ಮುಂಬಯಿ: ತವರೂರ ಕಲಾವಿದರನ್ನು ಮುಂಬಯಿಗೆ ಆಹ್ವಾನಿಸಿ ಕಲಾಪ್ರದರ್ಶನಗಳನ್ನು ನೀಡುವುದರ ಜೊತೆಗೆ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ನೀಡುತ್ತಿರುವ ಅಜೆಕಾರು ಕಲಾಭಿಮಾನಿ ಬಳಗದ ಕಲಾಸೇವೆ ಸ್ತುತ್ಯರ್ಹವಾಗಿದೆ. ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಟೊಂಕಕಟ್ಟಿ ಹೋರಾಡುತ್ತಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಕಲಾಸೇವೆ ಇತರರಿಗೆ ಮಾದರಿಯಾಗಿದೆ. ಕಳೆದ 16 ವರ್ಷಗಳಿಂದ ಅಜೆಕಾರು ಕಲಾಭಿಮಾನಿ ಬಳಗವು ಮಾಯಾನಗರಿಯಲ್ಲಿ ಕಲಾಸೇವೆಗೈಯುತ್ತಿದ್ದು, ಸರಣಿ ಯಕ್ಷಗಾನ, ತಾಳಮದ್ದಳೆ, ಯಕ್ಷಗಾನ ತÃಬೇತಿ ಇನ್ನಿತರ ಕಾರ್ಯಗಳ ಮೂಲಕ ಮುಂಬಯಿಗರಿಗೆ ಯಕ್ಷಗಾನದ ಸವಿರುಚಿಯನ್ನು ಬೆಳೆಸುತ್ತಿರುವ ಇಂತಹ ಸಂಘಟನೆಗಳ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಯಕ್ಷ ಮಾನಸ ಮುಂಬಯಿ ಅಧ್ಯಕ್ಷ ಶೇಖರ್ ಆರ್. ಶೆಟ್ಟಿ ಅವರು ನುಡಿದರು.
ಜು. 14ರಂದು ಸಂಜೆ ಕಾಂಜೂರ್‌ಮಾರ್ಗ ಪೂರ್ವದ ಅಂಬಿಕಾ ಮಂದಿರದ ಸನ್ನಿಧಾನದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ವಾರ್ಷಿಕ ಸರಣಿ ತಾಳಮದ್ದಳೆ ಉದ್ಘಾಟನೆ ಮತ್ತು ಇತ್ತೀಚೆಗೆ ನಿಧನ ಹೊಂದಿದ ಬಳಗದ ಗೌರವ ಪ್ರಧಾನ ಕಾರ್ಯದರ್ಶಿ, ಸಮಾಜ ಸೇವಕ, ಉದ್ಯಮಿ ಎಣ್ಣೆಹೊಳೆ ಸುಧಾಕರ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಕಲಾ ಮಾತೆಯು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಎಲ್ಲಾ ಯೋಜನೆ-ಯೋಚನೆಗಳನ್ನು ಈಡೇರಿಸಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ಣಾಟಕ ಬ್ಯಾಂಕ್ ಮುಲುಂಡ್ ಶಾಖೆಯ ಪ್ರಬಂಧಕ ನಾಗರಾಜ್ ಎಂ. ಎಸ್. ಅವರು ಮಾತನಾಡಿ, ನಾನು ಮುಂಬಯಿಗೆ ಹೊಸಬನಾಗಿದ್ದು, ಎರಡು ತಿಂಗಳ ಹಿಂದೆ ಕುಂದಾಪುರ ಶಾಖೆಯಿಂದ ವರ್ಗಾವಣೆಯಾಗಿ ಇಲ್ಲಿಗೆ ಬಂದಿದ್ದೇನೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಪರಿಚಯವಾಗಿ ಅವರು ನಡೆಸುತ್ತಿರುವ ಕಲಾಸೇವೆಯ ಬಗ್ಗೆ ತಿಳಿದು ಅಭಿಮಾನಪಟ್ಟೆ. ಇಂದಿನ ಕಾರ್ಯಕ್ರಮವನ್ನು ಕಂಡು ನಿಜವಾಗಿಯೂ ಸಂತೋಷವಾಗುತ್ತಿದೆ ಎಂದು ನುಡಿದು ಬಳಗದ ಮುಂದಿನ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಜನಪ್ರಿಯ ಯಕ್ಷಗಾನ ಮಂಡಳಿಯ ಅಧ್ಯಕ್ಷ ರವೀಂದ್ರ ಪೈ ಅವರು ಮಾತನಾಡಿ, ಅಜೆಕಾರು ಕಲಾಭಿಮಾನಿ ಬಳಗದ ಹಾಗೂ ತಂಡದ ಸಂಚಾಲಕರಾದ ಬಾಲಕೃಷ್ಣ ಶೆಟ್ಟಿ ಅವರು ಯಕ್ಷಗಾನ ಮತ್ತು ತಾಳಮದ್ದಳೆಗೆ ನೀಡುತ್ತಿರುವ ಪ್ರೋತ್ಸಾಹವನ್ನು, 16 ವರ್ಷಗಳ ನಿರಂತರ ಕಲಾಸೇವೆಯನ್ನು ಬಣ್ಣಿಸಿದರು.
ವೇದಿಕೆಯಲ್ಲಿ ಶ್ರೀ ಗುರುದೇವಾ ಸೇವಾ ಬಳಗ ಥಾಣೆ ಘಟಕದ ಅಧ್ಯಕ್ಷ ಗುಣಪಾಲ್ ಶೆಟ್ಟಿ, ಅಂಬಿಕಾ ಮಂದಿರದ ಅಧ್ಯಕ್ಷ ಶಂಕರ ಪೂಜಾರಿ, ಉಪ ಕಾರ್ಯಾಧ್ಯಕ್ಷ ಸುಂದರ ಎಂ. ಶೆಟ್ಟಿ, ಉಪಾಧ್ಯಕ್ಷ ಶೇಖರ್ ಶೆಟ್ಟಿಗಾರ್, ಮಂದಿರದ ಟ್ರಸ್ಟಿಗಳಾದ ಸಾಧು ಶೆಟ್ಟಿ, ಲೀಲಾಧರ ಸಾಲ್ಯಾನ್, ರಂಗನಟ ಅಶೋಕ್ ಪಕ್ಕಳ ಹಾಗೂ ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರು ಉಪಸ್ಥಿತರಿದ್ದರು.
ಭಾಗವತೆ ಕಾವ್ಯಶ್ರೀ ಅಜೇರು ಪ್ರಾರ್ಥನೆಗೈದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಬಳಗದ ಗೌರವ ಪ್ರಧಾನ ಕಾರ್ಯದರ್ಶಿ, ಸಮಾಜ ಸೇವಕ, ಉದ್ಯಮಿ ಎಣ್ಣೆಹೊಳೆ ಸುಧಾಕರ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಣ್ಣೆಹೊಳೆ ಸುಧಾಕರ ಶೆಟ್ಟಿ ಅವರ ಪುತ್ರ ಅದಿತ್ಯ ಎಸ್. ಶೆಟ್ಟಿ, ಸತೀಶ್ ಶೆಟ್ಟಿ ಎಣ್ಣೆಹೊಳೆ ಉಪಸ್ಥಿತರಿದ್ದರು. ಬಳಗದ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರನ್ನು ಗಣ್ಯರು ಗೌರವಿಸಿದರು. ಅತಿಥಿಗಳನ್ನು ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರು ಗೌರವಿಸಿದರು. ರಂಗನಟ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಆನಂತರ ಊರಿನ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭೀಷ್ಮ ವಿಜಯ ತಾಳಮದ್ದಳೆ ನಡೆಯಿತು. ಅಂಬಿಕಾ ಮಂದಿರದ ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.