ರಾಯಚೂರು: ದೇಶದ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ, ಸಮಸ್ಯೆಗಳ ನಿವಾರಣೆಗೆ ಹಾಗೂ ದೇಶದ ಪ್ರತಿ ಮಗುವಿಗೂ ಸಮಾನ ಶಿಕ್ಷಣ ಸಿಗಬೇಕು ಎಂಬ ಮಹೋನ್ನತ ಧ್ಯೆಯದೊಂದಿಗೆ ಉತ್ಸಾಹಿ ವಿದ್ಯಾರ್ಥಿಗಳು ಪ್ರಾರಂಭಿಸಿದ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಸಂಘಟನೆ ಇಂದು ಎಲ್ಲ ರಾಜ್ಯಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಸಂಘಟನೆ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ಕಾಲೇಜನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕ ಹಾಗೂ ಭಗತ್ ಸಿಂಗ್ ಅವರ 114ನೇ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ರಾಯಚೂರು ಮತ್ತು ಯಾದಗಿರಿ ವಲಯ ಮಟ್ಟದ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸತತವಾಗಿ 7 ದಶಕಗಳಿಂದ ನಮ್ಮ ಸಂಘಟನೆ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳನ್ನು ಸಂಘಟಿಸುತ್ತಾ ಸಾವಿರಾರು ಐತಿಹಾಸಿಕ ಹೋರಾಟಗಳನ್ನು ಕಟ್ಟಿದೆ. ಸಕ್ರಿಯವಾಗಿ ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದೆ. ಬಡತನ, ಅಸಮಾನತೆ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ. ಹಾಗೂ ಕೋಮು ವೈಷಮ್ಯವಿಲ್ಲದ ಭಾರತದ ನಿರ್ಮಿಸುವುದು ಭಗತ್ ಸಿಂಗ್, ನೇತಾಜಿ ಸುಭಾಷ ಚಂದ್ರ ಬೋಸ್‌ರಂಥ ಮಹಾತ್ಮರ ಕನಸಾಗಿತ್ತು. ಈ ಕನಸು ನನಸು ಮಾಡುವುದೇ ನಮ್ಮ ಸಂಘಟನೆ ಗುರಿ ಎಂದರು.
ಸರ್ಕಾರಗಳು, ವಿಶ್ವವಿದ್ಯಾಲಯಗಳು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಪರೀಕ್ಷೆ ನಡೆಸಲು ಮುಂದಾದಾಗ, ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರಬೇಡಿ. ಎಲ್ಲ ವಿದ್ಯಾರ್ಥಿಗಳಿಗೂ ಲಸಿಕಿ ಆದ ನಂತರವೇ ಆಫ್‌ಲೈನ್ ತರಗತಿ ನಡೆಸಿ ಎಂಬ ಹೋರಾಟ ಮೆಚ್ಚುಗೆ ಪಡೆಯಿತು. ಹೋರಾಟಕ್ಕೆ ಮಣಿದು ಯುಜಿಸಿ ನೂತನ ಪರೀಕ್ಷಾ ಮಾರ್ಗಸೂಚಿ ಪ್ರಕಟಿಸಿತ್ತು. ನಮ್ಮ ಹಲವಾರು ಶಿಕ್ಷಣ ತಜ್ಞರು ಹಾಗೂ ಸಮಾಜ ಸುಧಾರಕರು, ಶಿಕ್ಷಣದ ಪ್ರತಿಯೊಬ್ಬರಿಗೂ ಸಿಗಬೇಕು ಮತ್ತು ಆ ಶಿಕ್ಷಣವು ವೈಜ್ಞಾನಿಕ, ಧರ್ಮನಿರಪೇಕ್ಷವಾಗಿರಬೇಕು ಎಂದು ಪ್ರತಿಪಾದಿಸಿದ್ದರು.
ಆದರೆ, ಇಂದು ಕ್ರಮೇಣ ಶಿಕ್ಷಣ ಉಳ್ಳವರ ಪಾಲಾಗುತ್ತಿದೆ. ವ್ಯಕ್ತಿತ್ವ ನಿರ್ಮಿಸುವ ಉದ್ದೇಶದಿಂದ ದೂರವಾಗಿ ಕೇವಲ ಸರ್ಟಿಫಿಕೇಟ್‌ಗಾಗಿ, ಅಂಕಗಳಿಕೆಗಾಗಿ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮಹೇಶ್ ಚೀಕಲಪರ್ವಿ ಮಾತನಾಡಿದರು. ರಾಜ್ಯ ಘಟಕದ ಸದಸ್ಯರಾದ ಮುಖಂಡರಾದ ವೆಂಕಟೇಶ್ ದೇವದುರ್ಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪೀರಸಾಬ್, ಅಪೂರ್ವ, ರಮೇಶ ದೇವಕರ್ ಸೇರಿ ಇತರರಿದ್ದರು.