Advertisement

ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಪೈಪ್‌ಲೈನ್‌ ಅವಾಂತರ : ಕುಡಿಯುವ ನೀರು, ಧೂಳಿನ ಸಮಸ್ಯೆ

11:52 AM Mar 02, 2022 | Team Udayavani |

ಅಜೆಕಾರು : ಸುಮಾರು 108 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಅಜೆಕಾರು ಪೇಟೆ ಪರಿಸರದ ಜನತೆಗೆ ಕುಡಿಯಲು ನೀರಿಲ್ಲದಂತಾಗಿರುವ ಜತೆಗೆ ಪೇಟೆ ಧೂಳಿನಿಂದ ಆವೃತವಾಗುವಂತಾಗಿದೆ.

Advertisement

ಏತ ನೀರಾವರಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ಕಳೆದ ಮೂರು ತಿಂಗಳ ಹಿಂದೆ ಅಜೆಕಾರು ಪೇಟೆಯಲ್ಲಿ ನಡೆದಿದ್ದು ಈ ಸಂದರ್ಭ ಮರ್ಣೆ ಪಂಚಾಯತ್‌ನಿಂದ ಪೂರೈಕೆಯಾಗುವ ಕುಡಿಯುವ ನೀರಿನ ಪೈಪ್‌ಲೈನ್‌ ಸಂಪೂರ್ಣ ಹಾನಿಗೊಂಡಿತ್ತು. ಹಾನಿಗೊಳಗಾದ ಕುಡಿಯುವ ನೀರಿನ ಪೈಪ್‌ ದುರಸ್ತಿಯಾಗದ ಪರಿಣಾಮ ಹಲವು ಮನೆಗಳಿಗೆ ಕುಡಿಯುವ ನೀರು ಕಡಿತಗೊಂಡಿದೆ.

ಬೇಸಗೆಯ ಸಂದರ್ಭ ತೆರೆದ ಬಾವಿಗಳಲ್ಲಿ ನೀರಿನ ಮಟ್ಟ ತಳ ಸೇರಿದ್ದು ಪಂಚಾಯತ್‌ ಪೂರೈಕೆ ಮಾಡುವ ನೀರೇ ಆಸರೆಯಾಗಿದೆ. ಇದರಿಂದ ಅಜೆಕಾರು ಪೇಟೆ ಭಾಗದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪೇಟೆಯ ಬಟ್ಟೆ ಅಂಗಡಿ, ಫ್ಯಾನ್ಸಿ ಅಂಗಡಿ, ಬೇಕರಿ, ಹೊಟೇಲ್‌, ಸರಕು ಸಾಮಾನು ಅಂಗಡಿಗಳು ಸೇರಿದಂತೆ ಎಲ್ಲ ಮಳಿಗೆಗಳು ಧೂಳಿನಿಂದ ಆವೃತವಾಗಿ ನಷ್ಟಕ್ಕೀಡಾಗಿವೆ ಎಂದು ವರ್ತಕರು ದೂರಿದ್ದಾರೆ.

ಕಾರ್ಕಳ ತಾಲೂಕಿನ ಅಂತರ್ಜಲ ಸಮಸ್ಯೆ ನಿವಾರಿಸಿ ಕೃಷಿಗೆ ಪೂರಕವಾಗಿ ನೀರು ಪೂರೈಕೆ ಮಾಡುವ ಉದ್ದೇಶದೊಂದಿಗೆ ಪ್ರಾರಂಭವಾದ ಎಣ್ಣೆಹೊಳೆ ಏತ ನೀರಾವರಿ ಯೋಜನೆಯು ಗುತ್ತಿಗೆದಾರರ ನಿರ್ಲಕ್ಷ್ಯ ದಿಂದಾಗಿ ಪೇಟೆ ಪರಿಸರದ ನಾಗರಿಕರು ಸಂಕಷ್ಟ ಪಡಬೇಕಾಗಿದೆ.

Advertisement

ಕುಡಿಯುವ ನೀರು ಪೂರೈಕೆಗೆ ಮನವಿ
ಕಳೆದ ಮೂರು ತಿಂಗಳುಗಳಿಂದ ಕುಡಿ ಯುವ ನೀರಿನ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ಈಗಾಗಲೇ ಪಂಚಾಯತ್‌ ಆಡಳಿತದ ಗಮನಕ್ಕೆ ತರಲಾಗಿದೆ. ಪಂಚಾಯತ್‌ ಆಡಳಿತ ನೀರಾವರಿ ಯೋಜನೆಯ ಗುತ್ತಿಗೆದಾರರಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಸರಿಪಡಿಸಿಕೊಡುವಂತೆ ಸೂಚಿಸಬೇಕೆಂದು ನೀರಿನ ಬಳಕೆದಾರರು ಮನವಿ ಮಾಡಿದ್ದಾರೆ.

