ಕಾಪು: ಕಾಪು – ಶಿರ್ವ ರಸ್ತೆಯ ಚಂದ್ರನಗರದಲ್ಲಿ ಅಕೇಶಿಯಾ ಮರಗಳೆರಡು ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ರಸ್ತೆಗೆ ವಾಲಿ ನಿಂತಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಲೋಕೋಪಯೋಗಿ ರಸ್ತೆಯಲ್ಲಿ ಸಾಗುವಾಗ ಮಜೂರು – ಕಳತ್ತೂರು ಮಧ್ಯೆ ಸಿಗುವ ಚಂದ್ರನಗರ ಬಸ್ ನಿಲ್ದಾಣಕ್ಕಿಂತ ಅನತಿ ದೂರದಲ್ಲಿ ರಸ್ತೆ ಮತ್ತು ಚರಂಡಿಯ ನಡುವೆ ಸಿಲುಕಿಕೊಂಡಂತೆ ಮರ ವಾಲಿಕೊಂಡಿದೆ.
ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಮಾರಣಾಂತಿಕ ಎಂಬಂತೆ ಬೀಸುತ್ತಿರುವ ಗಾಳಿ – ಮಳೆಯ ಅವಾಂತರಕ್ಕೆ ಸಿಲುಕಿ ಮರವೇನಾದರೂ ಉರುಳಿ ಬಿದ್ದರೆ ರಸ್ತೆ, ವಿದ್ಯುತ್ ಕಂಬ ಮತ್ತು ತಂತಿ ಹಾಗೂ ಅದರ ಮುಂಭಾಗದಲ್ಲಿರುವ ಮನೆಗೂ ಹಾನಿಯುಂಟಾಗುವ ಸಾಧ್ಯತೆಗಳಿವೆ. ಇದರಿಂದ ರಸ್ತೆ ಸಂಚಾರಿಗಳಿಗೂ ತೊಂದರೆ ಉಂಟಾಗುವ ಸಾಧ್ಯತೆಗಳಿವೆ.
ಅಚ್ಚರಿ ಮೂಡಿಸಿದ ಕಾಮಗಾರಿ
ಕಾಪು – ಶಿರ್ವ ರಸ್ತೆಯ ವಿಸ್ತರಣೆ ಮತ್ತು ಡಾಮರೀಕರಣ ಕಾಮಗಾರಿಯ ಬಳಿಕ ಮಳೆ ನೀರು ಹರಿಯಲೆಂದು ರಸ್ತೆ
ಪಕ್ಕದಲ್ಲಿ ಚರಂಡಿಯನ್ನು ನಿರ್ಮಿಸಲಾಗಿತ್ತು. ಆದರೆ ಇಲ್ಲಿ ಚರಂಡಿ ಬಿಡಿಸುವ ಸಂದರ್ಭ ಚರಂಡಿಯ ಗುಡ್ಡದಲ್ಲೇ ಬೆಳೆದಿರುವ ಎರಡು ಮರಗಳನ್ನು ಕೂಡಾ ಹಾಗೆಯೇ ಉಳಿಸಿ, ಚರಂಡಿ ನಿರ್ಮಿಸಿರುವುದು ಆಶ್ಚರ್ಯ ಮೂಡಿಸಿದೆ.
ರಸ್ತೆ ಬದಿಯಲ್ಲಿರುವ ಮಣ್ಣಿನ ದಿಬ್ಬದ ಮೇಲೆಯೇ ಮರ ವಾಲಿಕೊಂಡಂತೆ ಇದ್ದರೂ ಅದನ್ನು ಸ್ಥಳೀಯಾಡಳಿತ ಸಂಸ್ಥೆಯಾಗಲೀ, ಗುತ್ತಿಗೆದಾರರು ಮತ್ತು ಲೋಕೋಪಯೋಗಿ ಇಲಾಖೆಯಾಗಲೀ ಇನ್ನೂ ಕೂಡಾ ಗಮನಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.