ಹೊಸದಿಲ್ಲಿ: ತಮ್ಮ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಪಲ್ಲವಿ ಗೊಗೊಯ್ ಎಂಬ ಪತ್ರಕರ್ತೆಯ ವಾದವನ್ನು ತಳ್ಳಿಹಾಕಿರುವ ವಿದೇಶಾಂಗ ಇಲಾಖೆಯ ಮಾಜಿ ಸಹಾಯಕ ಸಚಿವ ಎಂ.ಜೆ. ಅಕ್ಬರ್, ತಾವು ಹಾಗೂ ಪಲ್ಲವಿ ಸಮ್ಮತಿಯ ಮೇರೆಗೆ ಕೆಲ ತಿಂಗಳುಗಳ ಕಾಲ ಸಹಜೀವನ ನಡೆಸಿದ್ದಾಗಿ ತಿಳಿಸಿದ್ದಾರೆ.
ವಾಷಿಂಗ್ಟನ್ ಪೋಸ್ಟ್‌ನ ಶುಕ್ರವಾರದ ಸಂಚಿಕೆಯಲ್ಲಿನ ಲೇಖನವೊಂದರಲ್ಲಿ ಪಲ್ಲವಿ, “ಏಷ್ಯನ್ ಏಜ್ ಪತ್ರಿಕೆಯ ದೆಹಲಿ ಕಚೇರಿಗೆ ಉದ್ಯೋಗಿಯಾಗಿ ಸೇರಿದ್ದಾಗ ನನಗಿನ್ನೂ 23 ವರ್ಷ. ಆಗ ಆ ಪತ್ರಿಕೆಯ ಸಂಪಾದಕರಾಗಿದ್ದ ಅಕ್ಬರ್, ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು. ಇದು ನನ್ನ ಆಪ್ತರಿಗಷ್ಟೇ ಗೊತ್ತು’ ಎಂದು ಉಲ್ಲೇಖೀಸಿದ್ದರು.
ಇದಕ್ಕೆ ಉತ್ತರಿಸಿದ ಅಕ್ಬರ್, “1994ರ ಆಸುಪಾಸಿನಲ್ಲಿ ನಾನು ಹಾಗೂ ಪಲ್ಲವಿ ಸಹಜೀವನ ನಡೆಸಿದ್ದವು. ಇದರಿಂದ ನನ್ನ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಹಾಗಾಗಿ, ನನ್ನ ಹಾಗೂ ಆಕೆಯ ಸಂಬಂಧ ಅಂತ್ಯಗೊಳಿಸಬೇಕಾಯಿತು’ ಎಂದಿದ್ದಾರೆ.
ಅಕ್ಬರ್ ಸ್ಪಷ್ಟನೆ ಹೊರಬಿದ್ದ ಬೆನ್ನಲ್ಲೇ ಅವರ ಪತ್ನಿ ಮಲ್ಲಿಕಾ ಅಕ್ಬರ್ ಕೂಡ ಪ್ರತ್ಯೇಕವಾಗಿ ಪ್ರಕಟಣೆ ನೀಡಿ, ಪಲ್ಲವಿಯವರ ಆರೋಪ ತಳ್ಳಿಹಾಕಿದ್ದಾರೆ. “”ನನ್ನ ಪತಿಯ ಜತೆಗೆ ಸಂಬಂಧದಲ್ಲಿದ್ದಾಗ ಪಲ್ಲವಿ ತಡರಾತ್ರಿಯ ವೇಳೆ ಅಕ್ಬರ್ ಜತೆಗೆ ಫೋನಿನಲ್ಲಿ ಮಾತನಾಡುತ್ತಿದ್ದರು. ಯಾವುದಾದರೂ ಸಾರ್ವಜನಿಕ ಸಮಾರಂಭಗಳಲ್ಲಿ ಅಕ್ಬರ್ ಜತೆಗೆ ಸಲುಗೆ ಯಿಂದ ಇರುತ್ತಿದ್ದರು. ಅವರ ಈ ನಡವಳಿಕೆ ಸಹಜವಾಗಿ ನನ್ನ ಮತ್ತು ಅಕ್ಬರ್ ಅವರ ದಾಂಪತ್ಯದಲ್ಲಿ ಬಿರುಕು ತಂದಿತ್ತು. ಹಿಂದೆ ತಾವೇ ಹಾಗೆ ನಡೆದುಕೊಂಡಿದ್ದ ಪಲ್ಲವಿ ಈಗ ಏಕೆ ಇಂಥ ಆರೋಪ ಮಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ” ಎಂದಿದ್ದಾರೆ.