ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ಮುಖಂಡ ಅಜಯ್ ಮಕೇನ್ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಗುರುವಾರ ಸಂಜೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪಿಸಿ ಚಾಕೋ ಮತ್ತು ಅಜಯ್ ಮಕೇನ್ ಮಾತುಕತೆ ನಡೆಸಿದ್ದರು. ಏತನ್ಮಧ್ಯೆ ರಾಹುಲ್ ಗಾಂಧಿ, ಮಕೇನ್ ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ವರದಿ ತಿಳಿಸಿದೆ.
ಅನಾರೋಗ್ಯದ ಕಾರಣ ನೀಡಿ ಅಜಯ್ ಮಕೇನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 54 ವರ್ಷದ ಮಕೇನ್ 2015ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನ್ನನುಭವಿಸಿದ ಬಳಿಕ ಮಕೇನ್ ಅವರನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಲಾಗಿತ್ತು.
ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಕಾರ್ಯಕರ್ತರು ಹಾಗೂ ಮಾಧ್ಯಮದವರಿಗೆ ಮಕೇನ್ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದರು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಅಜಯ್ ಮಕೇನ್ ರಾಜೀನಾಮೆ ನೀಡಿದ್ದಾರೆಂಬ ವರದಿಯನ್ನು ಕಾಂಗ್ರೆಸ್ ಅಲ್ಲಗಳೆದಿತ್ತು.
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತನಗೆ ಜವಾಬ್ದಾರಿ ವಹಿಸಿದರೆ ಅದನ್ನು ನಿಭಾಯಿಸಲು ಸಿದ್ಧ ಎಂದು ಕಳೆದ ವರ್ಷ ಅಭಿಪ್ರಾಯವ್ಯಕ್ತಪಡಿಸಿದ್ದರು. ದೆಹಲಿಯಲ್ಲಿ ಪಕ್ಷವನ್ನು ಮುನ್ನಡೆಸಿ ಎಂದು ಹೈಕಮಾಂಡ್ ಹೇಳಿದರೆ ನಾನು ಅದಕ್ಕೆ ಇಲ್ಲ ಎಂದು ಹೇಳಲಾರೆ ಎಂದು ತಿಳಿಸಿದ್ದರು.