Advertisement

20 ಸಾವಿರ ಹಾಡುಗಳ ಸರದಾರ ಅಜಯ್‌ ವಾರಿಯರ್‌ 

09:36 AM Jan 18, 2018 | Team Udayavani |

ಮಹಾನಗರ: ತಂದೆಗೆ ಮಗ ಸಂಗೀತ ಕಲಿಯಬೇಕೆಂಬ ಆಸೆ. ಮಗನಿಗೆ ಮಾತ್ರ ನಿರಾಸಕ್ತಿ. ಆದರೆ, ತಂದೆ ವಿಜಯದಶಮಿ ದಿನದಂದೇ ಸಂಗೀತಾಭ್ಯಾಸಕ್ಕೆ ಶುಭಾರಂಭ ಹಾಕುತ್ತಾರೆ ಎಂದು ಗೊತ್ತಾದ ತತ್‌ಕ್ಷಣ ಹಿಂದಿನ ದಿನ ಈ ಹುಡುಗ ಚಿಕ್ಕಮ್ಮನ ಮನೆಗೆ ಪರಾರಿ. ರಾತ್ರೋರಾತ್ರಿ ಮನೆಗೆ ಕರೆತಂದು ಬಲವಂತದಿಂದ ತಂದೆ ಮಗನಿಗೆ ಸಂಗೀತಾಭ್ಯಾಸ ಆರಂಭಿಸಿದರು. ಈಗ ಅದೇ ಹುಡುಗ ಹದಿನೇಳು ಭಾಷೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾನೆ ! ಲಕ್ಷಾಂತರ ಸಂಗೀತ ಪ್ರಿಯರ ಮನಗೆದ್ದಿರುವ ಹುಡುಗ ಅಜಯ್‌ ವಾರಿಯರ್‌. ಮೂಲತಃ ಕೇರಳದ ಫಾಲ್ಗಾಟ್‌ ನವರು. ಪ್ರಸ್ತುತ ಬೆಂಗಳೂರಿನಲ್ಲಿ ಪೂರ್ಣಕಾಲಿಕ ಗಾಯಕರಾಗಿದ್ದಾರೆ. ‘ಉದಯವಾಣಿ’ ಮಂಗಳೂರು ಕಚೇರಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಅವರೊಂದಿಗೆ ನಡೆಸಿದ ಕಿರು ಸಂದರ್ಶನ ಇಲ್ಲಿದೆ.

Advertisement

ಗಾಯನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ನೀವು ಬೆಳೆದು ಬಂದ ಬಗೆ? 
ಒಂಬತ್ತು ವರ್ಷದವನಾಗಿದ್ದಾಗ ಒತ್ತಾಯದ ಮೇರೆಗೆ ಶಾಸ್ತ್ರೀಯ ಸಂಗೀತ ಪಾಠಕ್ಕೆ ಹೋಗತೊಡಗಿದೆ. ತಂದೆ ಸೇತುರಾಂ ವಾರಿಯರ್‌ ಅವರೇ ಮೊದಲ ಗುರು. ಸಪ್ತಸ್ವರ ಹೇಳಿಕೊಟ್ಟಿದ್ದೇ ಅವರು. ವಿಜಯದಶಮಿಯ ದಿನದಂದು ಸಂಗೀತಾಭ್ಯಾಸಕ್ಕೆ ಶುಭಾರಂಭ ಮಾಡುವ ಬಗ್ಗೆ ತಂದೆ ಹೇಳಿದರು. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ವಿಜಯದಶಮಿಯ ಹಿಂದಿನ ದಿನವೇ ಹತ್ತಿರದಲ್ಲೇ ಇದ್ದ ಚಿಕ್ಕಮ್ಮನ ಮನೆಗೆ ಪರಾರಿಯಾದೆ. ಇದು ತಂದೆಗೆ ಗೊತ್ತಾಗಿ ಅಲ್ಲಿಗೆ ಬಂದು ಹೇಳದೆ ಎಸ್ಕೇಪ್‌ ಆದದ್ದಕ್ಕೆ ಶಿಕ್ಷೆಯೆನ್ನುವಂತೆ ಮನೆಯವರೆಗೆ ನಡೆಸಿಕೊಂಡೇ ಹೋದರು. ಬಲವಂತವಾಗಿ ಮರುದಿನ ಪಾಠ ಶುರು ಮಾಡಿದರು. ಒತ್ತಾಯದ ಮೇರೆಗೆ ಕಲಿಯತೊಡಗಿದೆ.

