ಬೆಳಗಾವಿ:ತಾಲೂಕಿನ ಸಾಂಬ್ರಾ ವಾಯುಸೇನಾ ತರಬೇತಿ ಕೇಂದ್ರದಲ್ಲಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹರಿಯಾಣ ಮೂಲದ ಏರ್‌ಮ್ಯಾನ್ ಸುರಕ್ಷತೆಗಾಗಿ ನೀಡಿದ್ದ ರೈಫಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಹರಿಯಾಣ ಮೂಲದ ಅಮೀರಖಾನ್ ಹಸಬು (24) ಸುಮಾರು ಎರಡೂವರೆ ವರ್ಷಗಳಿಂದ ಸಾಂಬ್ರಾ ವಾಯು ಸೇನಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಬೆಳಗ್ಗೆ ಕರ್ತವ್ಯದಲ್ಲಿದ್ದಾಗ ಏಕಾಏಕಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೊದಲ ಎರಡು ಗುಂಡುಗಳು ಈತನಿಗೆ ತಾಗಿಲ್ಲ. ಮೂರನೇ ಗುಂಡು ತಲೆಗೆ ಬಿದ್ದು ಸ್ಥಳದಲ್ಲಿಯೇ ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.
ಮೊದಲು ಸಾಂಬ್ರಾದಲ್ಲಿ ವಾಯುಸೇನೆಗೆ ಆಯ್ಕೆಯಾಗಿ ಇಲ್ಲಿಯೇ ತರಬೇತಿ ಮುಗಿಸಿ ಬೇರೆ ರಾಜ್ಯಕ್ಕೆ ಹೋಗಿದ್ದ. ನಂತರ ಎರಡೂವರೆ ವರ್ಷಗಳಿಂದ ಮತ್ತೆ ಸಾಂಬ್ರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಬೆಳಗ್ಗೆ ಕರ್ತವ್ಯದಲ್ಲಿ ಇದ್ದಾಗಲೇ ತನ್ನ ಬಳಿ ಇದ್ದ ರೈಫಲ್‌ದಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹರಿಯಾಣಕ್ಕೆ ಕಳುಹಿಸಲಾಗುವುದು. ವಾಯುಸೇನೆ ಅಧಿ ಕಾರಿಗಳು ಅವರ ವಿಮಾನದಲ್ಲಿ ಮೃತದೇಹವನ್ನು ರವಾನಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಮಾರೀಹಾಳ ಠಾಣೆ ಇನ್ಸ್‌ಪೆಕ್ಟರ್ ವಿಜಯಕುಮಾರ ಸಿನ್ನೂರ ತಿಳಿಸಿದ್ದಾರೆ.
ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಮಾರೀಹಾಳ ಠಾಣೆ ಇನ್ಸ್‌ಪೆಕ್ಟರ್ ವಿಜಯಕುಮಾರ ಸಿನ್ನೂರ, ಸಿಬ್ಬಂದಿಗಳಾದ ಶ್ರೀಕಾಂತ ಹಳಮನಿ, ಮಂಜುನಾಥ ಬಡಿಗೇರ ಭೇಟಿ ನೀಡಿ ಪರಿಶೀಲನೆ ನಡೆಸಿದರು.