕಾರಣಕ್ಕೂ ನಾವು ದೊಡ್ಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಸಾಧ್ಯತೆಯಿದ್ದು, ಈಗಾಗಲೇ ಮಾತುಕತೆ ಆರಂಭಿಸಿದ್ದೇವೆ’ ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಆರ್‌ಎಲ್‌ಡಿ(ರಾಷ್ಟ್ರೀಯ ಲೋಕ ದಳ)ಯೊಂದಿಗೆ ಎಸ್‌ಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ:ಪಟಾಕಿ ಅಂಗಡಿಗಳ ಮೇಲೆ ಡಿವೈಎಸ್ಪಿ-ತಹಶೀಲ್ದಾರ್ ಜಂಟಿ ದಾಳಿ : ಹಸಿರುರಹಿತ ಪಟಾಕಿ ವಶ 

ಚಿಕ್ಕಪ್ಪನೊಂದಿಗೆ ಸಂಧಾನ:
ಇದೇ ವೇಳೆ, ರಾಜಕೀಯ ಲೆಕ್ಕಾಚಾರದೊಂದಿಗೆ ಚಿಕ್ಕಪ್ಪ ಶಿವಪಾಲ್‌ ಯಾದವ್‌ರೊಂದಿಗಿನ ವೈಮನಸ್ಸನ್ನು ಶಮನಗೊಳಿಸಲೂ ಅಖೀಲೇಶ್‌ ಮುಂದಾಗಿರುವುದು ಸ್ಪಷ್ಟವಾಗಿದೆ. ಜಸ್ವಂತ್‌ನಗರ ಅಸೆಂಬ್ಲಿ ಕ್ಷೇತ್ರವನ್ನು ಶಿವಪಾಲ್‌ರಿಗೆ ಬಿಟ್ಟುಕೊಡಲಾಗುವುದು. ಅಲ್ಲಿ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಅಖೀಲೇಶ್‌ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಎಸ್‌ಪಿ ಅಧಿಕಾರಕ್ಕೆ ಬಂದರೆ ಶಿವಪಾಲ್‌ರನ್ನು ಸಂಪುಟ ಸಚಿವರನ್ನಾಗಿ ಮಾಡುವುದಾಗಿಯೂ ತಿಳಿಸಿದ್ದಾರೆ.

Advertisement

2017ರ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಎಸ್‌ಪಿ ಕೇವಲ 47 ಸೀಟುಗಳನ್ನಷ್ಟೇ ಪಡೆದಿತ್ತು. ಕಾಂಗ್ರೆಸ್‌ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಜತೆಗಿನ ಎಸ್ಪಿ ಮೈತ್ರಿಯೂ ಕ್ಲಿಕ್‌ ಆಗದೇ, ಎಸ್ಪಿಗೆ 5 ಮತ್ತು ಬಿಎಸ್ಪಿಗೆ 10 ಸ್ಥಾನಗಳಷ್ಟೇ ಬಂದಿದ್ದವು.

ಇದನ್ನೂ ಓದಿ:ವೈಟ್‌ಹೌಸ್‌ನಿಂದ ಹೊರ ನಡೆಯುವ ಸುಳಿವು ನೀಡಿದ ಟ್ರಂಪ್‌!

ಗುಪ್ಕರ್‌ಗೆ ಕಾಂಗ್ರೆಸ್‌ ಸೇರ್ಪಡೆ
ಹಲವು ದಿನಗಳ ಮಾತುಕತೆಯ ಬಳಿಕ ಕೊನೆಗೂ ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್‌ ಅಲಯನ್ಸ್‌ ಫಾರ್‌ ಗುಪ್ಕರ್‌ ಡಿಕ್ಲರೇಷನ್‌ಗೆ ಕಾಂಗ್ರೆಸ್‌ ಸೇರ್ಪಡೆಗೊಂಡಿದೆ. ವಿಶೇಷ ಸ್ಥಾನಮಾನವನ್ನು ಮರಳಿ ಜಾರಿ ಮಾಡುವ ಉದ್ದೇಶದಿಂದ ಗುಪ್ಕರ್‌ ಮೈತ್ರಿ ಹುಟ್ಟಿಕೊಂಡಿದೆ. ಕಾಂಗ್ರೆಸ್‌ನ ಕೇಂದ್ರ ನಾಯಕತ್ವವು ಈ ಮೈತ್ರಿಗೆ ಬೆಂಬಲ ಘೋಷಿಸಿದ್ದರೂ, ರಾಜ್ಯ ಘಟಕ ಇದರಿಂದ ದೂರವುಳಿದಿತ್ತು.

ಭಾನುವಾರ ಎನ್‌ಡಿಎ ಸಭೆ
ಭಾನುವಾರ ಎನ್‌ಡಿಎ ಪಾಲುದಾರ ಪಕ್ಷಗಳು ಸಭೆ ಸೇರಿ, ಬಿಹಾರದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿವೆ. ಮಧ್ಯಾಹ್ನ 12.30ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನಾಯಕನ ಆಯ್ಕೆ ಕುರಿತು ವಿಸ್ತೃತ ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸಲಿದೆ ಎಂದು ಶನಿವಾರವೇ ನಿತೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next