Advertisement

ಅಜೆಕಾರು ಕಲಾಭಿಮಾನಿ ಬಳಗ ನವಾನ್ವೇಷಣೆ -ಶಿಷ್ಯವೃಂದದ ಯಕ್ಷಭೃಂಗ 

12:30 AM Mar 08, 2019 | |

ನವಿಮುಂಬಯಿ: ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ತಮ್ಮ ಹವ್ಯಾಸದ ಬದುಕಿನಲ್ಲಿ ಏನೆಲ್ಲಾ ಮಹತ್ತರ ಸಾಧನೆ ಮಾಡಿದ್ದಾರೆ ಎನ್ನುವುದಕ್ಕೆ ಇಂದಿನ ಶಿಷ್ಯವೃಂದದ ಯಕ್ಷಭೃಂಗ ಕಾರ್ಯಕ್ರಮ ಸ್ಪಷ್ಪ ನಿದರ್ಶನವಾಗಿದೆ. ನಗರದಲ್ಲಿ ಕಲಾವಿದರಿಗೆ ಕೊರತೆಯಿಲ್ಲ. ಎಲ್ಲಾ ಕಲಾವಿದರುಗಳನ್ನು ಗಮನಿಸಿದಾಗ ಕಲೆಗೆ ಸೀಮಿತಗೊಂಡು ಯಾವುದೇ ಕಲಾವಿದರು ಆಸ್ತಿ, ಸಂಪತ್ತನ್ನು ಮಾಡಿರುವುದು ಕಂಡು ಬರುವುದಿಲ್ಲ. ಕಲೆ ಎನ್ನುವಂಥದ್ದು ಈ ಎಲ್ಲಾ ಕಲಾವಿದರ ಪಾಲಿಗೆ ಹವ್ಯಾಸವಾಗಿದ್ದರೂ ಕೂಡಾ ವೃತ್ತಿಪರ ಜೀವನಕ್ಕಿಂತ ಹೆಚ್ಚಿನ ಆದ್ಯತೆಯನ್ನು ಈ ಎಲ್ಲಾ ಕಲಾವಿದರು ಕಲಾಪ್ರವೃತ್ತಿಗೆ ನೀಡಿದ್ದಾರೆ. ಅಂತವರಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರೊಬ್ಬರಾಗಿದ್ದಾರೆ ಎಂದು ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಶಿವರಾಮ ಜಿ. ಶೆಟ್ಟಿ ನುಡಿದರು.

Advertisement

ಮಾ. 3ರಂದು ಸಂಜೆ ಘನ್ಸೋಲಿ ಶ್ರೀಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ನಡೆದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ನವಾನ್ವೇಷಣೆ ಶಿಷ್ಯವೃಂದದ ಯಕ್ಷಭೃಂಗ ವಿಶೇಷ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೊಂದು ಅಪೂರ್ವ ಸಂಗಮವಾಗಿದೆ. ಬಳಗದ ಎಲ್ಲಾ ಶಿಷ್ಯಂದಿರನ್ನು  ಒಟ್ಟುಗೂಡಿಸಿ ಸಂಪೂರ್ಣ ದೇವಿ ಮಹಾತೆ¾ ಎಂಬ ಯಕ್ಷಗಾನವನ್ನು ಪ್ರದರ್ಶಿಸಿರುವುದು ಅಭಿನಂದನೀಯ. ಅಜೆಕಾರು ಕಲಾಭಿಮಾನಿ ಬಳಗದ ಬಾಲಕೃಷ್ಣ ಶೆಟ್ಟಿ ಅವರ ಕಲಾಸೇವೆ ಇದೇ ಮಾದರಿಯಲ್ಲಿ ಮುಂದುವರಿಯಲಿ. ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಅವರಿಗೆ ಸದಾಯಿರಲಿ ಎಂದು ನುಡಿದರು.