ಪಂ. ಕಾಮಗಾರಿಗೆ ಹಾನಿ
ಸುಮಾರು 20 ವರ್ಷಗಳ ಹಿಂದೆ ಅಜೆಕಾರು ಮಾರುಕಟ್ಟೆ ಪ್ರದೇಶದಿಂದ ಹಳೆ ನಾಡ ಕಚೇರಿವರೆಗೆ ನಿರ್ಮಾಣ ಮಾಡಿದ್ದ ಚರಂಡಿ ಸಂಪೂರ್ಣ ಹಾನಿಯಾಗಿದ್ದು ಚರಂಡಿಯ ಇಕ್ಕೆಲಗಳಲ್ಲಿ ಕಟ್ಟಿದ ಕಲ್ಲುಗಳು ರಸ್ತೆ ಅಂಚಿನಲ್ಲಿ, ಚರಂಡಿಯಲ್ಲಿ ಬಿದ್ದಿವೆ. ಚರಂಡಿ ಸಂಪೂರ್ಣ ಹಾನಿಗೊಂಡಿದ್ದು ಚರಂಡಿಯಲ್ಲಿ ಮಣ್ಣು ರಾಶಿ ಬಿದ್ದಿದೆ. ಅಲ್ಲದೆ ಈ ಸಂದರ್ಭ ರಸ್ತೆ ಅಂಚನ್ನು ಅಗೆಯಲಾಗಿದ್ದು ಪೈಪ್‌ ಅಳವಡಿಕೆ ಅನಂತರ ಮಣ್ಣು ತುಂಬಿಸಿ ಹೊಂಡ ಮುಚ್ಚಲಾಗಿದೆ ಹೊರತು ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸದೆ ಇರುವುದರಿಂದ ಅಜೆಕಾರು ಪೇಟೆ ಧೂಳಿನಿಂದ ಆವೃತವಾಗಿದೆ. ಜತೆಗೆ ಈಗಾಗಲೇ ಹಲವು ವಾಹನ ಸವಾರರು ಅಪಘಾತಕೀಡ್ಡಾಗಿ ಆಸ್ಪತ್ರೆ ಸೇರುವಂತಾಗಿದೆ.

ಇದನ್ನೂ ಓದಿ : ದರ ಏರಿಕೆ, ರೂಟ್‌ ಕಡಿತ, ಪ್ರಯಾಣಿಕರ ಕೊರತೆ : ಉಡುಪಿಯಲ್ಲಿ ನರ್ಮ್ ಬಸ್‌ ಕಲೆಕ್ಷನ್‌ ಕುಸಿತ

ಧೂಳಿನಿಂದ ಸಂಕಷ್ಟ
ಏತ ನೀರಾವರಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ವೇಳೆ ಗುತ್ತಿದಾರರು ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ ಅಜೆಕಾರು ಪೇಟೆ ಪರಿಸರದ ಮನೆಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ರಸ್ತೆ ಅಂಚು, ಚರಂಡಿಯನ್ನು ಅಗೆದು ಹಾಕಲಾಗಿದ್ದು ಪೇಟೆ ಧೂಳಿನಿಂದ ಆವೃತವಾಗಿ ವ್ಯಾಪಾರ ನಷ್ಟ ಉಂಟಾಗುವ ಜತೆಗೆ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ತತ್‌ಕ್ಷಣ ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
– ಸತ್ಯೇಂದ್ರ ಕಿಣಿ, ಅಜೆಕಾರು

ಶೀಘ್ರ ನೀರಿನ ವ್ಯವಸ್ಥೆ
ಪೈಪ್‌ಲೈನ್‌ ಕಾಮಗಾರಿಯಿಂದ ನಾಗರಿಕರಿಗೆ ಸಮಸ್ಯೆಯಾಗಿರುವ ಬಗ್ಗೆ ಈಗಾಗಲೇ ಗುತ್ತಿದಾರರ ಗಮನಕ್ಕೆ ತರಲಾಗಿದ್ದು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ತ್ವರಿತವಾಗಿ ಚರಂಡಿ ದುರಸ್ತಿ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು.
-ತಿಲಕ್‌ರಾಜ್‌, ಪಿಡಿಒ, ಮರ್ಣೆ ಗ್ರಾ.ಪಂ.

ಚರಂಡಿ ದುರಸ್ತಿಗೆ ಕ್ರಮ
ಕುಡಿಯುವ ನೀರಿನ ಪೈಪ್‌ ಲೈನ್‌ ಹಾನಿಯಾಗಿ ರುವುದರಿಂದ ಪಂಚಾಯತ್‌ಗೆ ಹೊಸ ಪೈಪ್‌ಗ್ಳನ್ನು ಪೂರೈಕೆ ಮಾಡಲಾಗಿದೆ. ಪೇಟೆಯ ಚರಂಡಿ ದುರಸ್ತಿಗೆ ಶೀಘ್ರ ಕ್ರಮ ಕೈಗೊಂಡು ರಸ್ತೆ ಅಂಚಿಗೆ ಕಾಂಕ್ರೀಟ್‌ ಹಾಕಿ ಕೊಡಲಾಗುವುದು.
– ಚಿರಂಜೀವಿ, ಎಂಜಿನಿಯರ್‌

– ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next