ಬಲವಂತದ ಕಲಿಕೆ ಆಸಕ್ತಿಯಾಗಿದ್ದು ಹೇಗೆ?
ನಮ್ಮದು ಅವಿಭಕ್ತ ಕುಟುಂಬ. ಗಂಡು ಮಕ್ಕಳೆಲ್ಲ ಓದಿ ಕೆಲಸ ಹುಡುಕಬೇಕು. ಹೆಣ್ಣು ಮಕ್ಕಳೆಲ್ಲ ಓದಿನೊಂದಿಗೆ ಸಂಗೀತ, ನೃತ್ಯ ಕಲಿಯಬೇಕು ಎಂಬ ಆಸೆ ಹಿರಿಯರದ್ದು… ಸಹೋದರಿಯರು, ಕಸಿನ್ಸ್‌..ಹೀಗೆ ತುಂಬ ಮಂದಿ ಹೆಣ್ಣು ಮಕ್ಕಳಿದ್ದರು. ಮನೆಗೇ ಸಂಗೀತ ಪಾಠ ಹೇಳಲು ಶಿಕ್ಷಕರು ಬರುತ್ತಿದ್ದರು. ಅವರಿಂದ ಒಂದಷ್ಟು ಕಲಿತೆ. ಬಳಿಕ 10ನೇ
ತರಗತಿಯಲ್ಲಿದ್ದಾಗ ಶಿಕ್ಷಕರು ಸಂಗೀತ ಅಕಾಡೆಮಿ ಬಗ್ಗೆ ಹೇಳುತ್ತಿದ್ದಾಗೆಲ್ಲಾ ಏನೋ ಒಂದು ವಿಭಿನ್ನ ಯೋಚನೆ
ಜತೆ ಖುಷಿಯೂ ಉಂಟಾಗುತ್ತಿತ್ತು. ಎಸೆಸ್ಸೆಲ್ಸಿ ಬಳಿಕ ಚೆನ್ನೈಗೆ ಹೋದೆ. ವಿದ್ವಾನ್‌ ಟಿ. ವಿ. ಗೋಪಾಲಕೃಷ್ಣನ್‌ ಅವರಿಂದ ಗುರುಕುಲ ಮಾದರಿಯಲ್ಲಿ ಸಂಗೀತ ಅಭ್ಯಾಸ ಮಾಡಿದೆ. ಒಟ್ಟಿಗೆ ಫ್ಯಾಶನ್‌ ಡಿಸೈನಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪಡೆದೆ. ಸಂಗೀತದ ಬಗ್ಗೆ ಆಸಕ್ತಿ ಮೂಡಿದ್ದೂ ಅಲ್ಲಿಯೇ.

17 ಭಾಷೆಗಳಲ್ಲಿ 20 ಸಾವಿರ ಗೀತೆಗಳನ್ನು ಹಾಡುವುದು ಸುಲಭವಲ್ಲ. ಇಷ್ಟು ಸಣ್ಣ ವಯಸ್ಸಿನಲ್ಲಿ ಈ ಸಾಧನೆ
ಹೇಗೆ ಸಾಧ್ಯವಾಯಿತು?

