ಬೆಂಗಳೂರು: ವಿಮಾನ ನಿಲ್ದಾಣದ ಭದ್ರತಾ ವೈಫಲ್ಯದಿಂದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುವ ಒಂದು ದಿನ ಮೊದಲು ಎಚ್‌ಎಎಲ್ ವಿಮಾನ ನಿಲ್ದಾಣದ ಕಾಂಪೌಂಡ್ ಹಾರಿ ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ಅತಿ ಕ್ರಮಣ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ.
ಅಸ್ಸಾಂನ ಸೋನಿತ್‌ಪುರ ನಿವಾಸಿ ಮುಕುಂದ್ ಕೌಂದ್ ಎಂಬಾತನನ್ನು ಬಂಧಿಸಲಾಗಿದೆ. ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಬಾಲಸುಬ್ರಹ್ಮಣಿ ಎಂಬುವರು ನೀಡಿದ ದೂರಿನ ಆಧಾರದ ಮೇರೆ ಆರೋಪಿಯ ವಿರುದ್ಧ ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಭಾರತೀಯ ಅಧಿಕೃತ ರಹಸ್ಯ ಕಾಯ್ದೆ-1923 ಮತ್ತು ಕಳ್ಳತನ ಹಾಗೂ ಇತರೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಸ್ಸಾಂ ಮೂಲದ ಆರೋಪಿ 7ನೇ ತರಗತಿ ವ್ಯಾಸಂಗ ಮಾಡಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದ. ಪತ್ನಿ ಮತ್ತು ಮಕ್ಕಳ ಜತೆ ಅಲ್ಲಿಯೇ ವಾಸವಾಗಿದ್ದ. ಆದರೆ, ಪತ್ನಿ ಜತೆ ಜಗಳ ಮಾಡಿಕೊಂಡು ನ.6ರಂದು ಬೆಂಗಳೂರಿಗೆ ಬಂದಿದ್ದಾನೆ. ಇಲ್ಲಿಯೇ ಕೆಲಸ ಹುಡುಕುತ್ತಿದ್ದ. ಮುಕುಂದ್ ಕಳ್ಳತನ ಮಾಡುವ ಉದ್ದೇಶದಿಂದ ನ.9ರಂದು ರಾತ್ರಿ 12.50ರ ಸುಮಾರಿಗೆ ಎಚ್‌ಎಎಲ್ ವಿಮಾನ ನಿಲ್ದಾಣ ಸೇವಾ ಕೇಂದ್ರಗಳೊಳಗೆ ಪ್ರವೇಶಿಸಿದ್ದಾನೆ. ಆಗ ಶ್ವಾನದಳ ಸಿಬ್ಬಂದಿ ಪ್ರೊರಾಮ್ ರಿಯಾಂಗ್ ಗಸ್ತು ತಿರುಗುತ್ತಿದ್ದರು. ನಿಲ್ದಾಣದ ಗ್ರೇಟ್ ಬಳಿ ಅಳವಡಿಸಿರುವ ಸೌರ ಫಲಕಗಳ ಅಡಿಯಲ್ಲಿ ಅವಿತುಕೊಂಡಿದ್ದು, ಅದನ್ನು ಗಮನಿಸಿದ ಶ್ವಾನ ಬೋಗಳಿದಾಗ ಆತನನ್ನು ವಶಕ್ಕೆ ಪಡೆಯಲಾಗಿದೆ.
ನಂತರ ಆರೋಪಿಯನ್ನು ನಿಯಂತ್ರಣ ಕೊಠಡಿಗೆ ಕರೆದೊಯ್ದು ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಕೆಂಪಾಪುರ ರಸ್ತೆಯ ಶಿವನ ದೇವಾಲಯದ ಎದುರಿನ ವಾಚ್ ಟವರ್ ಸಂಖ್ಯೆ 3ರ ಬಳಿ ವಿಮಾನ ನಿಲ್ದಾಣದ ಗೋಡೆಯನ್ನು ಏರಲು ಪ್ರಯತ್ನಿಸಿದ್ದಾನೆ. ಆದು ವಿಫಲವಾದಾಗ ಟ್ರಾಲಿ ಗೇಟ್ ಬಳಿ ಬಂದು ಗೋಡೆ ಏರಿ ನಿಲ್ದಾಣದ ಒಳಗೆ ಪ್ರವೇಶಿಸಿದ್ದಾನೆ. ಅದಕ್ಕೂ ಮೊದಲು ವಿಮಾನ ನಿಲ್ದಾಣ ಒಳಪ್ರವೇಶಿಸಲು ಸುತ್ತುಗೋಡೆಯನ್ನು ಸ್ಕೇಲಿಂಗ್ ಮಾಡುವ ಚುಟವಟಿಕೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಂತರ ಈತನನ್ನು ವಿಚಾರಣೆ ನಡೆಸಿದಾಗ ಕಳ್ಳತನ ಮಾಡುವ ಉದ್ದೇಶದಿಂದ ಬಂದಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು. ಮತ್ತೂಂದು ಮಾಹಿತಿ ಪ್ರಕಾರ, ಆರೋಪಿ ಪತ್ನಿ, ಮಕ್ಕಳನ್ನು ಬಿಟ್ಟು ಭದ್ರತಾ ಸಿಬ್ಬಂದಿ ಕೆಲಸ ಮಾಡಲು ಬೆಂಗಳೂರಿಗೆ ಬಂದಿದ್ದ. ಜತೆಗೆ ಅಸ್ಸಾಂನಿಂದ ಸ್ನೇಹಿತನ ಪತ್ನಿಯನ್ನು ಬೆಂಗಳೂರಿಗೆ ಕರೆತಂದು ಆಕೆ ಜತೆ ಯಮಲೂರಿನ ಶೆಡ್‌ವೊಂದರಲ್ಲಿ ವಾಸವಾಗಿದ್ದ. ನ.9ರಂದು ರಾತ್ರಿ ಈತನ ಕಂಠಪೂರ್ತಿ ಮದ್ಯ ಸೇವಿಸಿ, ಆಕೆಯ ಬಳಿ ಹೋಗಿದ್ದಾನೆ. ಆದರೆ, ಆಕೆ ಮನೆಯೊ ಳಗೆ ಸೇರಿಸಲು ನಿರಾಕರಿಸಿದ್ದಾಳೆ. ಹಣ ಕೊಡುವಂತೆ ಕೇಳಿದರೂ ಆಕೆ ಕೊಟ್ಟಿಲ್ಲ. ಅದರಿಂದ ಆಕ್ರೋಶಗೊಂಡ ಆರೋಪಿ, ಮದ್ಯ ಅಮಲಿನಲ್ಲಿ ವಿಮಾನ ನಿಲ್ದಾಣದ ಬಳಿ ಬಂದು ಗೋಡೆ ಹಾರಿ ಕಬ್ಬಿಣ ವಸ್ತುಗಳನ್ನು ಕಳವು ಮಾಡಲು ಯತ್ನಿಸಿದ್ದ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಅಸ್ಸಾಂ ಪೊಲೀಸರಿಗೆ ಮಾಹಿತಿ : ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಗುಪ್ತಚರ ಮತ್ತು ಆಂತರಿಕಾ ಭದ್ರತಾ ವಿಭಾಗದ ಅಧಿಕಾರಿಗಳು ಆರೋಪಿ ಮುಕುಂದ್ ಕೌಂದ್ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಹೀಗಾಗಿ ಅಸ್ಸಾಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನ ಪೂರ್ವಪರ ಮಾಹಿತಿ ನೀಡುವಂತೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.