ಲಕ್ನೋ: ಭೋಜ್ ಪುರಿ ನಟಿ ಆಕಾಂಕ್ಷಾ ದುಬೆ ಪ್ರಕರಣಕ್ಕೆ ಸಂಬಂಧಿಸಿ ಮರಣೋತ್ತರ ಪರೀಕ್ಷೆಯ ವರದಿ ಹೊರ ಬಿದ್ದಿದ್ದು, ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಾರ್ಚ್ 26 ರಂದು ವಾರಣಾಸಿಯ ಹೊಟೇಲ್ ಯೊಂದರಲ್ಲಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ನಟಿಯ ಸಾವಿನ ಹಿಂದೆ ಕುಟುಂಬಸ್ಥರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ನಟಿಯ ತಾಯಿ ತನ್ನ ಮಗಳ ಸಾವಿಗೆ ಭೋಜ್ ಪುರಿ ಗಾಯಕ ಸಮರ್ ಸಿಂಗ್ ಮತ್ತು ಅವರ ಸಹೋದರ ಸಂಜಯ್ ಸಿಂಗ್ ಕಾರಣವೆಂದು ಆರೋಪಿಸಿದ್ದರು. ಇಬ್ಬರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.
ನಟಿಯ ಸಾವಿನ ಮೊದಲು ಮಧ್ಯರಾತ್ರಿ ಕೋಣೆಗೆ ಸಂದೀಪ್ ಸಿಂಗ್ ಎಂಬಾತ ಬಂದಿದ್ದ ಆತ ನಟಿಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿದ್ದ. 17 ನಿಮಿಷಗಳ ಕಾಲ ಇಬ್ಬರು ಜೊತೆಯಾಗಿದ್ದರು.
ಇದೀಗ ನಟಿಯ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ. ಆಕೆಯ ಹೊಟ್ಟೆಯಲ್ಲಿ ಆಹಾರ ಇರಲಿಲ್ಲ. ಅವಳು ಮದ್ಯಪಾನ ಮಾಡಿಲ್ಲ ಮತ್ತು ಮದ್ಯದ ಯಾವುದೇ ಅಂಶಗಳು ಹೊಟ್ಟೆಯಲ್ಲಿ ಕಂಡುಬಂದಿಲ್ಲ. ಆದರೆ ಮೃತರ ಹೊಟ್ಟೆಯಲ್ಲಿ ಅಪರಿಚಿತ ಕಂದು ದ್ರವ ಕಂಡುಬಂದಿದೆ ವರದಿಯಲ್ಲಿ ಉಲ್ಲೇಖವಾಗಿದೆ. 20ml ನಷ್ಟು ಕಂದು ದ್ರವ ಕಂಡು ಬಂದಿದೆ. ಇದರೊಂದಿಗೆ ಆಕೆಯ ಮಣಿಕಟ್ಟಿನಲ್ಲಿ ಗಾಯವಾಗಿರುವ ಗುರುತು ಕೂಡ ಪೋಸ್ಟ್ ಮಾರ್ಟಮ್ ನಲ್ಲಿ ಗೊತ್ತಾಗಿದೆ.
ನಟಿಯ ಹೊಟ್ಟೆಯಲ್ಲಿ ಕಂಡು ಬಂದ ಕಂದು ದ್ರವ ಏನು ಮತ್ತು ಅದೇ ಆಕೆಯ ಸಾವಿಗೆ ಕಾರಣವಾಗಿರಬಹುದು ಆಕೆಯ ಪ್ರಕರಣದ ವಕೀಲ ಹೇಳಿದ್ದಾರೆ.