Advertisement

ಫೋರ್ಬ್ಸ್ ನಲ್ಲಿ ಗಮನ ಸೆಳೆದ ಮಂಗಳೂರಿನ ಅಜಿತ್‌ ಪೈ

09:49 AM Jun 17, 2020 | mahesh |

ಮಂಗಳೂರು: ಇ-ಕಾಮರ್ಸ್‌ ಲಾಜಿಸ್ಟಿಕ್‌ ಸೇವೆಯಲ್ಲಿ ಮುಂಚೂಣಿಯಲ್ಲಿರುವ ದಿಲ್ಲಿಯ “ಡೆಲಿವರಿ’ ಹೆಸರಿನ ಕಂಪೆನಿಯ ಚೀಫ್‌ ಆಪರೇಟಿಂಗ್‌ ಆಫೀಸರ್‌(ಸಿಎಫ್‌ಒ) ಆಗಿರುವ ಮಂಗಳೂರಿನ ಅಜಿತ್‌ ಪೈ ಹಾಗೂ ಅವರ ತಂಡವು ದೇಶದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಔಷಧ ಸಹಿತ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಗಮನಾರ್ಹ ಸಾಧನೆ ಮೂಲಕ ಈ ಬಾರಿಯ “ಫೋರ್ಬ್ಸ್ ಇಂಡಿಯಾ’ ಮ್ಯಾಗಜಿನ್‌ನಲ್ಲಿ ಉಲ್ಲೇಖಗೊಂಡು ಗಮನ ಸೆಳೆದಿದೆ.
ಲಾಕ್‌ಡೌನ್‌ ಅವಧಿಯಲ್ಲಿ ಲಾಜಿಸ್ಟಿಕ್‌ ಸೇವೆ ಸಹಿತ ಬಹುತೇಕ ಎಲ್ಲ ಕಂಪೆನಿಗಳ ಕಾರ್ಯ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ, ಇಂತಹ ಕಠಿನ ಸಮಯದಲ್ಲೂ ತಮ್ಮ ಲಾಜಿಸ್ಟಿಕ್‌ ಹಾಗೂ ಇ-ಕಾಮರ್ಸ್‌ ಸೇವೆಯ ಮೂಲಕ ಔಷಧ, ಆಹಾರ ಸಾಮಗ್ರಿ ಸಹಿತ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ನಿರ್ಧಾರವನ್ನು “ಡೆಲಿವರಿ’ ಕಂಪೆನಿ ತೆಗೆದುಕೊಂಡಿತ್ತು.

Advertisement

ಲಾಕ್‌ಡೌನ್‌ ಸಮಯದಲ್ಲೂ ಕಂಪೆನಿಯ 40 ಸಾವಿರ ಉದ್ಯೋಗಿಗಳು ಜನರಿಗೆ ಔಷಧ ಮತ್ತಿತರ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆರಂಭದಲ್ಲಿ ಸ್ಥಳೀಯವಾಗಿ ವಸ್ತುಗಳನ್ನು ಡೆಲಿವರಿ ಮಾಡುತ್ತಿದ್ದ ಈ ಕಂಪೆನಿಗೆ ಅನಂತರ ದೇಶದೆಲ್ಲೆಡೆಯಿಂದ ಬೇಡಿಕೆಗಳು ಹೆಚ್ಚಾಗುತ್ತ ಹೋಯಿತು. ಇದೀಗ ಲಾಕ್‌ಡೌನ್‌ ನಂತರದ ದಿನಗಳಲ್ಲಿಯೂ “ಡೆಲಿವರಿ’ ಕಂಪೆನಿಯ ಲಾಜಿಸ್ಟಿಕ್‌ ವಹಿವಾಟು ಒಂದೇ ಸಮನೆ ವೃದ್ಧಿಸಿದ್ದು, ಫೋರ್ಬ್ಸ್ ಮ್ಯಾಗಜಿನ್‌, ಅಜಿತ್‌ ಪೈ ಮತ್ತು ಅವರ ತಂಡದ ಈ ಸಾಧನೆಯನ್ನು ಉಲ್ಲೇಖೀಸಿ ತನ್ನ ಜುಲೈ ಸಂಚಿಕೆಯಲ್ಲಿ ವರದಿ ಪ್ರಕಟಿಸುತ್ತಿದೆ.