ಶೈಕ್ಷಣಿಕ ಕಲಿಕೆಯ ಬಳಿಕ ಕೆಲಸಕ್ಕೆ ಸೇರಿದೆ. ರಜಾ ಅವಧಿಯಲ್ಲಿ ನನ್ನದೇ ಹಾಡುಗಳ ಸಿಡಿ ನಿರ್ಮಿಸುತ್ತಿದ್ದೆ. ನನ್ನ ಕ್ರಿಯಾಶೀಲತೆ ಗಮನಿಸಿದ ವಿ. ಮನೋಹರ್‌ ಅವರು, ವರ್ಷಕ್ಕೊಮ್ಮೆ ಸಿಡಿ ಮಾಡಿ ಸುಮ್ಮನಾದರೆ ಅರ್ಥವಿಲ್ಲ. ನನ್ನೊಂದಿಗೆ ಬಂದರೆ ಅವಕಾಶ ನೀಡುವುದಾಗಿ ಹೇಳಿದರು. ಅದೇ ಬದುಕಿನ ಟರ್ನಿಂಗ್‌ ಪಾಯಿಂಟ್‌. 2001 ರ ಜನವರಿ 1ರಂದು ಸಂಗೀತವೇ ನನ್ನ ವೃತ್ತಿ ಕ್ಷೇತ್ರ ಎಂದು ನಿರ್ಧರಿಸಿದೆ. ವಿ. ಮನೋಹರ್‌ ಮತ್ತು ಪ್ರವೀಣ್‌ ಡಿ. ರಾವ್‌ ಅವರು ನನ್ನ ಸಂಗೀತ ಕ್ಷೇತ್ರದ ಗಾಡ್‌ ಫಾದರ್‌ಗಳು. ಅವರ ಮಾರ್ಗದರ್ಶನದಿಂದ ಇದೆಲ್ಲ ಸಾಧ್ಯವಾಯಿತು.

ಅನಾಸಕ್ತಿಯಿಂದಲೋ, ಅವಕಾಶಗಳ ಕೊರತೆಯಿಂದಲೋ ಇತ್ತೀಚೆಗೆ ಯುವಕರಲ್ಲಿ ಸಂಗೀತ ಆಸಕ್ತಿ ಕಡಿಮೆಯಾಗುತ್ತಿದೆಯಲ್ಲವೇ?
ಹಾಗೇನಿಲ್ಲ. ಕರ್ನಾಟಕ ಮತ್ತು ಹಿಂದೂಸ್ತಾನಿ ಕಲಿಕೆಯಲ್ಲಿ ತೊಡಗಿಸಿಕೊಂಡ ಯುವಕರು ಹಲವರಿದ್ದಾರೆ. ಅವಕಾಶಗಳ ಕೊರತೆ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗಿಲ್ಲ. ಮಾಧ್ಯಮಗಳು ರಿಯಾಲಿಟಿ ಶೋಗಳ ಮೂಲಕ ಅವಕಾಶ
ಕಲ್ಪಿಸುತ್ತಿವೆ. ಅವುಗಳ ಬಳಕೆಗೆ ಗಮನ ಹರಿಸಬೇಕಷ್ಟೆ.

Advertisement

ಪಾಶ್ಚಾತ್ಯ ಹಾವಳಿಯಿಂದಾಗಿ ದೇಶೀಯ ಕಲಾ ಸೊಗಡಿಗೆ ಧಕ್ಕೆಯಾಗುತ್ತಿದೆ ಎಂಬ ಕೂಗು ಕಲಾವಿದರಿಂದಲೇ ಕೇಳಿ
ಬರುತ್ತಿದೆಯಲ್ಲ?

