Advertisement

NCP ಯಲ್ಲಿ ಸಂಖ್ಯಾಬಲ ಉಳಿಸಿಕೊಳ್ಳಲು ತೀವ್ರ ಕಸರತ್ತು!

06:23 PM Jul 05, 2023 | Team Udayavani |

ಮುಂಬಯಿ: ಅಜಿತ್ ಪವಾರ್ ಸೇರಿ ಹಲವು ಪ್ರಮುಖರು ಏಕನಾಥ್ ಶಿಂಧೆ ನೇತೃತ್ವದ ಸರಕಾರಕ್ಕೆ ಸೇರಿ ಎನ್ ಡಿಎಗೆ ಬೆಂಬಲ ಸೂಚಿಸಿದ ಬಳಿಕ ಎನ್ ಸಿಪಿ ಯಲ್ಲಿ ಸಂಖ್ಯಾಬಲ ಉಳಿಸಿಕೊಳ್ಳಲು ಕಸರತ್ತು ತೀವ್ರಗೊಂಡಿದೆ. ಕಚ್ಚಾಟದ ನಡುವೆ, ಅಜಿತ್ ಪವಾರ್ ಅವರನ್ನು ಬೆಂಬಲಿಸುವ ಶಾಸಕರನ್ನು ಮುಂಬೈನ ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ. ಆದಾಗ್ಯೂ, ಅಂಕಿಅಂಶಗಳ ಪ್ರಕಾರ, ಪಕ್ಷಾಂತರ ವಿರೋಧಿ ಕಾನೂನನ್ನು ಸೋಲಿಸಲು ಬೇಕಾದ ಶಾಸಕರ ಕೊರತೆ ಅಜಿತ್ ಪವಾರ್‌ಗೆ ಇನ್ನೂ ಇದೆ ಎನ್ನಲಾಗಿದೆ.

Advertisement

ಒಟ್ಟು 53 ಎನ್ ಸಿಪಿ ಶಾಸಕರ ಬೆಂಬಲವನ್ನು ಸಾಬೀತುಪಡಿಸಲು ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಬಣಗಳು ಸೆಣಸಾಡುತ್ತಿರುವ ವೇಳೆ ಬುಧವಾರ ಮುಂಬೈನಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಎರಡು ದೊಡ್ಡ ಸಭೆಗಳು ನಡೆದಿವೆ. ಮಹಾರಾಷ್ಟ್ರ ಸರ್ಕಾರಕ್ಕೆ ಉಪಮುಖ್ಯಮಂತ್ರಿಯಾಗಿ ಸೇರ್ಪಡೆಗೊಂಡ ಅಜಿತ್ ಪವಾರ್ ನೇತೃತ್ವದ ಒಡೆದುಹೋದ ಎನ್‌ಸಿಪಿ ಗುಂಪು ಮುಂಬೈನ ಬಾಂದ್ರಾದಲ್ಲಿ ಸಭೆ ನಡೆಸಿದರೆ, ಶರದ್ ಪವಾರ್ ಬಣದ ಸಭೆ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿ ನಡೆಯಿತು.

42 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿರುವ ಅಜಿತ್ ಪವಾರ್ ಬಣ, 31 ಶಾಸಕರನ್ನು ದೊಡ್ಡ ಶಕ್ತಿ ಪ್ರದರ್ಶನದಲ್ಲಿ ತೋರಿಸಿದೆ. ಮುಂಬೈನ ವೈಬಿ ಚವಾಣ್ ಕೇಂದ್ರದಲ್ಲಿ ಶರದ್ ಪವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಟ್ಟು 13 ಶಾಸಕರು ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಜಿತ್ ಪವಾರ್,”ಶರದ್ ಪವಾರ್ ಕ್ಯಾಂಪ್‌ನಲ್ಲಿರುವ ಕೆಲವು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದ್ದಾರೆ.

”ಅಜಿತ್ ಪವಾರ್ ಗೆ ಏನಾದರೂ ಸಮಸ್ಯೆಗಳಿದ್ದರೆ ನನ್ನೊಂದಿಗೆ ಮಾತನಾಡಬೇಕಿತ್ತು. ಮನಸ್ಸಿನಲ್ಲಿ ಏನಾದರೂ ಇದ್ದರೆ ನನ್ನನ್ನು ಸಂಪರ್ಕಿಸಬಹುದಿತ್ತು” ಎಂದು ಶರದ್ ಪವಾರ್ ತಮ್ಮ ಬಣದ ನಾಯಕರ ಸಭೆಯಲ್ಲಿ ಹೇಳಿದ್ದಾರೆ.

Advertisement

ಎನ್ ಸಿಪಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿ 53 ಶಾಸಕರನ್ನು ಹೊಂದಿದ್ದು, 11 ಶಾಸಕರು ಯಾವುದೇ ಸಭೆಗೆ ಹಾಜರಾಗಿಲ್ಲ.ಅವರು ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಎನ್‌ಸಿಪಿಯ ಪಕ್ಷದ ಹೆಸರು ಮತ್ತು ಚಿಹ್ನೆಯ ಹೋರಾಟವು ಶೀಘ್ರದಲ್ಲೇ ಚುನಾವಣಾ ಆಯೋಗವನ್ನು ತಲುಪಲಿದ್ದು, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಇಂದಿನ ಪ್ರಮುಖ ಸಭೆಯ ನಂತರ ಚುನಾವಣಾ ಆಯೋಗವನ್ನು (ಇಸಿ) ಸಂಪರ್ಕಿಸುವ ಆಯ್ಕೆಯನ್ನು ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಚುನಾವಣಾ ಸಂಸ್ಥೆಗೆ ಕೇವಿಯಟ್ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next