ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಸಪ್ತದಶಾ ಉತ್ಸವ ಮತ್ತು ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಸಮಾರಂಭವು ಆ. 26ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹ, ಬಳಗದ ಗೌರವ ಕಾರ್ಯದರ್ಶಿ ಸ್ವರ್ಗಸ್ಥ ಸುಧಾಕರ ಶೆಟ್ಟಿ ಎಣ್ಣೆಹೊಳೆ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಶ್ರೀ ಕ್ಷೇತ್ರ ಕಟೀಲಿನ ಪದ್ಮನಾಭ ಆಸ್ರಣ್ಣ ಅವರ ಉಪಸ್ಥಿತಿಯಲ್ಲಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಭಾಸ್ಕರ್ ರೈ ಕುಕ್ಕುವಳ್ಳಿ ಅವರಿಗೆ ಯಕ್ಷ ಭಾಸ್ಕರ ಬಿರುದು ಮತ್ತು ಪ್ರಸಿದ್ಧ ಚೆಂಡೆ-ಮದ್ದಳೆ ವಾದಕ ಪ್ರಶಾಂತ್ ಶೆಟ್ಟಿ ವಗೆನಾಡು ಅವರಿಗೆ ಪ್ರಶಾಂತ ಬಿರುದಿನೊಂದಿಗೆ ಯಕ್ಷರಕ್ಷಾ ಪ್ರಶಸ್ತಿ ಹಾಗೂ ಚೆಂಡೆ-ಮದ್ದಳೆ ವಾದಕ ಗಣೇಶ್ ಮಯ್ಯ ವರ್ಕಾಡಿ ಅವರಿಗೆ ಮಾತೆ ಶ್ರೀಮತಿ ಸಂಪಾ ಎಸ್. ಶೆಟ್ಟಿ ಸ್ಮರಣಾರ್ಥ “ಮಾತಾ ಯಕ್ಷರûಾ ಪ್ರಶಸ್ತಿ’ಯನ್ನು ಅತಿಥಿ-ಗಣ್ಯರು ಶಾಲು ಹೊದೆಸಿ, ಸ್ಮರಣಿಕೆ, ಫಲಪುಷ್ಪ, ಸಮ್ಮಾನ ಪತ್ರದೊಂದಿಗೆ ಪ್ರದಾನಿಸಿ ಗೌರವಿಸಿದರು.
ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಆರ್ಚಕ ಶ್ರೀನಿವಾಸ ಎನ್. ಉಡುಪ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಮುಂಡ್ಕೂರು ರತ್ನಾಕರ ಶೆಟ್ಟಿ, ಸಿಎ| ಸುರೇಂದ್ರ ಎ. ಶೆಟ್ಟಿ, ಪ್ರವೀಣ್ ಬಿ. ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಸಿಎ ಸದಾಶಿವ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಂಬಯಿಯ ಪ್ರಸಿದ್ಧ ಭಾಗವತ ಪೊಲ್ಯ ಲಕ್ಷಿ¾àನಾರಾಯಣ ಶೆಟ್ಟಿ ಮತ್ತು ಅರ್ಥಧಾರಿ, ಪ್ರಾಚಾರ್ಯ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣಗೈದರು. ಅಜೆಕಾರು ಬಳಗದ ಸ್ಥಾಪಕಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಆಶಾ ಬಾಲಕೃಷ್ಣ ಶೆಟ್ಟಿ ದಂಪತಿ ಅತಿಥಿಗಳನ್ನು ಸತ್ಕರಿಸಿ ಗೌರವಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