Advertisement

ಏರ್‌ಪೋರ್ಟ್‌ನಂತೆ ಆಗಲಿವೆ ರೈಲು ನಿಲ್ದಾಣಗಳು

11:54 AM Feb 09, 2017 | |

ಬೆಂಗಳೂರು: ನಗರದ ಯಶವಂತಪುರ ಮತ್ತು ಕಂಟೋನ್ಮೆಂಟ್‌ ರೈಲು ನಿಲ್ದಾಣ ಸೇರಿದಂತೆ ದೇಶದ ಒಟ್ಟು 23 ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವ “ಬೃಹತ್‌ ನಿಲ್ದಾಣಗಳ ಅಭಿವೃದ್ಧಿ ಯೋಜನೆ’ಗೆ ಬುಧವಾರ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು. 

Advertisement

ದೇಶದ 400 ರೈಲ್ವೆ ನಿಲ್ದಾಣಗಳನ್ನು ಈ ಮರು ಅಭಿವೃದ್ಧಿ ಯೋಜನೆ ಅಡಿ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಹೈಟೆಕ್‌ಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಪೈಕಿ ಮೊದಲ ಹಂತದಲ್ಲಿ 23 ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು,  ಇದರಲ್ಲಿ ನಗರದ ಯಶವಂತಪುರ ಮತ್ತು ಕಂಟೋನ್ಮೆಂಟ್‌ ನಿಲ್ದಾಣಗಳು ಕೂಡ ಸೇರಿವೆ. 

ನಂತರ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಸಚಿವರು, “ಈ ಮಹತ್ವದ ಯೋಜನೆಗೆ ಜೂನ್‌ 6ರೊಳಗೆ ಟೆಂಡರ್‌ಗೆ ಅರ್ಜಿ ಸಲ್ಲಿಸಬಹುದು. ಇದಾದ
ನಂತರದ 90 ದಿನಗಳಲ್ಲಿ ಅರ್ಜಿಗಳ ಪರಿಶೀಲನೆ ನಡೆಯಲಿದೆ. ಬರುವ ಹಣಕಾಸು ವರ್ಷಕ್ಕೆ ಯೋಜನೆ ಅಡಿ ಕಾಮಗಾರಿಗಳನ್ನು ಆರಂಭಿಸಲು ಕಾರ್ಯಾ ದೇಶ ನೀಡಲಾಗುವುದು,” ಎಂದು ಹೇಳಿದರು. 

“ನಗರದ ಹೃದಯಭಾಗದಲ್ಲಿರುವ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣವನ್ನು 2.25 ಎಕರೆಯಲ್ಲಿ ಹಾಗೂ ಯಶವಂತಪುರವನ್ನು 20 ಎಕರೆ ಜಾಗದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇವೆರಡೂ ಕಡೆ ಆರಂಭದಲ್ಲಿ 80 ಕೋಟಿ ಮತ್ತು 100 ಕೋಟಿ ರೂ. ನೀಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತ , ಮುಖ್ಯ (ಯೋಜನೆ ಮತ್ತು ವಿನ್ಯಾಸ )ಎಂಜಿನಿಯರ್‌ ಡಿ.ಕೆ.ಗರ್ಗ್‌, ಪ್ರಧಾನ ಮುಖ್ಯ ಎಂಜಿನಿಯರ್‌ ಕೆ.ಎಸ್‌. ಕಾಲ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜೀವ್‌ ಅಗರ್‌ವಾಲ್‌  ಮತ್ತಿತರರು ಉಪಸ್ಥಿತರಿದ್ದರು.

Advertisement

ಏನೇನು ಇರುತ್ತದೆ?: ಶೌಚಾಲಯ, ನೀರಿನ ಕೂಲರ್‌ಗಳು, ಉಚಿತ ಮತ್ತು ನಿಗದಿತ ದರದಲ್ಲಿ ವೈ-ಫೈ ಸೇವೆ, ಫ್ಯಾನ್‌ಗಳು, ಫಾರ್ಮಸಿ, ಎಟಿಎಂ, ಪಾವತಿಸಿ ಬಳಸುವ ಮೊಬೈಲ್‌ ಶೌಚಾಲಯಗಳು, ನೀರಿನ ಎಟಿಎಂಗಳು, ಮನರಂಜನಾ ಸೌಲಭ್ಯ, ದೂಮಪಾನ ಕೊಠಡಿಗಳು, ವಿಶ್ರಾಂತಿ ಕೊಠಡಿಗಳು ಸೇರಿದಂತೆ ಹತ್ತಾರು ಸೌಲಭ್ಯಗಳು ಇಲ್ಲಿ ಲಭ್ಯವಾಗಲಿವೆ. 

ಇನ್ನು ಈ ನಿಲ್ದಾಣಗಳಿಗೆ ಪ್ರಯಾಣಿಕರು ಸುಲಭವಾಗಿ ಬರುವಂತೆ ಮಾಡಲು ಎತ್ತರಿಸಿದ ಪಾದಚಾರಿ ಮಾರ್ಗಗಳ ನಿರ್ಮಾಣ, ಅಂಡರ್‌ಪಾಸ್‌ಗಳು, ಎಸ್ಕಲೇಟರ್‌ಗಳು, ನೆಲಮಹಡಿಯಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ, ಹತ್ತಿರದ ವಿಮಾನ ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳಿಗೆ ಬಸ್‌ಗಳ ಸಂಪರ್ಕ ಸೇವೆ, ಪ್ರಿ-ಪೇಯ್ಡ ಟ್ಯಾಕ್ಸಿಗಳು, ಪ್ಲಾಟ್‌ಫಾರಂ ಟಿಕೆಟ್‌ಗಳಿಗೆ ಸ್ವೆ„ಪ್‌ ಯಂತ್ರ, ಸಿಸಿಟಿವಿ, ಆಂಬ್ಯುಲೆನ್ಸ್‌, ಲಗೇಜ್‌ ಎಕ್ಸ್‌-ರೇ ಯಂತ್ರಗಳು, ವೈದ್ಯರು, ಅಂಗವಿಕಲರಿಗೆ ವ್ಹೀಲ್‌ಚೇರ್‌ ಸೇವೆ, ಸೆಲ್ಫ್ ಟಿಕೆಟಿಂಗ್‌ ಕೌಂಟರ್‌ಗಳು ಇರಲಿವೆ. 

ಮಂಗಳೂರು-ಬೆಂಗಳೂರು ಶೀಘ್ರ: “ಬಹುನಿರೀಕ್ಷಿತ ಬೆಂಗಳೂರು-ಶ್ರವಣಬೆಳಗೊಳ-ಹಾಸನ-ಮಂಗಳೂರು ನಡುವೆ ಮಾರ್ಚ್‌ 31ರೊಳಗೆ ರೈಲು ಸೇವೆ ಆರಂಭಗೊಳ್ಳಲಿದೆ,” ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತ ತಿಳಿಸಿದ್ದಾರೆ. ಬೃಹತ್‌ ನಿಲ್ದಾಣ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, “ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಾರ್ಚ್‌ ಅಂತ್ಯದೊಳಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ,” ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next