ಲಕ್ನೋ: ನವರಾತ್ರಿಯ 9 ನೇ ದಿನ ‘ಮಹಾನವಮಿ’ ಬದಲು ‘ರಾಮ ನವಮಿ’ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಬಿಜೆಪಿ ಲೇವಡಿ ಮಾಡಿದ್ದು ,’ ಹೊಸ ಹಿಂದೂ’ ಎಂದು ಕರೆದಿದೆ.
ಅಖಿಲೇಶ್ ಮಾಡಿದ್ದ ಟ್ವೀಟ್ ಗೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಪ್ರತಿಕ್ರಿಯಿಸಿ, ‘ಹಿಂದೂ ಕ್ಯಾಲೆಂಡರ್‌ನಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ಬರುವ “ಚೈತ್ರ” ಮಾಸದಲ್ಲಿ ರಾಮ ನವಮಿಯನ್ನು ಆಚರಿಸಲಾಗುತ್ತದೆ, ದುರ್ಗಾದೇವಿಯನ್ನು ಪೂಜಿಸುವ ಈ ಅವಧಿಯಲ್ಲಿ ಜನರು “ಮಹಾ ನವಮಿ” ಯನ್ನು ಆಚರಿಸುತ್ತಾ’ರೆ ಎಂದು ಬರೆದಿದ್ದಾರೆ.
‘ಕರಸೇವಕರ ಮೇಲೆ ಗುಂಡು ಹಾರಿಸುವಂತವರು, ಚುನಾವಣಾ ವೇಳೆ ಹಿಂದೂ ಎಂದು ಬಿಂಬಿಸಿಕೊಳ್ಳುತ್ತಾರೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದೆಡೆ ಉತ್ತರ ಪ್ರದೇಶದ ಬಿಜೆಪಿ ಟ್ವೀಟ್ ಮಾಡಿದ್ದು, ಒಂದೆಡೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕನ್ಯಾ ಪೂಜೆಯ ಫೋಟೋ, ಇನ್ನೊಂದೆಡೆ ಅಖಿಲೇಶ್ ಅವರ ಫೋಟೋ ಹಾಕಿ, ವ್ಯತ್ಯಾಸ ನೋಡಿ ಸನಾತನ ಹಿಂದೂ ಮತ್ತು ‘ನಯಾ ಹಿಂದೂ (ಹೊಸ ಹಿಂದೂ)’ ಎಂದು ಬರೆದಿದೆ.
‘ಮಹಾನವಮಿ ಮತ್ತು ರಾಮನವಮಿ ಬಗ್ಗೆ ತಿಳಿಯದವರು ರಾಮ ಮತ್ತು ಪರಶುರಾಮನ ಬಗ್ಗೆ ಮಾತನಾಡುತ್ತಾರೆ. ಜನರಿಗೆ ಟೋಪಿ ಹಾಕಲು ಮುಂದಾಗಬೇಡಿ ಅದು ನಿಮಗೆ ಚೆನ್ನಾಗಿ ಒಪ್ಪುತ್ತದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.