Advertisement

ಅಜೆಕಾರು: ತೋಡು, ಮೋರಿ, ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿ

12:58 PM Mar 07, 2024 | Team Udayavani |

ಅಜೆಕಾರು: ವಾರಾಹಿ ನೀರಾವರಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿಯು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದು ಕೆಲವು ಪ್ರದೇಶಗಳಲ್ಲಿ ಸ್ಥಳಿಯರಿಗೆ ಸಮಸ್ಯೆ ತಂದೊಡ್ಡಿದೆ.

Advertisement

ಮರ್ಣೆ ಗ್ರಾ.ಪಂ. ವ್ಯಾಪ್ತಿಯ ಜ್ಯೋತಿ ನಗರ, ಮಂಗಳ ನಗರ ಪ್ರದೇಶಗಳಲ್ಲಿ ವಾರಾಹಿ ನೀರಾವರಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ನಡೆಯು ತ್ತಿದ್ದು ರಸ್ತೆಗೆ ಹೊಂದಿಕೊಂಡೇ ಪೈಪ್‌ಲೈನ್‌ ಕಂದಕಗಳನ್ನು ಮಾಡಲಾಗುತ್ತಿದೆ. ಈ ಕಂದಕಗಳಿಗೆ ಪೈಪ್‌ಲೈನ್‌ ಅಳವಡಿಸಿ ಮಣ್ಣು ಮುಚ್ಚಲಾಗುತ್ತದೆಯಾದರೂ ರಸ್ತೆಯ ಅಂಚಿನಲ್ಲಿಯೇ ಕಂದಕಗಳನ್ನು
ಮಾಡಿರುವುದರಿಂದ ಮಳೆಗಾಲದಲ್ಲಿ ಮಣ್ಣು ಕುಸಿತಗೊಂಡು ವಾಹನಗಳ ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಲ್ಲದೆ ಪೈಪ್‌ಲೈನ್‌ ಕಾಮಗಾರಿ ನಡೆಸುವ ವೇಳೆ ರಸ್ತೆಯಂಚಿನ ನೀರು ಹರಿಯುವ ತೋಡುಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಇದರಿಂದಾಗಿ ಮಳೆ ಗಾಲದಲ್ಲಿ ನೀರು ರಸ್ತೆಯಲ್ಲಿಯೇ ಹರಿಯುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಮೋರಿಗೆ ಹಾನಿ
ಪೈಪ್‌ಲೈನ್‌ ಕಾಮಗಾರಿಯಿಂದಾಗಿ ಮಂಗಳಾ ನಗರ ಪ್ರದೇಶದ 2 ಮೋರಿಗಳು ಒಂದು ಪಾರ್ಶ್ವದಲ್ಲಿ ಸಂಪೂರ್ಣ ಹಾನಿಗೀಡಾಗಿದೆ. ಸುಮಾರು ಎರಡು ವರ್ಷಗಳ ಹಿಂದೆಯಷ್ಟೇ ತಲಾ 50 ಸಾ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಎರಡೂ ಮೋರಿಗಳು
ಹಾನಿಯಾಗಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು ಈ ಬಗ್ಗೆ ಸ್ಥಳೀಯಾಡಳಿತ ಕಾಮಗಾರಿ ಗುತ್ತಿಗೆದಾರರಲ್ಲಿ ಮೋರಿ ದುರಸ್ತಿಪಡಿಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಕುಡಿಯುವ ನೀರಿನ ಪೈಪ್‌ಲೈನ್‌ಗೂ ಹಾನಿ
ವಾರಾಹಿ ಪೈಪ್‌ಲೈನ್‌ ಕಾಮಗಾರಿಯಿಂದಾಗಿ ಬೇಸಗೆಯ ಸಮಯದಲ್ಲಿ ನೀರಿನ ಪೈಪ್‌ಲೈನ್‌ಗೂ ಹಾನಿಯಾಗಿದ್ದು ಹಲವಾರು ಪ್ರದೇಶದ ಜನರಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಕಾಡುಹೊಳೆಯಿಂದ ಅಂಡಾರು ಮೂಲಕ ಪೈಪ್‌ ಲೈನ್‌ ಅಳವಡಿಸಲಾಗಿದ್ದು ಈ ಸಂದರ್ಭ ಅಂಡಾರು ಭಾಗದ ಹಲವು ಪ್ರದೇಶಗಳಿಗೆ ಕಳೆದ 10 ದಿನಗಳಿಂದ ಕುಡಿಯುವ ನೀರಿನ ಪೂರೈಕೆಯೇ ಸ್ಥಗಿತಗೊಂಡಿದೆ.

