ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹತ್ತನೇ ವರ್ಷದ ಸಂಭ್ರಮ. ಇದರ ಅಂಗವಾಗಿ “ಬಿಎಲ್‌ಆರ್ ಏರ್‌ಪೋರ್ಟ್ ಹಬ್ಬ’ ಆಯೋಜನೆಗೊಂಡಿದ್ದು, ಟರ್ಮಿನಲ್‌ನಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಲಿದೆ. ಆಹಾರ ಮಳಿಗೆಗಳು, ಸಂತೆ, ಮಕ್ಕಳ ಆಟದ ಜಾಗ, ಆಟೋಟ ಚಟುವಟಿಕೆಗಳು ಏರ್‌ಪೋರ್ಟ್ ಹಬ್ಬದ ಆಕರ್ಷಣೆಗಳು. ಮನರಂಜನಾ ಕಾರ್ಯಕ್ರಮಗಳಲ್ಲಿ ಏರ್‌ಪೋರ್ಟ್ ಸಿಬ್ಬಂದಿ ವರ್ಗವೂ ಪಾಲ್ಗೊಳ್ಳುತ್ತಿರುವುದೂ ಇನ್ನೊಂದು ವಿಶೇಷ.
ಏನಿದರ ಹೈಲೈಟ್ಸ್?: ಡ್ರೀಮ್ ಕ್ಯಾಚರ್- ಮಣಿ, ಹಕ್ಕಿ ಗರಿ, ದಾರ ಮುಂತಾದ ವಸ್ತುಗಳಿಂದ ತಯಾರಿಸುವ ಗೃಹಾಲಂಕಾರದ ವಸ್ತು. ಪುರಾತನ ಕಾಲದಲ್ಲಿ ಅಮೆರಿಕನ್ ಇಂಡಿಯನ್ನರು ಇದನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಇದನ್ನು ಮನೆಯಲ್ಲಿಟ್ಟುಕೊಳ್ಳುವವರಿಗೆ ಆರೋಗ್ಯ ಮತ್ತು ಸುಖ ನಿದ್ದೆ ಪ್ರಾಪ್ತವಾಗಲಿ ಎನ್ನುವುದು ಅವರ ಹಾರೈಕೆಯಾಗಿರುತ್ತಿತ್ತು.
ಕ್ಲೇ ಮಾಡೆಲಿಂಗ್: ಏರೋ ಮಾಡೆಲಿಂಗ್ - ಕ್ಲೇ ಮಾಡೆಲಿಂಗ್ ಅನ್ನೇ ಹೇಳಿಕೊಡುತ್ತಿದ್ದಾರಂತೆ, ಇನ್ನು ಏರ್‌ಪೋರ್ಟ್ ಹಬ್ಬದಲ್ಲಿ ಏರೋ ಮಾಡೆಲಿಂಗ್ ಇಲ್ಲದಿದ್ದರೆ ಹೇಗೆ!? ವಿಮಾನಗಳ ಪುಟ್ಟ ಮಾದರಿಗಳನ್ನು ತಯಾರಿಸುವುದನ್ನು ಹೇಳಿಕೊಡುವ ಈ ಕಾರ್ಯಾಗಾರ ಮಕ್ಕಳಿಗೆ ಖಂಡಿತ ಇಷ್ಟವಾಗಲಿದೆ.
ಪೇಪರ್ ಮಾರ್ಬಲಿಂಗ್: ಮಾರ್ಬಲ್ ಅಂದರೆ ಗೋಲಿ ಗೊತ್ತಲ್ವಾ ಅದರೊಳಗಿನ ವಿನ್ಯಾಸಗಳನ್ನು ಗಮನಿಸಿದ್ದೀರಾ ಅಂಥವೇ ವಿನ್ಯಾಸವನ್ನು ಕಾಗದದ ಮೇಲೆ ಮೂಡಿಸುವ ಕಲೆಯೇ ಪೇಪರ್ ಮಾರ್ಬಲಿಂಗ್. ಸಹಜವಾಗಿ ಮೂಡುವ ಈ ವಿನ್ಯಾಸ ರಚನೆಗೆ ಬಣ್ಣ ಮತ್ತು ದ್ರಾವಣವನ್ನು ಬಳಸಲಾಗುತ್ತದೆ.
ಶಾಸ್ತ್ರಿ ಕಛೇರಿ: ಇಂಟರ್‌ನ್ಯಾಷನಲ್ ಎರ್‌ಪೋರ್ಟ್‌ನಲ್ಲಿ ಅಂದು ಸಂಗೀತ ಕಛೇರಿ ನಡೆಯುತ್ತಿದೆ. ಹೆಸರು ಕೇಳಿ ಇದು ಸಾಸ್ತ್ರೀಯ ಸಂಗೀತ ಗಾಯನ ಎಂದುಕೊಂಡರೆ ನೀವು ಖಂಡಿತಾ ಬೇಸ್ತು ಬೀಳುತ್ತೀರಾ. ಇದು ಬೆಂಗಳೂರು ಹುಡುಗರೇ ಸೇರಿ ಕಟ್ಟಿಕೊಂಡಿರುವ ಮ್ಯೂಸಿಕ್ ಬ್ಯಾಂಡ್ ಹೆಸರು. ಈ ತಂಡದ ಪ್ರಮುಖ ಗಾಯಕ ಮತ್ತು ಸ್ಥಾಪಕ ಸದಸ್ಯ ಸಾಗರ್ ಶಾಸ್ತ್ರಿ.
ಶಾನ್‌ದಾರ್ ಶಾನ್: ಬಾಲಿವುಡ್‌ನ ಶಾನ್‌ದಾರ್ ಗಾಯಕ, “ತನ್ಹಾ ದಿಲ್ ತನ್ಹಾ ಸಫರ್’ ಹಾಡಿನ ಮೂಲಕ ಭಾರತೀಯರ ಮನಗೆದ್ದು ಸುದೀರ್ಘ ಸಂಗೀತ ಪಯಣ ನಡೆಸಿದ ಶಾನ್ ಏರ್‌ಪೋರ್ಟ್ ಹಬ್ಬದಲ್ಲಿ ಹಾಡುತ್ತಿದ್ದಾರೆ. ಸಾಕಷ್ಟು ಕನ್ನಡ ಸಿನಿಮಾ ಗೀತೆಗಳನ್ನೂ ಅವರು ಹಾಡಿರುವುದರಿಂದ ಕನ್ನಡ ಗೀತೆಗಳನ್ನೂ ಅವರಿಂದ ನಿರೀಕ್ಷಿಸಬಹುದು.
ಎಲ್ಲಿ?: ಹಜ್ ಟರ್ಮಿನಲ್, ಕೆಂಪೇಗೌಡ ವಿಮಾನ ನಿಲ್ದಾಣ
ಯಾವಾಗ?: ಮೇ 26, ಮಧ್ಯಾಹ್ನ 2- ರಾತ್ರಿ 12