ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಅಜಯ್ ಮಕೇನ್ ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಬುಧವಾರ (ನವೆಂಬರ್ 16) ರಾಜೀನಾಮೆ ನೀಡಿದ್ದು, ಇದರಿಂದಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್ ದೊಡ್ಡ ಹಿನ್ನಡೆಯಾದಂತಾಗಿದೆ. ತಾನು ಈ ಸ್ಥಾನದಲ್ಲಿ ಮುಂದುವರಿಯಲು ಇಚ್ಛಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಕೋಲಾರ ಕಡೆ ಮುಖಮಾಡಿದ ಸಿದ್ದುಗೆ ಸಿಕ್ಕಿದ್ದೇ ಶ್ರೀಪಾದ : ಯತ್ನಾಳ್
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಂತರ ರಾಜಸ್ಥಾನದಲ್ಲಿ ನೂತನ ನಾಯಕನನ್ನು ನೇಮಿಸಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡುವ ಒಂದು ಸಾಲಿನ ನಿರ್ಣಯ ಅಂಗೀಕರಿಸುವ ಶಾಸಕರ ಸಭೆಯನ್ನು ಕರೆಯಲು ಮಕೇನ್ ವಿಫಲರಾಗಿದ್ದರು. ಈ ಸಂದರ್ಭದಲ್ಲಿ ಅಶೋಕ್ ಗೆಹ್ಲೋಟ್ ಪಕ್ಷದ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿ ಎಂದು ಪರಿಗಣಿಸಲಾಗಿತ್ತು. ಅಲ್ಲದೇ ಈ ಬಗ್ಗೆ ಗೆಹ್ಲೋಟ್ ಪರ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಮಕೇನ್ ಅಸಮಾಧಾನಕ್ಕೆ ಕಾರಣವಾಗಿತ್ತು.
ಆದರೆ ನಂತರ ನಡೆದ ಬೆಳವಣಿಗೆಯಲ್ಲಿ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆಹ್ವಾನದಿಂದ ಹಿಂದೆ ಸರಿದಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಮಕೇನ್ ಖರ್ಗೆ ಅವರಿಗೆ ನವೆಂಬರ್ 8ರಂದು ಬರೆದಿರುವ ಒಂದು ಪುಟದ ಪತ್ರದಲ್ಲಿ ಕಾರಣಗಳನ್ನು ನೀಡಿರುವುದಾಗಿ ವರದಿ ವಿವರಿಸಿದೆ.
ನಿರ್ಣಯ ಅಂಗೀಕರಿಸಲು ವಿಫಲರಾಗಿರುವುದಕ್ಕೆ ಗೆಹ್ಲೋಟ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದು, ತಾನು ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಸೋನಿಯಾ ಗಾಂಧಿ ಜತೆಗಿನ ಮಾತುಕತೆ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.
ಮುಂದಿನ ತಿಂಗಳು ರಾಜಸ್ಥಾನಕ್ಕೆ ಭಾರತ್ ಜೋಡೋ ಯಾತ್ರೆ ಆಗಮಿಸಲಿದ್ದು, ಆದಷ್ಟು ಶೀಘ್ರದಲ್ಲಿ ನೂತನ ಉಸ್ತುವಾರಿ ನೇಮಕ ಮಾಡಬೇಕಾಗಿದೆ ಎಂದು ಮಕೇನ್ ತಿಳಿಸಿದ್ದಾರೆ.