ಮುಂಬಯಿ : ಭಾರತ – ಚೀನ ನಡುವೆ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಮಡಿದ ಭಾರತೀಯ ಯೋಧರ ಕಥೆಯನ್ನು ತೆರೆ ಮೇಲೆ ತರುವ ಅಧಿಕೃತ ಘೋಷಣೆ ಮಾಡಿದ್ದಾರೆ ನಟ- ನಿರ್ಮಾಪಕ ಅಜಯ್ ದೇವಗನ್.
ಅಜಯ್ ದೇವಗನ್ ಈ ಹಿಂದೆ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಂದಿನ ಚಿತ್ರ ಭುಜ್ : ದಿ ಪ್ರೆಡ್ ಆಫ್ ಇಂಡಿಯಾ ಚಿತ್ರ ಓಟಿಟಿಯಲ್ಲಿ ಬಿಡುಗಡೆಗೆ ಸಿದ್ದವಾಗಿರುವಾಗಲೇ ಅಜಯ್ ದೇವಗನ್ ಗಾಲ್ವಾನ್ ಕಣಿವೆಯಲ್ಲಿ ಮಡಿದ ಯೋಧರ ಪಯಣವನ್ನು ದೃಶ್ಯ ರೂಪದಲ್ಲಿ ತೆರೆ ಮೇಲೆ ತರುವ ಚಿಂತನೆ ನಡೆಸಿದ್ದಾರೆ.
ನೈಜ ಘಟನೆಯಧಾರಿತ ಚಿತ್ರದಲ್ಲಿ ಚೀನಾದ ಯೋಧರಿಂದ ಮಡಿದ 20 ಭಾರತೀಯ ಯೋಧರ ಕತೆಯಿರಲಿದೆ. ಕಲಾವಿದರು ಹಾಗೂ ಪಾತ್ರವರ್ಗದ ಆಯ್ಕೆ ಹಾಗೂ ಚಿತ್ರದ ಹೆಸರು ಇನ್ನಷ್ಟೇ ಅಂತಿಮವಾಗಬೇಕಿದೆ. ಚಿತ್ರದಲ್ಲಿ ಸ್ವತಃ ಅಜಯ್ ದೇವಗನ್ ಬಣ್ಣ ಹಚ್ಚಲಿದ್ದಾರ ಎನ್ನುವುದು ಸ್ಪಷ್ಟನೆ ಸಿಕ್ಕಿಲ್ಲ. ಚಿತ್ರವನ್ನು ಅಜಯ್ ದೇವಗನ್ ಫಿಲ್ಮ್ಸ್ ಹಾಗೂ ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ಸ್ ಜಂಟಿಯಾಗಿ ನಿರ್ಮಾಣ ಮಾಡಲಿದೆ ಎಂದು ವರದಿಯಾಗಿದೆ.
ಜೂನ್ 15 ರಂದು ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಗಡಿ ವಿಚಾರಕ್ಕೆ ಸಂಬಂದಿಸಿದಂತೆ ಮಾತುಕತೆಗೆ ತೆರಳಿದ್ದ ಭಾರತೀಯ ಸೈನಿಕರ ಮೇಲೆ ಚೀನ ಯೋಧರು ಏಕಾಏಕಿ ಕಲ್ಲು,ದೊಣ್ಣೆಗಳಿಂದ ದಾಳಿ ನಡೆಸಿದ್ದರು.ಇದರ ಪರಿಣಾಮವಾಗಿ 20 ಮಂದಿ ಯೋಧರು ಹುತಾತ್ಮರಾಗಿದ್ದು,ಹಲವು ಸೈನಿಕರು ಗಾಯಗೊಂಡಿದ್ದರು.