ಒಂದು ಸಿನಿಮಾದ ಗೆಲುವು ಒಬ್ಬ ನಾಯಕ ನಟನಿಂದ ಹಿಡಿದು ಇಡೀ ತಂಡಕ್ಕೆ ದೊಡ್ಡ ಅವಕಾಶಗಳನ್ನೇ ತರುತ್ತದೆ. ಈಗ ಇದೇ ನಿರೀಕ್ಷೆಯೊಂದಿಗೆ ನವನಟರೊಬ್ಬರು ಎದುರು ನೋಡುತ್ತಿದ್ದಾರೆ. ಅದು ಅಜಯ್ ಪೃಥ್ವಿ.
ಯಾರು ಈ ಅಜಯ್ ಪೃಥ್ವಿ ಎಂದರೆ “ನಾಟ್ ಔಟ್’ ಚಿತ್ರದ ಬಗ್ಗೆ ಹೇಳಬೇಕು.”ನಾಟ್ ಔಟ್’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿ ಬಿಡುಗಡೆ ಹಂತಕ್ಕೆ ಬಂದಿದೆ. ಚಿತ್ರ ಜು.19ರಂದು ಬಿಡುಗಡೆಯಾಗುತ್ತಿದೆ. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಮ್ಸುದ್ದೀನ್ ಎ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಂಬರೀಶ್ ಈ ಸಿನಿಮಾ ನಿರ್ದೇಶಕರು.
ನಾಯಕ ಅಜಯ್ ಪೃಥ್ವಿ ಹೀರೋ ಆಗುವ ಮುನ್ನ ವಿದೇಶದಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಈ ಕುರಿತು ಮಾತನಾಡುವ ಅಜಯ್, “ನಾನು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಐದನೇ ತರಗತಿಯಿಂದಲೇ ಬಿಂಬ ಮೂಲಕ ಸಾಕಷ್ಟು ಕಲಿತೆ. ನಂತರ ಪ್ರಸಿದ್ಧ ತರಬೇತಿ ಶಾಲೆಯಲ್ಲಿ ನಟನೆ ಕೂಡ ಕಲಿತೆ’ ಎನ್ನುತ್ತಾರೆ.
ಅಜಯ್ ಈಗಾಗಲೇ “ಪುರುಷೋತ್ತನ ಪ್ರಸಂಗ’ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದಲ್ಲಿನ ಇವರ ನಟನೆಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಇನ್ನು, ನಾಟ್ ಔಟ್ ಚಿತ್ರದಲ್ಲಿ ಅಜಯ್ ಅಂಬ್ಯುಲೆನ್ಸ ಡ್ರೈವರ್ ಆಗಿ ಕಾಣಿಸಿಕೊಂಡಿದ್ದು, ಇಡೀ ಪಾತ್ರ ಪೋಷಣೆಯೇ ಬೇರೆ ತರಹ ಇದೆ. ರೆಗ್ಯುಲರ್ ಜಾನರ್ ಬಿಟ್ಟು ಮಾಡಿರುವ ಸಿನಿಮಾದಾಗಿರುವುದರಿಂದ ಈ ಸಿನಿಮಾ ಮೇಲೆ ಇಡೀ ತಂಡ ವಿಶ್ವಾಸವಿಟ್ಟಿದೆ. ಅದಕ್ಕೆ ಪೂರಕವಾಗಿ ಸಿನಿಮಾದ ಟ್ರೇಲರ್ ಕೂಡಾ ಹಿಟ್‌ಲಿಸ್ಟ್ ಸೇರಿದೆ. ಚಿತ್ರದ ತಮ್ಮ ಪಾತ್ರವನ್ನು ಪೃಥ್ವಿ ಎಲ್ಲಾ ಅಂಬ್ಯುಲೆನ್ಸ್ ಚಾಲಕರಿಗೆ ಅರ್ಪಿಸುತ್ತಾರೆ.
ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, “ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪು ನಾಟ್ ಔಟ್. ಪ್ರತಿ ಆಟದಲ್ಲಿ ಒಬ್ಬ ಅಂಪೈರ್ ಇರ್ತಾನೆ. ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರ್ತಾನೆ.. ಈ ಚಿತ್ರದಲ್ಲಿ ಹುಲಿ – ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಆಡುತ್ತಾರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತೆ. ಆಟದಲ್ಲಿ ಬೆಟ್ಟದ ತುದಿಯಲ್ಲಿರುವ ಹುಲಿಗಳು ಮತ್ತು ಬೆಟ್ಟದ ತಳದಲ್ಲಿರುವ ಕುರಿಗಳು ಬೆಟ್ಟವನ್ನು ಹತ್ತುವಾಗ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳು ಆಟದಲ್ಲಿ ಇದ್ದಂತೆ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಅದನ್ನ ನೋಡಬಹುದು’ ಎನ್ನುವುದು ತಂಡದ ಮಾತು.