ಹಾಗೆ ಹೇಳುವ ಒಂದು ವರ್ಗವಿದೆ. ನನ್ನ ಪ್ರಕಾರ ಭಾರತೀಯ ಸಂಗೀತ ಬಿಟ್ಟು ಪಾಶ್ಚಾತ್ಯ ಸಂಗೀತ ಇಲ್ಲ; ಅದನ್ನು ಬಿಟ್ಟು ಭಾರತೀಯ ಸಂಗೀತವಿಲ್ಲ. ಪ್ರಸ್ತುತ ರಾಕ್‌ ಮ್ಯೂಸಿಕ್‌, ಪಾಪ್‌ ಮ್ಯೂಸಿಕ್‌ನ್ನು ಇಷ್ಟ ಪಡುವ ಜನರೂ ಇರುವುದರಿಂದ ಅವರ ಇಷ್ಟದ ಪ್ರಕಾರ ಕಲಾವಿದ ಪ್ರಸ್ತುತ ಪಡಿಸಬೇಕು. ನಾನು ಭಕ್ತಿಗೀತೆಗಳನ್ನೇ ಜಾಸ್ತಿ ಹಾಡುವುದಾದರೂ, ಸಿನೆಮಾ ಹಾಡು ಹಾಡುವುದೇ ಇಲ್ಲ ಎನ್ನುವುದಕ್ಕಾಗಲ್ಲವಲ್ಲ.

ಯೂಟ್ಯೂಬ್‌, ಸ್ಕೈಪ್‌, ಸಾಮಾಜಿಕ ತಾಣಗಳನ್ನು ನೋಡಿಕೊಂಡು ಹಾಡುಗಾರಿಕೆ ರೂಢಿಸಿಕೊಂಡವರು
ಅನೇಕರಿದ್ದಾರೆ. ಗುರು ಇಲ್ಲದೆ ವಿದ್ಯೆ ಒಲಿಯುವುದೇ?

ಇದು ಖಂಡಿತಾ ತಪ್ಪು. ನನ್ನ ಉದಾಹರಣೆಯನ್ನೇ ಹೇಳುವುದಾದರೆ ತಬಲ ಬಾರಿಸುವುದನ್ನು ನನ್ನಷ್ಟಕ್ಕೆ ಕಲಿತೆ.
ಆದರೆ ಬಳಿಕ ಗುರುಗಳು ಹೇಳಿಕೊಟ್ಟಾಗ ನಾನು ಉಲ್ಟಾ ಬಾರಿಸತೊಡಗಿದೆ. ಅದನ್ನು ಮತ್ತೆ ತಿದ್ದಿಕೊಳ್ಳುವುದು
ತುಂಬ ಕಷ್ಟವಾಯಿತು. ಹಾಗಾಗಿ ಗುರುವಿನ ಮೂಲಕವೇ ಕಲಿತರೆ ಒಳಿತು ಎನ್ನುವುದು ನನ್ನ ಅಭಿಪ್ರಾಯ.

ಹಾಡುಗಾರರಿಗೆ ಕೊಡುವ ಮಹತ್ವ ಪಕ್ಕವಾದ್ಯದವರಿಗೆ ಸಿಗುತ್ತಿದೆಯಾ?
ಹಾಡುಗಾರರಷ್ಟೇ ಅವರೂ ಪ್ರಾಮುಖ್ಯರು. ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಅವರು ತಮ್ಮ ಕಾರ್ಯಕ್ರಮಗಳಲ್ಲಿ ಪ್ರತಿ ಪಕ್ಕವಾದ್ಯ ಕಲಾವಿದರನ್ನೂ ಪರಿಚಯಿಸುತ್ತಿದ್ದರು. ಅವರಿಂದ ಕಲಿತ ನಾನೂ ಅದೇ ರೀತಿ ಮಾಡುತ್ತಿದ್ದೇನೆ. ಪಕ್ಕವಾದ್ಯದವರಿಗೆ ಹಾಡುಗಾರರಷ್ಟೇ ಮಹತ್ವವಿದೆ.