ಸಮಾರಂಭದಲ್ಲಿ ಕಲಾ ಪೋಷಕರಾದ  ಶ್ಯಾಮ್‌ ಎನ್‌. ಶೆಟ್ಟಿ ಮತ್ತು ಶಾರದಾ ಎಸ್‌. ಶೆಟ್ಟಿ ದಂಪತಿ ಹಾಗೂ ರಂಗನಟ ಅನಿಲ್‌ ಕುಮಾರ್‌ ಹೆಗ್ಡೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಅಜೆಕಾರು  ಕಲಾಭಿಮಾನಿ ಬಳಗದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸಮ್ಮಾನ ಪತ್ರ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯಕ್ಷಮಾನಸದ ಅಧ್ಯಕ್ಷ ಶೇಖರ್‌ ಆರ್‌. ಶೆಟ್ಟಿ ಅವರು ಮಾತನಾಡಿ, ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಂಸ್ಕಾರ ಉಳಿದು ಬೆಳೆಯುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾಗಿದೆ. ಅಂತಹ ಕಲೆಯನ್ನು ಮುಂಬಯಿ ಕಲಾರಸಿಕರು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ. ಯಕ್ಷಗಾನ ಕಲೆಯ ಉಳಿವಿನಲ್ಲಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರ ಯೋಗದಾನ ಮಹತ್ತರವಾಗಿದೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ನೆರೂಲ್‌ ಶ್ರೀ ಶನೀಶ್ವರ ಮಂದಿರದ ವಿಶ್ವಸ್ಥ ಪ್ರಭಾಕರ ಹೆಗ್ಡೆ ಮಾತನಾಡಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಶಿಷ್ಯವೃಂದದ ಇಂದಿನ ಕಾರ್ಯಕ್ರಮ ನಿಜವಾಗಿಯೂ ಅಭಿನಂದನೀಯ. ಇದು ಶಿಷ್ಯಂದಿರು ನೀಡಿದ ಗುರುದಕ್ಷಿಣೆಯಾಗಿದೆ. ಬಾಲ ಕೃಷ್ಣ ಶೆಟ್ಟಿ ಅವರ ಸಂಘಟನೆಯ ಈ ಕಾರ್ಯಕ್ರಮ ಅವರೋರ್ವ ಉತ್ತಮ ಸಂಘಟನಾ ಚತುರ ಎಂಬುವುದನ್ನು ಸಾಭೀತುಪಡಿಸಿದೆ ಎಂದರು.

Advertisement

ತುಳುನಾಡ ಐಸಿರಿ ವಾಪಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ನಾವು ನಮ್ಮ ಮಾತೃಭಾಷೆಯನ್ನು ಮರೆಯಬಾರದು. ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಎಂದಿಗೂ ಬಿಟ್ಟುಕೊಡಬಾರದು. ಸಂಸ್ಕಾರ ಭರಿತ ಬದುಕನ್ನು ನಮ್ಮ ಜೀವನದ ಮೂಲ ಮಂತ್ರವನ್ನಾಗಿಸಿಕೊಂಡು ಬದುಕು ರೂಪಿಸಬೇಕು ಎಂದರು.
ಯಕ್ಷ ಜೇಂಕಾರ ಕಲ್ಯಾಣ್‌ ಇದರ ಅಧ್ಯಕ್ಷೆ ಪ್ರವೀಣಾ ಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಓರ್ವ ಸಮರ್ಥ ಗುರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಗರಡಿಯಲ್ಲಿ ಪಳಗಿದ ಶಿಷ್ಯವರ್ಗದಿಂದ ಯಕ್ಷಗಾನ ರಂಗ ಉಜ್ವಲವಾಗಿ ಬೆಳೆಯಲಿ. ಬಾಲಕೃಷ್ಣ ಶೆಟ್ಟಿ ಅವರಂತಹ ನೂರಾರು ಗುರುಗಳು ಯಕ್ಷರಂಗದಲ್ಲಿ ಹುಟ್ಟಿ ಬಂದು ಈ ಕಲೆ ಶ್ರೀಮಂತಗೊಳ್ಳಲಿ ಎಂದು ಹೇಳಿದರು.

ತುಳುಕೂಟ ಐರೋಲಿ ಮಾಜಿ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, ಬಾಲಕೃಷ್ಣ ಶೆಟ್ಟಿ ಅವರ ಸಂಚಾಲಕತ್ವದ ಶಿಷ್ಯವರ್ಗದ ಯಕ್ಷಗಾನ ಪ್ರದರ್ಶನವನ್ನು ಕಂಡು ಸಂತೋಷವಾಗುತ್ತಿದೆ. ಯಕ್ಷಗಾನ ಮತ್ತು ನಾಟಕ ರಂಗ ಕಲಾಪ್ರಕಾರಗಳಿಗೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಿರುವ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ನೇತೃತ್ವದಲ್ಲಿ ಆದಷ್ಟು ಬೇಗ ಭವ್ಯ ಸಭಾಭವನ ನಿರ್ಮಾಣವಾಗಲಿದೆ. 
ಆದರ ಭೂಮಿಪೂಜೆಯು ಮಾ. 10ರಂದು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು, ತುಳು-ಕನ್ನಡಿಗರು ಪಾಲ್ಗೊಂಡು ಎಲ್ಲಾ ರೀತಿಯಿಂದ ಸಹಕಾರ ನೀಡಬೇಕು ಎಂದರು.

