Advertisement

ನಾಳೆ ದಾವಣಗೆರೆಯಲ್ಲಿ ಚಿತ್ರಸಂತೆ: ಅಜಯ್‌ ಕುಮಾರ್‌

05:30 PM Apr 16, 2022 | Team Udayavani |

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ಬೆಂಗಳೂರು ಮಾದರಿಯಲ್ಲಿ ಏ. 17 ರಂದು ಎ.ವಿ. ಕಮಲಮ್ಮ ಮಹಿಳಾ ಕಾಲೇಜು ರಸ್ತೆಯಲ್ಲಿ ಚಿತ್ರಸಂತೆ ಏರ್ಪಡಿಸಲಾಗಿದೆ ಎಂದು ದಾವಣಗೆರೆ ಚಿತ್ರಕಲಾ ಪರಿಷತ್ತು ಅಧ್ಯಕ್ಷ, ಮಾಜಿ ಮೇಯರ್‌ ಬಿ.ಜಿ. ಅಜಯ್‌ ಕುಮಾರ್‌ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಮೊದಲ ಬಾರಿಗೆ ದಾವಣಗೆರೆಯಲ್ಲಿ ಚಿತ್ರಸಂತೆ ಏರ್ಪಡಿಸಲಾಗಿದೆ. ಎ.ವಿ. ಕ ಮಲಮ್ಮ ಕಾಲೇಜು ರಸ್ತೆಯುದ್ದಕ್ಕೂ 250-300 ಮಳಿಗೆಗಳಲ್ಲಿ ಕಲಾವಿದರ ಚಿತ್ರಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೊರ ಜಿಲ್ಲೆ, ರಾಜ್ಯಗಳ ಪ್ರಖ್ಯಾತ ಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವರು ಎಂದರು.

ವಿಶೇಷ ಚಿತ್ರಸಂತೆಯ ಅಂಗವಾಗಿ ಶನಿವಾರ ಬೆಳಗ್ಗೆ 9.30ಕ್ಕೆ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಹಂದರಗಂಬ ಪೂಜೆ ನೆರವೇರಿಸುವರು. ಭಾನುವಾರ ಬೆಳಗ್ಗೆ 10.30ಕ್ಕೆ ಜೆ.ಎಚ್. ಪಟೇಲ್‌ ವೇದಿಕೆಯಲ್ಲಿ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಚಿತ್ರಸಂತೆ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಶಾಮನೂರು ಶಿವಶಂಕರಪ್ಪ, ಪ್ರೊ| ಎನ್‌. ಲಿಂಗಣ್ಣ, ಮೇಯರ್‌ ಆರ್‌. ಜಯಮ್ಮ ಗೋಪಿನಾಯ್ಕ, ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌ ಇತರರು ಭಾಗವಹಿಸುವರು ಎಂದು ತಿಳಿಸಿದರು.

ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವಂತಹ ಕಲಾವಿದರಿಗೆ ವಿವಿಧೆಡೆ ವಸತಿ, ತಿಂಡಿ, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿ ಮತ್ತು ಸಾಮಾನ್ಯ ವಿಭಾಗದಲ್ಲಿ ಅತ್ಯುತ್ತಮ ಮೂರು ಚಿತ್ರಗಳಿಗೆ 5,3,2 ಸಾವಿರ ನಗದು ಬಹುಮಾನ ನೀಡಲಾಗುವುದು. ಬೇರೆ ಯಾವುದೇ ಚಿತ್ರಸಂತೆಯಲ್ಲಿ ಬಹುಮಾನ ನೀಡುವುದಿಲ್ಲ. ದಾವಣಗೆರೆಯಲ್ಲಿ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಗದು ಬಹುಮಾನ ನೀಡಲಾಗುತ್ತಿದೆ ಎಂದು ತಿಳಿಸಿದರು. ಚಿತ್ರಕಲೆ ಹಾಗೂ ಕಲಾವಿದರಿಗೆ ಬಲ ತುಂಬುವುದಕ್ಕಾಗಿ ಚಿತ್ರಕಲಾ ಪರಿಷತ್ತು ಪ್ರಾರಂಭಿಸಲಾಗಿದೆ. ಕಲಾವಿದರಿಗೆ ಉದ್ಯೋಗ, ಕಲೆಗೆ ಮಾರುಕಟ್ಟೆ, ಸಾರ್ವಜನಿಕರಲ್ಲಿ ಚಿತ್ರಕಲೆಯ ಬಗ್ಗೆ ಸಂವೇದನೆ, ಜಾಗೃತಿ ಮೂಡಿಸುವ ಕೆಲಸವನ್ನು ಚಿತ್ರಕಲಾ ಪರಿಷತ್ತು ನಡೆಸಲಿದೆ. ಹೆಚ್ಚಿನ ಜನ ಆಗಮಿಸಿ, ಚಿತ್ರಗಳನ್ನು ನೋಡಿ, ಖರೀದಿಸುವ ಮೂಲಕ ಕಲಾವಿದರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಚಿತ್ರಕಲಾ ಪರಿಷತ್‌ ಕಾರ್ಯದರ್ಶಿ ಡಿ. ಶೇಷಾಚಲ್‌, ಖಜಾಂಚಿ ರವಿ ಹುದ್ದಾರ್‌, ವಿಜಯ್‌ ಜಾಧವ್‌, ಶಂಕರಯ್ಯ ಪರಡಿಮಠ್, ಕಿರಣ್‌ಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next