Advertisement

ಆಯುಷ್ಮಾನ್‌ ಭಾರತ್‌ ರಾಜ್ಯದ ನಕಲು: ಖಾದರ್‌ ಆರೋಪ

12:30 AM Feb 22, 2019 | Team Udayavani |

ಬೆಳ್ತಂಗಡಿ: ಕೇಂದ್ರ ಸರಕಾರವು ಚುನಾವಣೆ ಸಮೀಪಿಸುತ್ತಿದ್ದಂತೆ ಜನರಿಗೆ ಸುಳ್ಳು ಮಾಹಿತಿ ನೀಡಿ ವಿವಿಧ ಯೋಜನೆಗಳನ್ನು ತರುತ್ತಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯು ರಾಜ್ಯ ಸರಕಾರದ ಆರೋಗ್ಯಶ್ರೀ ಯೋಜನೆಯ ನಕಲು ಎಂದು ಸಚಿವ ಯು.ಟಿ. ಖಾದರ್‌ ಆರೋಪಿಸಿದ್ದಾರೆ.

Advertisement

ಅವರು ಗುರುವಾರ ಬೆಳ್ತಂಗಡಿ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಈಗ ಜನರ ನೆನಪಾಗುತ್ತಿದೆ. ಹೀಗಾಗಿ ರಾಜ್ಯದ ಸರಕಾರದ ಪಾಲೂ ಇರುವ ಯೋಜನೆಗಳನ್ನು ತನ್ನದೇ ಎಂಬಂತೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿದರು.

ಜಮ್ಮು ಕಾಶ್ಮೀರದಲ್ಲಿ ಯೋಧರ ಮೇಲೆ ನಡೆದ ದಾಳಿಯು ಇಡೀ ದೇಶದ ಮೇಲಿನ ದಾಳಿ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದು ಅಗತ್ಯ. ಅಧಿಕಾರಕ್ಕೆ ಬಂದಾಗ ಪಾಕಿಸ್ಥಾನಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದವರು ಏನು ಮಾಡಿದ್ದಾರೆ? ಪಾಕ್‌ಗೆ ಹೋಗಿ ಚಹಾ ಕುಡಿದುಬಂದ ಪ್ರಧಾನಿ ಇದ್ದರೆ ಅದು ಮೋದಿ ಮಾತ್ರ ಎಂದು ವ್ಯಂಗ್ಯವಾಡಿದರು.

ದೇಶದ ಗಡಿಯಿಂದ ಸ್ಫೋಟಗೊಂಡ ಸ್ಥಳಕ್ಕೆ 300 ಕೆ.ಜಿ. ಆರ್‌ಡಿಎಕ್ಸ್‌ ಪೂರೈಕೆ ಮಾಡಬೇಕಾದರೆ ಮೂರು ದಿನಗಳು ಬೇಕು. ಹಾಗಾದರೆ ನಮ್ಮ ದೇಶದ ಬೇಹುಗಾರಿಕೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ ಎಂದರು.

ದೇಶದಲ್ಲಿ ನಾಲ್ಕು ಜಡ್ಜ್ಗಳು ಪತ್ರಿಕಾಗೋಷ್ಠಿ ನಡೆಸಿ ನಮಗೆ ಕೆಲಸ ಮಾಡಲು ಆಗುತ್ತಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ, ನೀತಿ ಆಯೋಗದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ, ಸಿಬಿಐನ ಮುಖ್ಯಸ್ಥರಿಗೆ ರಾತ್ರೋರಾತ್ರಿ ಅನಿರ್ದಿಷ್ಟಾವಧಿ ರಜೆ ನೀಡಲಾಗಿದೆ, ರಿಸರ್ವ್‌ ಬ್ಯಾಂಕಿನ ಗವರ್ನರ್‌ ರಾಜೀನಾಮೆ ಕೊಟ್ಟು ತೆರಳಿದ್ದಾರೆ ಎಂದಾದರೆ ದೇಶದ ಪರಿಸ್ಥಿತಿ ಯಾವ ಹಂತಕ್ಕೆ ಬಂದು ತಲುಪಿದೆ ಎಂಬುದು ತಿಳಿಯುತ್ತದೆ ಎಂದೂ ಖಾದರ್‌ ಹೇಳಿದರು. ಉಜ್ವಲ ಯೋಜನೆಯನ್ನು ಬಿಜೆಪಿಯು ಪಕ್ಷದ ಕಾರ್ಯಕ್ರಮವಾಗಿ ಬಿಂಬಿಸಿದೆ ಎಂದರು. 

Advertisement

ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಈ ಹಿಂದೆಯೇ ಮಂಜೂರುಗೊಳಿಸಿದ್ದ ಬೆಳ್ತಂಗಡಿ ತಾಲೂಕಿನ ಎರಡು ಕಿಂಡಿ ಅಣೆಕಟ್ಟುಗಳು ಪಶ್ಚಿಮವಾಹಿನಿ ಯೋಜನೆಯಲ್ಲಿ ಅನುಷ್ಠಾನಗೊಳ್ಳುತ್ತಿವೆ. ಡಿಸಿ ಮನ್ನಾ ಭೂಮಿ ವಿತರಣೆಯ ಕುರಿತು ಚರ್ಚಿಸಿ ಸಂಬಂಧಪಟ್ಟ ಸಂಘಟನೆಗಳಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗುವುದು. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ 27 ಕೋತಿಗಳು ಮೃತಪಟ್ಟಿದ್ದು, ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದರು.  ಬಾಂಜಾರುಮಲೆ ಮಲೆಕುಡಿಯ ಕುಟುಂಬಗಳು ಜಮೀನು ಕಳೆದುಕೊಳ್ಳುವ ಭೀತಿಯಿಂದ ಹೊರಬರಲು ರಾಜ್ಯ ಸರಕಾರವು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಟ್‌ ಅರ್ಜಿ ಹಿಂಪಡೆಯಬೇಕು ಎಂದು ಸ್ಥಳೀಯ ನಿವಾಸಿಗಳು ಸಚಿವರಿಗೆ ಮನವಿ ನೀಡಿದರು. 

ಕಂದಾಯ ಸಚಿವರ ಜತೆ ಚರ್ಚಿಸುವುದಾಗಿ ಖಾದರ್‌ ಭರವಸೆ ನೀಡಿದರು. ಮಾಜಿ ಶಾಸಕ ಕೆ.ವಸಂತ ಬಂಗೇರ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ. ಸದಸ್ಯರಾದ ಧರಣೇಂದ್ರಕುಮಾರ್‌, ಶಾಹುಲ್‌ ಹಮೀದ್‌, ಶೇಖರ ಕುಕ್ಕೇಡಿ, ನಮಿತ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜಶೇಖರ ಅಜ್ರಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಭಿನಂದನ್‌, ಮುಂದಾಳು ರಾಜಶೇಖರ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next