Advertisement

ಮ್ಯಾನ್ಮಾರ್‌ನಲ್ಲಿ ನಾಗರಿಕರ ಮೇಲೆ ವಾಯುದಾಳಿ ಖಂಡನೀಯ

11:59 PM Apr 13, 2023 | Team Udayavani |

ಮ್ಯಾನ್ಮಾರ್‌ನಲ್ಲಿನ ಸೇನಾಡಳಿತವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಗುರಿಯಾಗಿಸಿ ಅಲ್ಲಿನ ಸೇನೆ ಸಗಾಯಿಂಗ್‌ ಪ್ರಾಂತದ ಮಧ್ಯಭಾಗದಲ್ಲಿರುವ ಕಂಬಾಲು ಟೌನ್‌ಶಿಪ್‌ ಮೇಲೆ ನಡೆಸಿದ ವಾಯುದಾಳಿಯಲ್ಲಿ 130ಕ್ಕೂ ಅಧಿಕ ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಕ್ಕಳು, ಮಹಿಳೆಯರ ಸಹಿತ ನೂರಾರು ಸಂಖ್ಯೆಯಲ್ಲಿ ಅಮಾಯಕರು ಬಲಿಯಾಗಿರುವುದಕ್ಕೆ ಆಕ್ರೋಶ ಹೊರಹಾಕಿರುವ ಅಂತಾರಾಷ್ಟ್ರೀಯ ಸಮುದಾಯ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

Advertisement

2021ರ ಫೆಬ್ರವರಿಯಲ್ಲಿ ಆ್ಯಂಗ್‌ ಸಾನ್‌ ಸೂಕಿ ನೇತೃತ್ವದ ಚುನಾಯಿತ ಸರಕಾರ ವನ್ನು ಪದಚ್ಯುತಿಗೊಳಿಸಿ ದೇಶದ ಅಧಿಕಾರಸೂತ್ರವನ್ನು ಹಿಡಿದಿರುವ ಸೇನೆಯು ನಿರಂತರವಾಗಿ ತನ್ನ ವಿರೋಧಿಗಳ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಲೇ ಬಂದಿದೆ. ಸೇನಾಡಳಿತವನ್ನು ವಿರೋಧಿಸಿ ಅಲ್ಲಿನ ವಿವಿಧ ಜನಾಂಗೀಯ ಸಂಘಟ ನೆಗಳು ಮತ್ತು ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿನ ಸೇನೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತನ್ನ ವಿರೋಧಿಗಳ ಮೇಲೆ ಬಲಪ್ರಯೋಗ ನಡೆಸುವುದನ್ನು ಚಾಳಿಯನ್ನಾಗಿಸಿಕೊಂಡಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಸೇನೆ ನಡೆಸಿದ ವಿವಿಧ ದಾಳಿಗಳಲ್ಲಿ 3,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಮಂಗಳವಾರದಂದು ಸೇನಾಡಳಿತ ವಿರುದ್ಧ ದಂಗೆ ಎದ್ದಿರುವ ಸಂಘಟನೆಯೊಂದು ತನ್ನ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭದ ಸಂಭ್ರಮದಲ್ಲಿ ನಿರತವಾಗಿದ್ದ ವೇಳೆ ಮ್ಯಾನ್ಮಾರ್‌ ಸೇನೆ ಈ ದಾಳಿ ನಡೆಸಿತ್ತು. ಸೇನೆ ನಡೆಸಿದ ಈ ವಾಯುದಾಳಿ ಕಳೆದೆರಡು ವರ್ಷಗಳ ಅವಧಿಯಲ್ಲಿಯೇ ಅತ್ಯಂತ ಕ್ರೂರ ಮತ್ತು ಬರ್ಬರವಾಗಿ ದ್ದೆನ್ನಲಾಗಿದ್ದು ಸೇನೆಯ ವಿರುದ್ಧ ದೇಶಾದ್ಯಂತದ ಜನರ ಆಕ್ರೋಶ ಭುಗಿಲೆದ್ದಿದೆ. ಈ ದಾಳಿಯ ಬಳಿಕ ಸಂತ್ರಸ್ತರ ರಕ್ಷಣ ಕಾರ್ಯಾಚರಣೆ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿ ಸಲು ಸೇನೆ ಅವಕಾಶವನ್ನು ನೀಡಿಲ್ಲ. ರಕ್ಷಣ ಕಾರ್ಯಾಚರಣೆಯಲ್ಲಿ ಯಾರೂ ತೊಡ ಗಿಕೊಳ್ಳದಂತೆ ಕಟ್ಟೆಚ್ಚರ ವಹಿಸಿರುವ ಸೇನೆ ಪ್ರದೇಶದಲ್ಲಿ ನಿರಂತರವಾಗಿ ಸೇನಾ ವಿಮಾನಗಳು ಗಸ್ತು ತಿರುಗುತ್ತಿವೆ. ಇದರಿಂದಾಗಿ ಅಮಾಯಕ ಜನ ತಮ್ಮೆಲ್ಲ ನೋವು, ಸಂಕಷ್ಟಗಳನ್ನು ನುಂಗಿ ಭಯಗ್ರಸ್ಥರಾಗಿ ದಿನದೂಡುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ವಾಯುದಾಳಿಯ ಭೀಕರ ದೃಶ್ಯಾವಳಿ ಮತ್ತು ಘಟನ ಸ್ಥಳದ ಘೋರ ಚಿತ್ರಣಗಳನ್ನು ಹರಿಯಬಿಡುವ ಮೂಲಕ ದೇಶದ ಜನರಲ್ಲಿ ಭೀತಿ ಮೂಡಿಸಲಾಗಿದೆ. ತನ್ಮೂಲಕ ಸೇನಾಡಳಿತ ವಿರುದ್ಧದ ಪ್ರತಿಭಟನೆ, ದಂಗೆಗಳಲ್ಲಿ ಯಾರೂ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ.
ಏತನ್ಮಧ್ಯೆ ಮ್ಯಾನ್ಮಾರ್‌ ಸೇನೆಯು ದೇಶದ ಜನತೆಯ ವಿರುದ್ಧ ನಡೆಸಿದ ವಾಯುದಾಳಿಗೆ ವಿಶ್ವಸಂಸ್ಥೆ, ಅಮೆರಿಕ ಸಹಿತ ಅಂತಾರಾಷ್ಟ್ರೀಯ ಸಮುದಾಯ ತೀವ್ರವಾಗಿ ಖಂಡಿಸಿದೆ. ಮ್ಯಾನ್ಮಾರ್‌ನಲ್ಲಿ ಪದೇಪದೆ ಮಾನವ ಹಕ್ಕುಗಳ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು ಪ್ರಾಣಭೀತಿ ಎದುರಿಸುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ. ನೃತ್ಯ ಪ್ರದರ್ಶನ ನೀಡುತ್ತಿರುವ ಮಕ್ಕಳನ್ನೂ ಬಿಡದೆ ನಡೆಸಲಾದ ಈ ಕ್ರೂರ ಕೃತ್ಯದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿದೆ.