ಆರ್ಥಿಕ ಕಾರಣ, ಗುರುಗಳ ಅಲಭ್ಯತೆಯಿಂದ ಗ್ರಾಮೀಣ ಮಕ್ಕಳಿಗೆ ಆಸಕ್ತಿಯಿದ್ದರೂ ಕಲಿಯಲಾಗುತ್ತಿಲ್ಲ. ಅಂಥವರಿಗೆ ಕಲಾವಿದರಿಂದೇನಾದರೂ ಸಹಾಯವಾಗುತ್ತಿದೆಯೇ?
ರಿಯಾಲಿಟಿ ಶೋಗಳಲ್ಲಿ ಕೆಲವು ಗ್ರಾಮ್ಯ ಭಾಗದ ಮಕ್ಕಳು ತಮ್ಮ ಕಷ್ಟವನ್ನು ಹೇಳಿಕೊಂಡದ್ದನ್ನು ಗಮನಿಸಿದ್ದೇನೆ. ರಿಯಾಲಿಟಿ ಶೋ ಅಥವಾ ಬೇರೆ ಕಾರ್ಯಕ್ರಮಗಳ ಚಿತ್ರೀಕರಣಗಳಿಗೆಲ್ಲ ಹೋದಾಗ ಅಂಥವರನ್ನು ಗುರುತಿಸಿ ಸಹಾಯ ಮಾಡುವ ಕೆಲಸವನ್ನೂ ನಾನೂ ಸೇರಿದಂತೆ ಕೆಲ ಗಾಯಕರು ಮಾಡಿದ್ದಾರೆ. ಕೆಲವರು ಪಾಠ ಹೇಳಿಕೊಡುತ್ತೀರಾ ಎಂದು ಕೇಳಿದ್ದಾರೆ. ಆದರೆ ಒಪ್ಪಿಕೊಂಡ ಮೇಲೆ ನಿಯಮಿತವಾಗಿ ಹೇಳಿಕೊಡಬೇಕು. ನಮಗೆ ನಾನಾ ಊರುಗಳಿಗೆ ಹೋಗಲು ಇರುವುದರಿಂದ ಅದು ಕಷ್ಟ. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಸಿಗದಿರುವ ಬಗ್ಗೆ ನೋವಿದೆ. 

ಜುಂ ಜುಂ ಮಾಯಾ.. ಹಾಡು ಹೆಸರು ಕೊಟ್ಟಿತು
ಕನ್ನಡ, ತಮಿಳು, ತುಳು, ಮಲೆಯಾಳಂ, ತೆಲುಗು, ಹಿಂದಿ, ಮರಾಠಿ, ಲಂಬಾಣಿ, ಕೊಂಕಣಿ, ಸಂಸ್ಕೃತ, ಗಾಳಿ,ಅರೇಬಿಕ್‌ ಸಹಿತ 17 ಭಾಷೆಗಳಲ್ಲಿ ಅಜಯ್‌ ಹಾಡಿದ್ದಾರೆ. ಎಲ್ಲ ರೀತಿಯ ಹಾಡುಗಳಿಗೆ ಧ್ವನಿಯಾಗಿರುವ ಇವರಿಗೆ ಹೆಚ್ಚು ಹೆಸರು ತಂದು ಕೊಟ್ಟಿದ್ದು, ‘ವೀರ ಮದಕರಿ’ ಚಿತ್ರದ ‘ಜುಂ ಜುಂ ಮಾಯಾ..’ ಮತ್ತು ‘ತನನಂ ತನನಂ’ ಚಿತ್ರದ ‘ಕಂಡೆ ಕಂಡೆ ಗೋವಿಂದನಾ..’ ಹಾಡುಗಳು. ಮಂಗಳೂರಿನ ಪರಿಸರ, ಜನರ ಆತ್ಮೀಯತೆ ತುಂಬ ಹಿಡಿಸುತ್ತದೆ. ಇಲ್ಲಿನವರಿಗೆ ಸಂಗೀತದ ಬಗ್ಗೆ ಹೆಚ್ಚಿನ ಪ್ರೀತಿ ಇರುವುದನ್ನು ಕಂಡಿದ್ದೇನೆ ಎನ್ನುತ್ತಾರೆ ಅವರು.

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next