Advertisement

ಶ್ರೀ ಸಾಮಾನ್ಯರ ಕೈಗೆಟಕುವ ವಿಮಾನಯಾನ: ಮಧ್ಯಮ, ಮೇಲ್ಮಧ್ಯಮ ವರ್ಗಗಳ ವೈಮಾನಿಕಯಾನದ ಕನಸು- ನನಸು

12:17 PM Oct 25, 2020 | Suhan S |

ಬೆಂಗಳೂರು: ಸಾಮಾನ್ಯವಾಗಿ ಹಬ್ಬದ ಸೀಜನ್‌ಗಳಲ್ಲಿ ರೈಲು ಮತ್ತು ಬಸ್‌ಗಳು ಭರ್ತಿ ಆಗುತ್ತಿದ್ದವು. ಆದರೆ, ಈ ಬಾರಿ ವಿಮಾನಗಳು ಭರ್ತಿ ಆಗುತ್ತಿವೆ. ಇದು “ಕೋವಿಡ್‌-19’ರ ಎಫೆಕ್ಟ್! ಕೋವಿಡ್‌-19 ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಬಹು ತೇಕ ವೈಮಾನಿಕ ಸೇವೆ ಕಂಪನಿಗಳು ಕೇಂದ್ರ ಸರ್ಕಾರದ ಸೂಚನೆಯಂತೆ ಕೈಗೆಟಕುವ ದರ ನಿಗದಿ  ಪಡಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಿ ರುವುದು ಕಂಡುಬರುತ್ತಿದೆ. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳ ನಡುವಿನ ಅಂತರ ತಗ್ಗಲು ಪರೋಕ್ಷವಾಗಿ ಇದು ಕಾರಣವಾಗುತ್ತಿದೆ.

Advertisement

ಈ ಮೊದಲು 1 ಮತ್ತು 2ನೇ ಹಂತದ ನಗರಗಳಿಗೆ ತೆರಳುವ ಮಧ್ಯಮ ವರ್ಗದ ಜನ ಹೆಚ್ಚಾಗಿ ರೈಲು ಮತ್ತು ಬಸ್‌ಗಳಲ್ಲಿ ಊರುಗಳಿಗೆ ತೆರಳುತ್ತಿದ್ದರು. ಇದರಿಂದ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರ ಹಲವು ಮಾರ್ಗಗಳಲ್ಲಿ 2,000ರಿಂದ 2,500 ರೂ.ವರೆಗೂ ಇರುತ್ತಿತ್ತು. ಆದರೆ, ಈಗ ಅದೇ ಮೊತ್ತದಲ್ಲಿ ಬೆಂಗಳೂರಿ  ನಿಂದ ಮಂಗಳೂರು, ಬೆಳಗಾವಿ, ಹುಬ್ಬಳ್ಳಿಗೆ ತೆರಳಬಹುದಾಗಿದೆ.

