Advertisement

ಏರ್‌ಪೋರ್ಟ್‌ ಬಸ್‌ ಸಂಚಾರ ಧನಾತ್ಮಕ!

05:27 PM Nov 08, 2018 | Team Udayavani |

ಹುಬ್ಬಳ್ಳಿ: ವಿಮಾನ ಮೂಲಕ ನಗರಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇಲ್ಲಿನ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಹಾಗೂ ಸಿಬಿಟಿವರೆಗೆ ಪ್ರಾರಂಭಿಸಿರುವ ನಗರ ಸಾರಿಗೆ ಬಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

ವಿಮಾನಯಾನ ಪ್ರಯಾಣಿಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗ ವಿಮಾನ ನಿಲ್ದಾಣದಿಂದ ವೋಲ್ವೊ ಐರಾವತ್‌ ಬಸ್ಸನ್ನು ಹೊಸ ಬಸ್‌ನಿಲ್ದಾಣ, ಹಳೇ ಬಸ್‌ನಿಲ್ದಾಣ ಮಾರ್ಗವಾಗಿ ರೈಲ್ವೆ ನಿಲ್ದಾಣಕ್ಕೆ ಪ್ರತಿದಿನ ಐದು ಟ್ರಿಪ್‌ ಗಳಂತೆ ಹಾಗೂ ನಗರ ಸಾರಿಗೆ ಮಿನಿ (ಮಿಡಿ)ಬಸ್‌ಗಳನ್ನು ಸಿಬಿಟಿ ವರೆಗೆ 12 ಟ್ರಿಪ್‌ ಗಳಂತೆ ಕಾರ್ಯಾಚರಣೆ ಮಾಡುತ್ತಿದೆ. ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಮತ್ತು ಸಿಬಿಟಿಗೆ ಅಂದಾಜು 9 ಕಿಮೀ ಅಂತರವಿದೆ.

ವೋಲ್ವೊ ಐರಾವತ್‌ ಬಸ್ಸನ್ನು ವಿಮಾನ ನಿಲ್ದಾಣದಿಂದ ಬೆಳಗ್ಗೆ 9:30, ಮಧ್ಯಾಹ್ನ 12:30, 2, ಸಂಜೆ 4:30 ಹಾಗೂ ರಾತ್ರಿ 8:15 ಗಂಟೆಗೆ ನಗರಕ್ಕೆ ವಿಮಾನಗಳು ಆಗಮಿಸುವ ಸಮಯಕ್ಕೆ ಅನುಸಾರವಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕರಿಗೆ ಹೊಸ ಬಸ್‌ನಿಲ್ದಾಣಕ್ಕೆ 20 ರೂ. ಹಾಗೂ ಹಳೇ ಬಸ್‌ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ 25 ರೂ. ದರ ನಿಗದಿಪಡಿಸಲಾಗಿದೆ. ಒಂದು ವೇಳೆ ವಿಮಾನಗಳು ಆಗಮಿಸುವ ವೇಳೆಯಲ್ಲಿ ಬದಲಾವಣೆ ಆದರೆ ಪ್ರಯಾಣಿಕರಿಗೆ ಅನುಕೂಲವಾಗಲು ಅದೇ ಸಮಯಕ್ಕೆ ಈ ಬಸ್‌ಗಳನ್ನು ಓಡಿಸಲಾಗುತ್ತಿದೆ.

ಅದೇರೀತಿ ನಗರ ಸಾರಿಗೆ ಮಿನಿ (ಮಿಡಿ) ಬಸ್ಸನ್ನು ವಿಮಾನ ನಿಲ್ದಾಣದಿಂದ ಸಿಬಿಟಿ ವರೆಗೆ ಬೆಳಿಗ್ಗೆ 6:45, 7:55, 9:20, 10:30, 11:40, ಮಧ್ಯಾಹ್ನ 12:50, 2:10, 3:25, ಸಂಜೆ 4:35, 6:20, 7:30 ಗಂಟೆಗೆ ಹಾಗೂ ಹಳೇ ಬಸ್‌ ನಿಲ್ದಾಣಕ್ಕೆ ರಾತ್ರಿ 8:45 ಗಂಟೆಗೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕರಿಗೆ ಹೊಸ ಬಸ್‌ ನಿಲ್ದಾಣಕ್ಕೆ 12 ರೂ., ಹಳೇ ಬಸ್‌ ನಿಲ್ದಾಣಕ್ಕೆ 13 ರೂ. ಹಾಗೂ ರೈಲ್ವೆ ನಿಲ್ದಾಣ ಮತ್ತು ಸಿಬಿಟಿಗೆ 15 ರೂ. ದರ ನಿಗದಿಪಡಿಸಲಾಗಿದೆ.