Advertisement

ಬಾವಿಯೇ ಇಲ್ಲದ ಹಲವು ಮನೆಗಳಿಗೆ ವರಂಗ ಪಂಚಾಯತ್‌ ಆಡಳಿತ 2 ದಿನಕ್ಕೊಮ್ಮೆ ಟ್ಯಾಂಕರ್‌ ನೀರು ಒದಗಿಸುತ್ತಿದೆ.
ಬೇಸಗೆಯ ಈ ಸಂದರ್ಭದಲ್ಲಿ ಕುಡಿಯುವ ನೀರಿನ ಸಂಕಷ್ಟ ಎಲ್ಲೆಡೆ ಇದ್ದು ಈ ಸಮಯದಲ್ಲಿಯೇ ವಾರಾಹಿ ಯೋಜನೆಯ ಕಾಮಗಾರಿ ನಡೆಸಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿ ಮಾಡಿರುವ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ರಸ್ತೆಯಂಚಿನಲ್ಲಿಯೇ ಕೆಲವೆಡೆ 10 ಅಡಿಗೂ ಹೆಚ್ಚಿನ ಆಳ ಮಾಡಿದ್ದರೆ, ಕೆಲವೆಡೆ ಸುಮಾರು 5 ಅಡಿ ಆಳದ ಕಂದಕಗಳನ್ನು ಮಾಡಲಾಗಿದ್ದು ಇದರಿಂದ ತೆಗೆದ ಮಣ್ಣು ರಸ್ತೆಯ ಮೇಲೆ ಹರಡಿರುವುದರಿಂದ ಅಜೆಕಾರು ಮಿಯ್ನಾರು ರಾಜ್ಯ ಹೆದ್ದಾರಿ ಹಾಗೂ ಮಂಗಳಾ ನಗರ ರಸ್ತೆ ಮತ್ತು ಕಾಡುಹೊಳೆ ಅಂಡಾರು ರಸ್ತೆ ಸಂಪೂರ್ಣ ಧೂಳಿನಿಂದ ಆವೃತವಾಗಿದೆ.

ಕುಡಿಯುವ ನೀರು, ಬೃಹತ್‌ ನೀರಾವರಿ ಯೋಜನೆಗಳ ಪೈಪ್‌ ಲೈನ್‌ ಕಾಮಗಾರಿ ರಸ್ತೆ ಅಂಚಿನಲ್ಲಿ ಮಾಡುವ ಬದಲಿಗೆ ರಸ್ತೆಯಿಂದ
ಕೆಲವು ಅಡಿಗಳಷ್ಟಾದರೂ ದೂರದಲ್ಲಿ ನಿರ್ಮಿಸಿದಲ್ಲಿ ಸಂಚಾರಕ್ಕೆ ಯಾವುದೇ ಅಪಾಯವಾಗದು. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಕಾಮಗಾರಿಯ ಗುತ್ತಿಗೆದಾರರಿಗೆ ಸೂಚನೆ ನೀಡಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶೀಘ್ರ ಕ್ರಮ ಕೈಗೊಳ್ಳಿ
ಮಳೆಗಾಲದಲ್ಲಿ ಮಳೆ ನೀರು ಹರಿಯಲು ನಿರ್ಮಿಸಲಾದ ಎರಡೂ ಮೋರಿಗಳನ್ನು ವಾರಾಹಿ ಪೈಪ್‌ಲೈನ್‌ ಕಾಮಗಾರಿ ವೇಳೆ
ಹಾನಿಮಾಡಲಾಗಿದ್ದು ಈ ಬಗ್ಗೆ ಸ್ಥಳೀಯಾಡಳಿತ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು.
ರತ್ನಾಕರ ಡಿ. ಮಾಬಿಯಾನ್‌
ಸ್ಥಳೀಯರು, ಮಂಗಳಾ ನಗರ

ಗುತ್ತಿಗೆದಾರರಿಗೆ ಸೂಚನೆ
ವಾರಾಹಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ವೇಳೆ ಮಂಗಳಾ ನಗರ ಪ್ರದೇಶದಲ್ಲಿ ಹಾನಿಯಾದ ಮೋರಿಗಳನ್ನು ಪರಿಶೀಲಿಸಿ
ದುರಸ್ತಿ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು.
ತಿಲಕ್‌ರಾಜ್‌, ಪಿಡಿಒ, ಮರ್ಣೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next