ಸುರಕ್ಷತೆ, ಸಮಯ ಉಳಿತಾಯ: “ಬೆಂಗಳೂರಿನಿಂದ ಬೆಳಗಾವಿಗೆ ನಾನು ಹಬ್ಬಕ್ಕೆ ಕೊರೊನಾ ಪೂರ್ವದಲ್ಲಿ ರೈಲು ಅಥವಾ ಹವಾನಿಯಂತ್ರಿತ ಬಸ್‌ನಲ್ಲಿ ತೆರಳುತ್ತಿದ್ದೆ. ತಿಂಗಳು ಮೊದಲೇ ಬುಕಿಂಗ್‌ ಮಾಡಿದರೆ, ಸಾಮಾನ್ಯ ದರದಲ್ಲಿ ಸೀಟು ಸಿಗುತ್ತಿತ್ತು. ಕೊನೆ ಕ್ಷಣ  ದಲ್ಲಾದರೆ ಎರಡರಿಂದ ಎರಡೂವರೆ ಸಾವಿರ ಪಾವತಿಸಿ ಪ್ರಯಾಣಿಸಿದ ಉದಾಹರಣೆಗಳೂ ಇವೆ. ಈ ಬಾರಿ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಹೋಗುತ್ತಿದ್ದೇನೆ. ಹೋಗಿ-  ಬರುವುದು ಸೇರಿ ಪ್ರಯಾಣ ದರ 5,300 ರೂ. ಆಗಿದೆ. ಗಣೇಶ ಚತುರ್ಥಿಗೂ ವಿಮಾನದಲ್ಲೇ ತೆರಳಿದ್ದೆ. ಕಾರಿನಲ್ಲಿ ಸ್ನೇಹಿತರೊಂದಿಗೆ ತೆರಳಿದರೂ ಮೂರು ಜನರ ನಡುವೆ ಒಂದು ಮಾರ್ಗಕ್ಕೆ ಹತ್ತು ಸಾವಿರ ರೂ. ಆಗುತ್ತದೆ. ಪ್ರಯಾಣ ಅವಧಿ 10 ತಾಸುಗಳು. ವಿಮಾನದಲ್ಲಿ ಕೇವಲ 2 ತಾಸುಗಳಲ್ಲಿ ಹೋಗುತ್ತೇನೆ. ಫೇಸ್‌ ಶೀಲ್ಡ್‌ನಿಂದ ಹಿಡಿದು ಸುರಕ್ಷಿತ ಕಿಟ್‌ ಇರುತ್ತದೆ’ ಎಂದು ರಾಜಾಜಿನಗರ ನಿವಾಸಿ ರವಿ ಜಾಧವ್‌ ಹೇಳುತ್ತಾರೆ.

ಸದ್ಯ ವಿಮಾನಗಳ ಒಟ್ಟಾರೆ ಸಾಮರ್ಥ್ಯದ ಪೈಕಿ ಶೇ. 60ರಷ್ಟು ಪ್ರಯಾಣಕರನ್ನು ಕೊಂಡೊಯ್ಯಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಪ್ರಯಾಣ ದರ ಕೂಡ 2ರಿಂದ 3 ಸಾವಿರ ರೂ.ಗಳ ಆಸು ಪಾಸು ಇದೆ. ಹೋಗಿ-ಬರುವ ಟಿಕೆಟ್‌ ಬುಕಿಂಗ್‌ ಒಮ್ಮೆಲೆ ಮಾಡಿದರೆ, ಮತ್ತಷ್ಟು ಕಡಿಮೆ ಆಗುತ್ತದೆ. ಆದರೆ, ಸ್ಪರ್ಧಾತ್ಮಕ ದರ ಇರುವುದರಿಂದ ಸೀಟುಗಳ ಬುಕಿಂಗ್‌ನ ನಿಖರ ಮಾಹಿತಿ ಬಗ್ಗೆ ಎಲ್ಲ ಕಂಪನಿಗಳು ಗೌಪ್ಯತೆ ಕಾಪಾಡಿಕೊಂಡಿವೆ. “ಬುಕಿಂಗ್‌ ಟ್ರೆಂಡ್‌ ಬಗ್ಗೆ ಈಗಲೇ ಹೇಳುವುದು ತುಂಬಾ ಕಷ್ಟ. ಹಿಂದಿನ ಹಬ್ಬದ ಸೀಜನ್‌ಗಳಿಗೆ ಹೋಲಿಸಿದರೆ, ಕೊರೊನಾ ನಡುವೆಯೂ ಉತ್ತಮ ಸ್ಪಂದನೆಯಂತೂ ಇದೆ’ ಎಂದು ಇಂಡಿಗೊ ಕಂಪೆನಿಯ ವಕ್ತಾರರು “ಉದಯವಾಣಿ’ಗೆ ತಿಳಿಸುತ್ತಾರೆ.