ವೋಲ್ವೊ ಬಸ್‌ನಲ್ಲಿ ಪ್ರತಿದಿನ ವಿಮಾನ ನಿಲ್ದಾಣದಿಂದ ಹೊಸ ಬಸ್‌ನಿಲ್ದಾಣ, ಹಳೇ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಕ್ಕೆ ಅಂದಾಜು 100 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಅದೇರೀತಿ ನಗರ ಸಾರಿಗೆ ಮಿನಿ (ಮಿಡಿ) ಬಸ್‌ನಲ್ಲಿ ಪ್ರತಿದಿನ ವಿಮಾನ ನಿಲ್ದಾಣದಿಂದ ಸಿಬಿಟಿ ವರೆಗೆ ಅಂದಾಜು 500 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಶನಿವಾರ, ರವಿವಾರ ಹಾಗೂ ಹಬ್ಬ ಮತ್ತು ರಜೆಯ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿರುತ್ತದೆ. ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣ ವರೆಗೆ ವೋಲ್ವೊ ಬಸ್‌ಗೆ ಪ್ರತಿ ಕಿಮೀಗೆ 20-22ರೂ. ಆದಾಯವಾಗುತ್ತಿದ್ದರೆ, ಮಿನಿ ಬಸ್‌ಗೆ 27-30 ರೂ. ಆದಾಯವಾಗುತ್ತಿದೆ ಎಂದು ತಿಳಿದುಬಂದಿದೆ.

Advertisement

ಮಿನಿ ಬಸ್‌ಗಳು ವಿಮಾನನಿಲ್ದಾಣದಿಂದ ಸಿಬಿಟಿ ವರೆಗೆ ನಿಗದಿ ಪಡಿಸಿದ ಬಸ್‌ನಿಲ್ದಾಣಗಳಲ್ಲಿ ನಿಲುಗಡೆ ಸೌಲಭ್ಯ ಹೊಂದಿದ್ದರೆ, ವೋಲ್ವೊ ಬಸ್‌ ವಿಮಾನ ನಿಲ್ದಾಣದಿಂದ ನೇರವಾಗಿ ಹೊಸ ಬಸ್‌ ನಿಲ್ದಾಣ, ಹಳೇ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಸೌಲಭ್ಯ ಹೊಂದಿದೆ.

ಚಾಲಕ ಕಂ ನಿರ್ವಾಹಕ
ವಿಮಾನ ನಿಲ್ದಾಣದಿಂದ ಪ್ರಾರಂಭಿಸಲಾದ ವೋಲ್ವೊ ಐರಾವತ್‌ ಬಸ್‌ಗೆ ಚಾಲಕ ಕಂ ನಿರ್ವಾಹಕ ನಿರ್ವಹಣೆ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣದ ಆಗಮನ ಸ್ಥಳದ ಮುಂಭಾಗದಲ್ಲಿ ವೋಲ್ವೊ ಬಸ್‌ ನಿಲುಗಡೆ ವ್ಯವಸ್ಥೆ ಹೊಂದಿದೆ. ಆದರೆ ಅಲ್ಲಿ ಸಾರಿಗೆ ಬಸ್‌ ನಿಲುಗಡೆ ಬಗ್ಗೆ ಫಲಕವಿಲ್ಲ. ಇದರಿಂದ ಪ್ರಯಾಣಿಕರು ಕೊಂಚ ಗೊಂದಲಕ್ಕೊಳಗಾಗುವ ಸಾಧ್ಯತೆ ಇದೆ. 

ವಿಮಾನಯಾನ ಪ್ರಯಾಣಿಕರಿಗೆ ಅನುಕೂಲವಾಗಲೆಂದು ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಹಾಗೂ ಸಿಬಿಟಿ ವರೆಗೆ ಕಲ್ಪಿಸಲಾದ ನಗರ ಸಾರಿಗೆ ಬಸ್‌ ವ್ಯವಸ್ಥೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೋಲ್ವೊ ಐರಾವತ್‌ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 100 ಪ್ರಯಾಣಿಕರು ಹಾಗೂ ಮಿನಿ (ಮಿಡಿ) ಬಸ್‌ಗಳಲ್ಲಿ ಸರಾಸರಿ 500 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ವೋಲ್ವೊ ಬಸ್‌ನಿಂದ ಪ್ರತಿ ಕಿಮೀಗೆ 20-22 ರೂ. ಹಾಗೂ ಮಿನಿ ಬಸ್‌ನಿಂದ ಪ್ರತಿ ಕಿಮೀಗೆ 27-30 ರೂ. ಆದಾಯ ಬರುತ್ತಿದೆ. ವಿವೇಕಾನಂದ ವಿಶ್ವಜ್ಞ ಮತ್ತು ಅಶೋಕ ಪಾಟೀಲ,
ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ವಿಭಾಗೀಯ ಸಾರಿಗೆ ನಿಯಂತ್ರಕ

 ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next