2022ರಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದ್ದರೂ ಅಡಿಪಾಯದ ಅನಂತರ ಭವನ ಮೇಲೇಳಲೇ ಇಲ್ಲ. ಕಾಮಗಾರಿಯೂ ಸದ್ಯ ಸ್ಥಗಿತಗೊಂಡಿದೆ.
Advertisement
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯುವಜನರಿಗೆ ಗಾಂಧಿ ವಿಚಾರಧಾರೆ, ಗಾಂಧಿ ಸ್ವತಂತ್ರ್ಯ ಹೋರಾಟ, ಜೀವನ ಶೈಲಿಯನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ಸರಕಾರವು ಸಾರ್ವಜನಿಕ ಜನ ಸಂಪರ್ಕ ಮತ್ತು ವಾರ್ತಾ ಇಲಾಖೆ ಮೂಲಕ ಗಾಂಧಿ ಭವನ ನಿರ್ಮಾಣ ಯೋಜನೆ ಜಾರಿಗೊಳಿಸಿತ್ತು. 3 ಕೋ. ರೂ. ವೆಚ್ಚದಲ್ಲಿ ಈಗಾಗಲೆ ಕೆಲವು ಜಿಲ್ಲೆಗಳಲ್ಲಿ ಭವನ ನಿರ್ಮಾಣಗೊಂಡು ಉದ್ಘಾಟನೆಯೂ ನಡೆದಿದೆ. ಉಡುಪಿಯಲ್ಲಿ ಮಾತ್ರ ಭವನ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದೆ.
ಜಿಲ್ಲಾಡಳಿತ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮತ್ತು ನಿರ್ವಹಣೆ ನಡೆಯಲಿದ್ದು, ಸರಕಾರ ಅನುದಾನ ಬಿಡುಗಡೆ ವಿಳಂಬ ಮಾಡುತ್ತಿರುವುದರಿಂದ ಕಟ್ಟಡ ನಿರ್ಮಾಣ ಕಾರ್ಯ ತಡವಾಗುತ್ತಿದೆ. ಮಳೆ, ಚುನಾವಣೆ ನೀತಿ ಸಂಹಿತೆಯು ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
Related Articles
ಜಿಲ್ಲೆಗೊಂದು ಗಾಂಧಿ ಭವನ ನಿರ್ಮಾಣ ಯೋಜನೆಯಂತೆ ಅಜ್ಜರಕಾಡು ಪಾರ್ಕ್ ಬಳಿ ಗಾಂಧಿ ಭವನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೆ ಅಡಿಪಾಯ ಕಾರ್ಯ ಪೂರ್ಣಗೊಂಡಿದೆ.ಸರಕಾರ ಅನುದಾನ ಬಿಡುಗಡೆಗೆ ವಿಳಂಬ ಮಾಡಿಲ್ಲ. ಶೀಘ್ರದಲ್ಲಿ ಭವನದ ಮುಂದುವರಿದ ಕಾಮಗಾರಿ ನಡೆಯಲಿದೆ. ಗಾಂಧಿ ವಿಚಾರಧಾರೆಗಳನ್ನು ಯುವಜನರಿಗೆ ತಿಳಿಸುವ ಆಶಯವನ್ನು ಈ ಯೋಜನೆ ಹೊಂದಿದೆ.
-ಮಂಜುನಾಥ್, ಸಹಾಯಕ ನಿರ್ದೇಶಕ, ವಾರ್ತಾ ಇಲಾಖೆ
Advertisement
ನಿರ್ಮಿತಿ ಕೇಂದ್ರ ಕಾಮಗಾರಿ ನಿರ್ವಹಣೆ 3 ಕೋ. ರೂ. ವೆಚ್ಚದ ಈ ಭವನ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿಯಲ್ಲೆ ನಿರ್ಮಾಣಗೊಳ್ಳಲಿದೆ. ಕರಾವಳಿ ಸಂಸ್ಕೃತಿ ಬಿಂಬಿಸುವ ಮಾದರಿಯಲ್ಲಿ ಪರಿಸರ ಸ್ನೇಹಿಯಾಗಿ ಮ್ಯೂಸಿಯಂ, ಆರ್ಟ್ ಗ್ಯಾಲರಿ, ಮಹಾತ್ಮ ಗಾಂಧೀಜಿ ಅವರ ಪ್ರತಿಮೆ, ಸಣ್ಣ ಸಭಾಗೃಹ ಇಲ್ಲಿ ನಿರ್ಮಾಣವಾಗಲಿದೆ. ನಿರ್ಮಿತಿ ಕೇಂದ್ರದ ವತಿಯಿಂದ ಈ ಕಟ್ಟಡದ ಕಾಮಗಾರಿ ನಡೆಯಲಿದೆ.