ಬಹಳ ಚಿಕ್ಕ ವಯಸ್ಸಿನಲ್ಲೇ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ಐಶಾನಿ, ಮೊದಲಿಗೆ ನಟಿಸಿದ್ದು ಜ್ಯೋತಿರಾಜ ಅಲಿಯಾಸ್ ಕೋತಿರಾಜ ಎಂಬ ಚಿತ್ರದಲ್ಲಿ. ಆ ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುನ್ನವೇ ಸಿಕ್ಕಿದ್ದು ಯೋಗರಾಜ್ ಭಟ್ ನಿರ್ದೇಶನದ “ವಾಸ್ತು ಪ್ರಕಾರ’. ಇದು ಐಶಾನಿಯ ಎರಡನೆಯ ಚಿತ್ರ. ಈ ಎರಡು ಚಿತ್ರಗಳು ಬಿಡುಗಡೆಗೆ ಬಾಕಿ ಇರುವಾಗಲೇ, ಸತೀಶ್ ನೀನಾಸಂ ಅಭಿನಯದ ಮತ್ತು ನಿರ್ಮಾಣದ ರಾಕೆಟ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.
ರಾಕೆಟ್ ಚಿತ್ರದ ನಂತರ ಐಶಾನಿ ಶೆಟ್ಟಿ ಅಕ್ಷರಶಃ ಮಾಯವಾಗಿದ್ದರು ಎಂದರೆ ತಪ್ಪಿಲ್ಲ. ಏಕೆಂದರೆ, ಅವರು ಯಾವೊಂದು ಚಿತ್ರದಲ್ಲೂ ನಟಿಸುತ್ತಿರಲಿಲ್ಲ. ಐಶಾನಿ ಶೆಟ್ಟಿ ಎಲ್ಲಿ ಹೋದರು ಎಂದು ಹುಡುಕಿದರೆ, ಅವರು ತಮ್ಮ ಸ್ಟಡೀಸ್ ಮುಗಿಸುತ್ತಿದ್ದಾರೆ ಎಂಬ ಉತ್ತರ ಗಾಂಧಿನಗರದಿಂದ ಬಂದಿತ್ತು. ಆ ನಂತರ ಅವರು ಕಾಜಿ ಎಂಬ ಕಿರುಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಬಂತು. ಕಾಜಿ ಮುಗಿದಿರುವುದಷ್ಟೇ ಅಲ್ಲ, ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಿರುಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಆ ಖುಷಿಯಲ್ಲಿದ್ದ ಐಶಾನಿ ಶೆಟ್ಟಿಗೆ, ದೆಹಲಿಯಲ್ಲಿ ನಡೆಯುತ್ತಿರುವ 8ನೇ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿ ಎರಡು ಪ್ರಶಸ್ತಿಗಳನ್ನೂ ಗೆದ್ದಿದೆ.
“ನಾನು ಈ ಕಥೆ ಬರೆಯೋಕೆ ಕಾರಣ, ಕೆಲವು ನೈಜ ಘಟನೆಗಳು. ಉತ್ತರ ಕರ್ನಾಟಕದಲ್ಲಿ ನಾನು ನೋಡಿದ ಘಟನೆ ಚುಚುತ್ತಲೇ ಇತ್ತು. ಅದನ್ನೊಂದು ಕಥೆ ಮಾಡಿದ್ದೆ. ಚಿತ್ರ ಮಾಡೋಕೆ ಆಸೆ ಇತ್ತಾದರೂ, ಯಾರು ಈ ಚಿತ್ರ ನಿರ್ಮಿಸುವುದಕ್ಕೆ ಮುಂದೆ ಬರುತ್ತಾರೆ ಅಂತ ಗೊತ್ತಿರಲಿಲ್ಲ. ಒಮ್ಮೆ ಸತೀಶ್‌ಗೆ ಹೇಳಿದೆ. ಅವರಿಗೆ ಇಷ್ಟವಾಗಿ, ಒಂದು ತಂಡ ಕೊಟ್ಟರು. ಆ ತಂಡ ಇಲ್ಲದಿದ್ದರೆ ಈ ಚಿತ್ರ ಆಗುತ್ತಿರಲಿಲ್ಲ’ ಎನ್ನುತ್ತಾರೆ ಐಶಾನಿ.
ಇದೀಗ ಕಾಜಿ ಮುಗಿಸಿ ಪ್ರಶಸ್ತಿ ಗೆದ್ದಿರುವ ಖುಷಿಯಲ್ಲಿರುವ ಅವರು ಮೆಲ್ಲನೆ ಒಂದೊಂದೇ ಸಿನೆಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದರ ಮೊದಲ ಹಂತವಾಗಿ ಅವರು ನಡುವೆ ಅಂತರವಿರಲಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಕುರಿತು ಮಾತನಾಡುವ ಅವರು, “ಪರೀಕ್ಷೆ ಇದ್ದ ಕಾರಣ, ಚಿತ್ರರಂಗದಿಂದ ದೂರ ಇರಬೇಕಾಗಿ ಬಂತು. ಈಗ ಪರೀಕ್ಷೆ ಮುಗಿದಿರುವುದರಿಂದ ಒಂದಷ್ಟು ಕಥೆಗಳು ಹುಡುಕಿ ಬರುತ್ತಿವೆ. ಕಥೆ ಕೇಳುತ್ತಿದ್ದೇನೆ. ಈ ಮಧ್ಯೆ ನಡುವೆ ಅಂತರವಿರಲಿ ಎಂಬ ಚಿತ್ರದಲ್ಲಿ ನಟಿಸಿದ್ದೇನೆ. ಕಥೆ ಚೆನ್ನಾಗಿದ್ದರಿಂದ ನಟಿಸಿದೆ. ಆ ಚಿತ್ರಕ್ಕೆ ಪ್ರಖ್ಯಾತ್ ಎಂಬ ಹೊಸ ಪ್ರತಿಭೆ ಹೀರೋ. ರವೀನ್ ನಿರ್ದೇಶನ ಮಾಡಿದ್ದಾರೆ’ ಎನ್ನುತ್ತಾರೆ ಐಶಾನಿ.
ಐಶಾನಿ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿರುವುದರಿಂದ ಅವರದ್ದು, ಈಗ ಎರಡು ದೋಣಿಗಳ ಪಯಣ ಎಂದರೆ ತಪ್ಪಿಲ್ಲ. ಮುಂದಿನ ದಿನಗಳಲ್ಲೂ ಅವರು ನಿರ್ದೇಶನವನ್ನೂ ಮುಂದುವರೆಸುತ್ತಾರಾ ಎಂಬ ಪ್ರಶ್ನೆಯೊಂದನ್ನು ಅವರ ಮುಂದಿಟ್ಟರೆ, “ನನಗೆ ನಟನೆ ಜೊತೆಗೆ ಕಥೆ ಬರೆಯುವುದು, ನಿರ್ದೇಶನ ಮಾಡುವ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ನಿರ್ದೇಶನ ಸುಲಭವಲ್ಲ. ಅಲ್ಲಿ ಕಲಿಯುವುದು ತುಂಬಾ ಇದೆ.
ಕನ್ನಡದಲ್ಲಿ ಮಹಿಳಾ ನಿರ್ದೇಶಕರು ಕಡಿಮೆ. ಮುಂದೆ ಆ ಬಗ್ಗೆಯೂ ಗಮನ ಹರಿಸುತ್ತೇನೆ’ ಎನ್ನುತ್ತಾರೆ ಐಶಾನಿ.