ಈ ಹಿಂದೆ “ಚಮಕ್’, ‘ಅಯೋಗ್ಯ’ ಹಾಗೂ “ಬೀರ್‌ಬಲ್’ ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ಇದೀಗ ಸದ್ದಿಲ್ಲದೆ ತಮ್ಮ ಹೊಸಚಿತ್ರದ ಕೆಲಸವನ್ನು ಶುರು ಮಾಡಿದ್ದಾರೆ.
“ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸದ್ಯ ಪ್ರೊಡಕ್ಷನ್ ನಂಬರ್-7 ಎಂದು ವರ್ಕಿಂಗ್ ಟೈಟಲ್ ಇಡಲಾಗಿದ್ದು, ಶ್ರೀರಾಮ ನವಮಿ ಹಬ್ಬದ ಸಂದರ್ಭದಲ್ಲಿ ನಿರ್ಮಾಪಕರು ತಮ್ಮ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ಅಜೇಯ್ ರಾವ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಜೇಯ್ ರಾವ್ ಸಿನಿ ಕೆರಿಯರ್‌ನ 25ನೇ ಚಿತ್ರ “ತಾಯಿಗೆ ತಕ್ಕ ಮಗ’ ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದಿತ್ತು.
ಆದರೆ ಚಿತ್ರ ಬಿಡುಗಡೆಯ ನಂತರ ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಗೆಲುವು ಕಾಣದೆ ಚಿತ್ರ ತಣ್ಣಗಾಯಿತು. ಅದಾದ ನಂತರ ಅಜೇಯ್ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಈ ಚಿತ್ರದಲ್ಲಿ “ತಾಯಿಗೆ ತಕ್ಕ ಮಗ’ನ ಗೆಟಪ್ ಹೇಗಿರಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ನವ ಪ್ರತಿಭೆ ಬಿ. ತಿಮ್ಮೇಗೌಡ ಜಾಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು ಉಳಿದ ಕಲಾವಿದರು ಮತ್ತು ತಂತ್ರಜ್ಞರ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.