ಮುಂಬಯಿ: 2019-20ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 17 ಭಾರತೀಯ ಪ್ರವಾಸಿ ತಾಣಗಳನ್ನು ವಿಶ್ವ ದರ್ಜೆಯ ತಾಣವಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ. ಈ ಸ್ಥಳಗಳಲ್ಲಿ ಮಹಾರಾಷ್ಟ್ರದ ಅಜಂತಾ-ಎಲ್ಲೋರಾ ಗುಹೆಗಳು ಕೂಡ ಸೇರಿವೆ ಎಂದು ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಜಂತಾ-ಎಲ್ಲೋರಾ ಸೇರಿದಂತೆ 17 ಪ್ರತಿಷ್ಠಿತ ಪ್ರವಾಸಿ ತಾಣಗಳನ್ನು ವಿಶ್ವ ದರ್ಜೆಯ ತಾಣವಾಗಿ ರೂಪಿಸಲು “ಮಾಸ್ಟರ್ ಪ್ಲಾನ್’ ಒಂದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಅಜಂತಾ-ಎಲ್ಲೋರಾದ ಗುಹೆಗಳು ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಆಧಾರದ ಮೇಲೆ ಇದನ್ನು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ಗುರುತಿಸಲು ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಈ ಯೋಜನೆಯ ಮೇಲೆ ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ), ಕೇಂದ್ರ ಮತ್ತು ರಾಜ್ಯ ಸರಕಾರ ಒಟ್ಟಾಗಿ ಕೆಲಸ ಮಾಡಲಿವೆ. ಅಜಂತಾ-ಎಲ್ಲೋರಾ ಸೇರಿದಂತೆ 17 ತಾಣಗಳನ್ನು ವಿಶ್ವ ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಏಜೆನ್ಸಿಯಿಂದ “ಮಾಸ್ಟರ್‌ಪ್ಲಾನ್’ ಖಾಸಗಿ ಏಜೆನ್ಸಿ ಈ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಈ ಯೋಜನೆಯಡಿ ಅಜಂತಾ-ಎಲ್ಲೋರಾವನ್ನು ಎಲ್ಲ ರೀತಿಯಲ್ಲೂ ವಿಶ್ವ ದರ್ಜೆಯನ್ನಾಗಿ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ರಸ್ತೆ ಮತ್ತು ಸಂಚಾರ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಸಂಸ್ಕೃತಿ ಸಚಿವಾಲಯ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಜಂತಾ-ಎಲ್ಲೋರಾ ಗುಹೆಗಳಿಗೆ ಭೇಟಿ ನೀಡುವ ಜನರ ಸೌಲಭ್ಯಗಳಿಗಾಗಿ ಪ್ರವಾಸೋದ್ಯಮ ಸಚಿವಾಲಯವು ಕಾರ್ಯನಿರ್ವಹಿಸಲಿದ್ದರೆ, ರಸ್ತೆ ಸಚಿವಾಲಯವು ಸ್ಥಳವನ್ನು ತಲುಪಲು ರಸ್ತೆಗಳ ದುರಸ್ತಿ ಬಗ್ಗೆ ನಿಗಾ ವಹಿಸಲಿದೆ. ಇದಲ್ಲದೆ, ಸಾಂಸ್ಕೃತಿಕ ಸಚಿವಾಲಯ ಕೂಡ ಸ್ಥಳದ ಅಭಿವೃದ್ಧಿಗೆ ತನ್ನ ಸೌಲಭ್ಯಗಳನ್ನು ಉಪಲಬ್ಧಗೊಳಿಸಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲಾ 17 ಸ್ಥಳಗಳನ್ನು ಸಮೀಕ್ಷೆ ಮಾಡಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯೋಜನೆಗೆ ಸಂಪೂರ್ಣ ಆಧಿಕಾರವನ್ನು ನೀಡಲು ಸಚಿವಾಲಯವು ಪ್ರವಾಸೋದ್ಯಮ ತಾಣಗಳ ಸಂಬಂಧಪಟ್ಟ ರಾಜ್ಯ ಸರಕಾರಗಳೊಂದಿಗೆ ಸಂಪರ್ಕದಲ್ಲಿದೆ.