ಊಟೋಪಚಾರಕ್ಕೆ ನಾವು ಹಲವು ವಿಧದ ಹೋಟೆಲುಗಳು, ಪಂಚತಾರಾ ರೆಸ್ಟೋರೆಂಟ್ ಗಳನ್ನು ಹೊಕ್ಕಿರುತ್ತೇವೆ. ಖಾದ್ಯ ಖಜಾನೆಯ ಸರಣಿಯಲ್ಲಿ ನೀವು ವಿವಿಧ ಬಗೆಯ ಹೋಟೆಲ್, ಚಾಟ್ಸ್, ಕ್ಯಾಂಟೀನ್ ಗಳ ಬಗ್ಗೆ ಓದಿದ್ದೀರಿ. ಇದೀಗ ನಿಮಗೆ ಮತ್ತೊಂದು ಸ್ಥಳವನ್ನು ಪರಿಚಯಿಸುತ್ತಿದ್ದೇವೆ. ಹೋಟೆಲ್ ಗಣೇಶ್ ಪ್ರಸಾದ್ ಇದು ಉಡುಪಿ ಕಾರ್ಕಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಪರ್ಕಳದ ಬಸ್ ನಿಲ್ದಾಣದ ಸಮೀಪವೇ ಇದೆ. ಹಾಗಂತ ಹೋಟೆಲ್ ಗಣೇಶ್ ಪ್ರಸಾದ್ ಅಂತ ಹೇಳಿದರೆ ಎಲ್ಲಿ ಈ ಹೋಟೆಲ್ ಎಂದು ತಡಕಾಡಬೇಕಾಗುತ್ತದೆ. ಇದು ಅಜ್ಜಿ ಮನೆ ಹೋಟೆಲ್ ಎಂದೇ ಫೇಮಸ್.
ಕಳೆದ ಸುಮಾರು 4 ದಶಕಗಳಿಂದ ಅಜ್ಜಿ ಮನೆ ಹೋಟೆಲ್ ಎಂದೇ ಜನಪ್ರಿಯವಾಗಿರುವ ಈ ಹೋಟೆಲ್ ನಲ್ಲಿ ಬಾಳೆ ಎಲೆಯಲ್ಲಿ ಮನೆ ನೀಡುವ ಊಟ ಮನೆ ಅಡುಗೆಯ ರುಚಿಯನ್ನೇ ಗ್ರಾಹಕರು ಸವಿಯಬಹುದಾಗಿದೆ. ಸಾಂಬಾರ್, ರಸಂ, ಹಪ್ಪಳ, ಬಜ್ಜಿ, ತರಕಾರಿ ಪಲ್ಯ, ಉಪ್ಪಿನಕಾಯಿ, ಮಜ್ಜಿಗೆ ಜೊತೆ ಹೊಟ್ಟೆ ತುಂಬುವಷ್ಟು ಕೆಂಪುಅಕ್ಕಿ (ಕುಚ್ಚಲಕ್ಕಿ) ಅಥವಾ ಬೆಳ್ತಿಗೆ ಅನ್ನ ಇಲ್ಲಿ ಸಿಗುತ್ತದೆ.
ಸಾಂಪ್ರದಾಯಿಕ ಎಂಬಂತೆ ಅಜ್ಜಿ ಮನೆಯಲ್ಲಿ ಅಡುಗೆ ಮಾಡಿದಂತೆಯೇ ಈ ಹೋಟೆಲ್ ನಲ್ಲಿಯೂ ಕಟ್ಟಿಗೆ ಉರಿಸಿಯೇ ಅನ್ನ, ಸಾಂಬಾರ್, ತರಕಾರಿ ಬೇಯಿಸುತ್ತಾರೆ. ಕರಾವಳಿಗರಿಗೆ ಪ್ರಿಯವಾದ ಕುಚ್ಚಲಕ್ಕಿ ಅನ್ನ, ತೆಂಗಿನೆಣ್ಣೆ ಬೆರೆಸಿರುವ ಸಾಂಬಾರ್, ರಸಂ ನಿಮ್ಮ ಬಾಯಲ್ಲಿ ನೀರೂರಿಸುವುದು ಖಂಡಿತ. ಅದರಲ್ಲೂ ಸೀಸನ್ ಗೆ ತಕ್ಕಂತೆ ದಕ್ಷಿಣ ಕನ್ನಡದ ವಿಶೇಷ ಖಾದ್ಯಗಳಾದ ಪತ್ರೋಡೆ, ಸಾಂಬ್ರಾಣಿ ಸಾಂಬಾರ್ ಸೇರಿದಂತೆ ಇನ್ನಿತರ ಪಲ್ಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿಗುತ್ತದೆ. ಕಳೆದ 40 ವರ್ಷಗಳಲ್ಲಿ ರುಚಿಯ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಹೇಳುವ ಹೋಟೆಲ್ ಮಾಲಕರು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಊಟೋಪಚಾರ ನೀಡುತ್ತಿದ್ದಾರೆ. ಮನೆ ಊಟದ ರುಚಿ ಸಿಗುವುದರಿಂದ ಅಜ್ಜಿ ಮನೆ ಊಟಕ್ಕಾಗಿಯೇ ಪರ್ಕಳದತ್ತ ಪ್ರತಿನಿತ್ಯ ಹೋಗುವ ಗ್ರಾಹಕರಿದ್ದಾರೆ..ಇನ್ನೇಕೆ ತಡ ನೀವೂ ಒಮ್ಮೆ ಅಜ್ಜಿ ಮನೆಗೆ ಭೇಟಿ ಕೊಡಿ…