ಮ್ಯಾನ್ಮಾರ್‌ಗೆ 1948ರಲ್ಲಿ ಸ್ವಾತಂತ್ರ ಲಭಿಸಿದಂದಿನಿಂದಲೂ ದೇಶದಲ್ಲಿ ಕೆಲವೊಂದು ಸಶಸ್ತ್ರ ಜನಾಂಗೀಯ ಗುಂಪುಗಳು ಪ್ರದೇಶವಾರು ಹಿಡಿತ ಸಾಧಿಸುವ ಸಲುವಾಗಿ ಆಡಳಿತದ ವಿರುದ್ಧ ದಂಗೆ ಏಳುತ್ತಲೇ ಬಂದಿವೆ. ಈ ದಂಗೆಕೋರರನ್ನು ಹದ್ದುಬಸ್ತಿನಲ್ಲಿಡಲು ಮ್ಯಾನ್ಮಾರ್‌ ಸೇನೆ ನಾಗರಿಕರನ್ನು ಗುರಿಯಾಗಿಸಿ ಸೇನಾ ಕಾರ್ಯಾಚರಣೆಯನ್ನು ನಡೆಸುತ್ತಲೇ ಬಂದಿತ್ತು. ಸುದೀರ್ಘ‌ ಹೋರಾಟದ ಬಳಿಕ ದೇಶದಲ್ಲಿ ಚುನಾಯಿತ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಅನಂತರ ಸೇನಾ ಕಾರ್ಯಾಚರಣೆಗಳು ಕೊಂಚ ತಹಬದಿಗೆ ಬಂದಿತ್ತು. ಮ್ಯಾನ್ಮಾರ್‌ ಸೇನೆ ದೇಶದ ಆಡಳಿತವನ್ನು ಮತ್ತೆ ತನ್ನ ಕೈವಶಪಡಿಸಿಕೊಂಡ ಬಳಿಕ ಹಿಂದಿನಂತೆ ವಿರೋಧಿಗಳ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲಾರಂಭಿಸಿದೆ. ಈಗ ಮತ್ತೆ ಜನಾಂಗೀಯ ಸಂಘಟನೆಗಳು ಸೇನಾಡಳಿತದ ವಿರುದ್ಧ ದಂಗೆ ಏಳಲಾರಂಭಿಸಿದ್ದು ದೇಶದಲ್ಲಿ ಮತ್ತೆ ಪ್ರಕ್ಷುಬ್ಧ ಸ್ಥಿತಿ ನೆಲೆಯೂರುವ ಆತಂಕ ಮೂಡಿದೆ. ವಿಶ್ವಸಂಸ್ಥೆ ಮತ್ತು ಜಾಗತಿಕ ರಾಷ್ಟ್ರಗಳು ತತ್‌ಕ್ಷಣ ಮಧ್ಯಪ್ರವೇಶಿಸಿ ಸೇನೆಯ ದಾಷ್ಟéìತನಕ್ಕೆ ಕಡಿವಾಣ ಹಾಕಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next