ಪುಂಜಾಲಕಟ್ಟೆ : ಬಹು ಬೇಡಿಕೆಯ, ಮಹತ್ವಾಕಾಂಕ್ಷೆಯ ಅಜಿಲ ಮೊಗರು- ಕಡೇಶಿವಾಲಯ ಸಂಪರ್ಕ ಸೇತುವೆ 31 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಹಟದಡ್ಕದಲ್ಲಿ 1 ಕೋ.ರೂ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಸೇತುವೆ ನಿರ್ಮಾಣದಿಂದ ಇತಿಹಾಸ ಪ್ರಸಿದ್ಧ ಅಜಿಲಮೊಗರು ಮಸೀದಿ ಮತ್ತು ಕಡೇಶಿವಾಲಯ ದೇವಸ್ಥಾನಗಳಿಗೆ ಸಂಪರ್ಕ ಸುಗಮವಾಗುತ್ತದೆ. ಜನತೆಗೆ ಸುತ್ತು ಬಳಸಿ ಸಾಗುವ ಅನನುಕೂಲತೆ ದೂರವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು 36 ಕೋ.ರೂ. ವೆಚ್ಚದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಂತಿಮ ಹಂತದಲ್ಲಿದೆ. ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಈಗಾಗಲೇ ಅಗತ್ಯ ಅನುದಾನಗಳನ್ನು ಒದಗಿಸಿದ್ದು ಇದರೊಂದಿಗೆ ಅಜಿಲಮೊಗರು- ಬಜ-ಬಲಯೂರು ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಸಚಿವರು ಹಟದಡ್ಕ ಕಿರುಹೊಳೆಗೆ 20 ಲ.ರೂ. ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆಯನ್ನು ಉದ್ಘಾಟಿಸಿದರು.
ತಾಲೂಕು ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ. ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲು, ಗ್ರಾ.ಪಂ. ಅಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ, ಸದಸ್ಯರಾದ ಶಿವಪ್ಪ ಪೂಜಾರಿ ಹಟದಡ್ಕ, ಯಶೋದಾ, ಡೆನಿಸ್ ಮೊರಾಸ್, ಜಯಲಕ್ಷ್ಮಿ, ಪ್ರಮುಖರಾದ ನಾರಾಯಣ ರೈ, ಪದ್ಮಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಗ್ರಾ.ಪಂ. ಸದಸ್ಯ ಆದಂ ಕುಂಞಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.