ಸಮಾರಂಭದ ವೇದಿಕೆಯಲ್ಲಿ ಥಾಣೆ ಬಂಟ್ಸ್‌ ಮಹಿಳಾ  ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಶೆಟ್ಟಿ, ಶಾಹಡ್‌ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಕರುಣಾಕರ ಶೆಟ್ಟಿ, ನವಿಮುಂಬಯಿ ಉದ್ಯಮಿ ಸತೀಶ್‌ ಶೆಟ್ಟಿ, ತುಳುನಾಡ ಐಸಿರಿ ವಾಪಿ ಉಪಾಧ್ಯಕ್ಷ ನವೀನ್‌ ಶೆಟ್ಟಿ, ಉದ್ಯಮಿ ಅಂಬರೀಶ್‌ ಶೆಟ್ಟಿ ಅತ್ತಾವರ ಮೊದಲಾದವರು ಉಪಸ್ಥಿತರಿದ್ದರು. ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರು ಅತಿಥಿ-ಗಣ್ಯರನ್ನು ಶಾಲು ಹೊದೆಸಿ, ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿ ಗಳನ್ನು ಗೌರವಿಸಲಾಯಿತು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಕಲಾಸಂಘಟಕ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಶಿಷ್ಯವೃಂದದವರು, ದಿನೇಶ್‌ ಶೆಟ್ಟಿ ವಿಕ್ರೋಲಿ ಹಾಗೂ ಶ್ರೀ ಮೂಕಾಂಬಿಕಾ ಮಂದಿರದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ  ಸಹಕರಿಸಿದರು. ಬಳಗದ ಮುಖಾಂತರ ತರಬೇತಿ ಪಡೆದ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಶಿಷ್ಯವೃಂದದವರಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು. ಶ್ರೀ ಮೂಕಾಂಬಿಕಾ ಮಂದಿರದ ಸರ್ವ ಸದಸ್ಯರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು, ಪಾಲ್ಗೊಂಡಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಶ್ರೀ ಕ್ಷೇತ್ರದಲ್ಲಿ ವರ್ಷಪೂರ್ತಿ ಯಕ್ಷಗಾನ ನಡೆಯುತ್ತಿದ್ದು, ಈ ಮೂಲಕ ನಾನೋರ್ವ ಯಕ್ಷಗಾನ ಪ್ರೇಮಿಯಾಗಿದ್ದೇನೆ. ಇಂದು ಇದೇ ಸನ್ನಿಧಾನದಲ್ಲಿ ಸಮ್ಮಾನ ಪಡೆಯುತ್ತಿರುವುದು ಯೋಗಾನುಯೋಗ ಎಂದೇ ಹೇಳಬಹುದು. ದೇವಿ ಮೂಕಾಂಬಿಕೆಯ ಪ್ರಸಾದ ಎಂದು ತಿಳಿದು ಸಮ್ಮಾನ ಸ್ವೀಕರಿಸಿದ್ದೇನೆ. ಬಾಲಕೃಷ್ಣ ಶೆಟ್ಟಿ ಅವರ ಶಿಷ್ಯವರ್ಗದವರ ಯಕ್ಷಗಾನವನ್ನು ನೋಡಿ ಆನಂದವಾಯಿತು. ಯಾವುದೇ ವೃತ್ತಿಪರ ಕಲಾವಿದರಿಗೆ ನಾವೇನೂ ಕಡಿಮೆ ಇಲ್ಲ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
  – ಶ್ಯಾಮ್‌ ಎನ್‌. ಶೆಟ್ಟಿ.ಮಾಜಿ ಅಧ್ಯಕ್ಷರು, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌

ಇಂದು ಫೇಸ್‌ಬುಕ್‌, ವಾಟ್ಸಾಪ್‌ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ಯುವ ಜನಾಂಗದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದ್ದು, ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕಲೆಯ ಬಗ್ಗೆ ಅಭಿಮಾನ ಮೂಡಿಸುವ ಇಂತಹ ಕಾರ್ಯಕ್ರಮಗಳು ಅಭಿನಂದನೀಯ.  ಶ್ಯಾಮ್‌ ಎನ್‌. ಶೆಟ್ಟಿ ಅವರಂತಹ ಶ್ರೇಷ್ಟ ಸಮಾಜ ಸೇವಕರ, ಕಲಾಪೋಷಕರ ಜೊತೆಯಲ್ಲಿ ಸಮ್ಮಾನ ಸ್ವೀಕರಿಸಿದ್ದು ಹೆಮ್ಮೆಯಾಗುತ್ತಿದೆ. ಈ ಅವಕಾಶವನ್ನು ನೀಡಿದ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ಅವರ ಶಿಷ್ಯವರ್ಗಕ್ಕೆ ಋಣಿಯಾಗಿದ್ದೇನೆ. ಈ ಸಮ್ಮಾನವನ್ನು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಅರ್ಪಿಸುತ್ತಿದ್ದೇನೆ
ಅನಿಲ್‌ ಕುಮಾರ್‌ ಹೆಗ್ಡೆ. ರಂಗನಿರ್ದೇಶಕ, ನಟ

Advertisement

Udayavani is now on Telegram. Click here to join our channel and stay updated with the latest news.

Next