37 ವರ್ಷದ ಅಜಿತ್‌ ಪೈ ಮಂಗಳೂರಿನ ಮಾಡರ್ನ್ ಕಿಚನ್‌ ಖ್ಯಾತಿಯ “ಎಸಿಇ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ನ‌ ಮಾಲಕ ಅಣ್ಣಪ್ಪ ಪೈ-ನಿರ್ಮಲಾ ಪೈ ದಂಪತಿ ಪುತ್ರ. ಕೆನರಾ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಅನಂತರ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು. ಮುಂದೆ ಟಿಸಿಎಸ್‌ ಕಂಪೆನಿಯಲ್ಲಿ ಉದ್ಯೋಗ ಬಳಿಕ ಬೆಂಗಳೂರಿನ ಐಐಎಂ ಸಂಸ್ಥೆಯಲ್ಲಿ ಎಂಬಿಎ ಪದವಿ ಪಡೆದು ಮುಂಬಯಿಯ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು.

ಬೆಂಗಳೂರಿನ ಐಐಎಂನಲ್ಲಿ ಅಜಿತ್‌ ಪೈ ಜತೆ ಓದುತ್ತಿದ್ದ ಸಹಪಾಠಿ ಗಳು ಸೇರಿ ಕೊಂಡು “ಡೆಲಿವರಿ’ ಎನ್ನುವ ಸ್ಟಾರ್ಟ್‌
ಅಪ್‌ ಅನ್ನು 2011ರಲ್ಲಿ ಪ್ರಾರಂಭಿಸಿದ್ದರು. ಈ ಡೆಲಿವರಿ ಕಂಪೆನಿಗೆ ಅಜಿತ್‌ ಪೈ ಅವರು 2013ರಲ್ಲಿ ಸೇರಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. 7 ವರ್ಷಗಳ ಅವಧಿಯಲ್ಲಿ ಅಜಿತ್‌ ಪೈ ಹಾಗೂ ಅವರ ತಂಡವು ತೆಗೆದುಕೊಂಡ ಮಹತ್ವದ ಕ್ರಮ ಹಾಗೂ ಕಾರ್ಯತಂತ್ರಗಳಿಂದ ಕಂಪೆನಿ ಇದೀಗ 2,760 ಕೋಟಿ ರೂ. ಆದಾಯ ಗಳಿಕೆ ಹೊಂದಿರುವುದು ಗಮನಾರ್ಹ. “ಅಜಿತ್‌ ಪೈ ಉನ್ನತ ಹುದ್ದೆಯಲ್ಲಿದ್ದು, ಆತನ ಸಾಧನೆಗೆ ಈಗ ಮನ್ನಣೆ ಲಭಿಸಿರುವುದು ಹೆತ್ತವರಾಗಿ ನಮಗೆ ಹೆಮ್ಮೆ ಹಾಗೂ ಖುಷಿ ತಂದಿದೆ. ಬಾಲ್ಯದಿಂದಲೂ ಅವನು ಬಹಳ ಉತ್ಸಾಹಿ ಹುಡುಗನಾಗಿ ಎಲ್ಲದರಲ್ಲಿಯೂ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಎಂದು ತಂದೆ ಅಣ್ಣಪ್ಪ ಪೈ ನುಡಿದಿದ್ದಾರೆ.

ಸಂತೃಪ್ತಿ ಕೊಟ್ಟಿದೆ: ಅಜಿತ್‌ ಪೈ
ಫೋರ್ಬ್ಸ್ ಮ್ಯಾಗಜಿನ್‌ನಲ್ಲಿ ತಮ್ಮ ಕುರಿತ ಲೇಖನ ಪ್ರಕಟವಾಗುತ್ತಿರುವ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಅಜಿತ್‌ ಪೈ “ಲಾಕ್‌ಡೌನ್‌ ವೇಳೆ, ನಮ್ಮ ಡೆಲಿವರಿ ನೆಟ್‌ವರ್ಕ್‌ನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಔಷಧ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲು ನಮ್ಮ ಕಂಪೆನಿ ತೀರ್ಮಾನಿಸಿತ್ತು. ಇದರಿಂದ ಯಾವುದೇ ಸಂಚಾರ-ಸಾಗಾಟವಿಲ್ಲದ ಸಮಯದಲ್ಲಿಯೂ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಸಾಧ್ಯವಾಗುವ ಮೂಲಕ ಗ್ರಾಹಕರಿಗೆ ನೆರವಾಗಿರುವುದು ನಮಗೆ ಸಂತೃಪ್ತಿ ಕೊಟ್ಟಿದೆ. ಮಂಗಳೂರಿಗನಾಗಿ ಈ ಕುರಿತು ಹೆಮ್ಮೆಪಡುತ್ತೇನೆ’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next