ನಿತ್ಯ 385 ವಿಮಾನಗಳ ಹಾರಾಟ: ಕೋವಿಡ್‌-19 ಪೂರ್ವದಲ್ಲಿ ನಿತ್ಯ ಆಗಮನ ಮತ್ತು ನಿರ್ಗಮನ ಸೇರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ದಿಂದ ಸರಾಸರಿ 700 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಕೋವಿಡ್ ನಂತರ ಅಂದರೆ ಮೇ-  ಜುಲೈ ಅವಧಿಯಲ್ಲಿ ಅಂದಾಜು 200-215 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಈಗ ಹಬ್ಬದ ಸೀಜನ್‌ ಶುರುವಾದಾಗಿನಿಂದ ಪ್ರತಿದಿನ ಆಗಮನ-ನಿರ್ಗಮನ ಸೇರಿ 385 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಇದರಲ್ಲಿ ಹೆಚ್ಚು ಇಂಡಿಗೊ ಇದ್ದು, ಪುಣೆ, ಮುಂಬೈ, ಕೊಲ್ಕತ್ತ ಸೇರಿದಂತೆ ಉತ್ತರ ಭಾರತದ ಪ್ರಮುಖ ನಗರಗಳ ಕಡೆಗೆ ಹಾರುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. “ಹಬ್ಬದ ಸೀಜನ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದು ನಿಜ. ಯಾವ ಮಾರ್ಗದಲ್ಲಿ ಹಾಗೂ ಎಷ್ಟು ಏರಿಕೆ ಆಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ. ಮುಂದಿನ ವಾರದಲ್ಲಿ ವರದಿ ಬಿಡುಗಡೆ ಆಗಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಲು ಮುಖ್ಯವಾಗಿ ನಿಲ್ದಾಣದಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು, ಪ್ರಯಾಣದ ಅವಧಿ ತುಂಬಾ ಕಡಿಮೆ ಇರುವುದು ಮತ್ತಿತರ ಅಂಶಗಳು ಕಾರಣವಾಗಿರಬಹುದು’ ಎಂದು ಬಿಐಎಎಲ್‌ ವಕ್ತಾರರು ಸ್ಪಷ್ಟಪಡಿಸಿದರು.

Advertisement

ಕೆಎಸ್‌ಆರ್‌ಟಿಸಿ ಬಸ್‌ಗಳ ಬುಕಿಂಗ್‌ನಲ್ಲಿ ಇಳಿಕೆ :  ಕೋವಿಡ್‌ ಪೂರ್ವದಲ್ಲಿ ದಸರಾ ಸಮಯದಲ್ಲಿ 50-55 ಸಾವಿರ ಟಿಕೆಟ್‌ ಬುಕಿಂಗ್‌ ಆಗುತ್ತಿತ್ತು. ಈ ಬಾರಿ ಕೇವಲ 8,000-8,500 ಸೀಟುಗಳು ಬುಕಿಂಗ್‌ ಆಗಿವೆ. ಅಂದರೆ, ಹಿಂದಿನ ಸ್ಥಿತಿಗೆ ಹೋಲಿಸಿದರೆ ಶೇ. 10 ಕೂಡ ಆಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್‌ ರೆಡ್ಡಿ ತಿಳಿಸುತ್ತಾರೆ. ಒಟ್ಟಾರೆ 8,250 ಬಸ್‌ಗಳ ಪೈಕಿ 5,300 ಶೆಡ್ನೂಲ್‌ಗ‌ಳು ಕಾರ್ಯಾಚರಣೆ ಮಾಡುತ್ತಿವೆ. ಹಬ್ಬದ ಹಿನ್ನೆಲೆಯಲ್ಲಿ 50 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದ್ದು, 200 ಬಸ್‌ಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಇವು ಕಾರ್ಯಾಚರಣೆ ಮಾಡಲಿವೆ.

ವಿಮಾನ ನಿಲ್ದಾಣ ತಲುಪುವುದೇ ತ್ರಾಸದಾಯಕ :  ವಿಮಾನ ನಿಲ್ದಾಣ ತಲುಪುವುದೇ ತ್ರಾಸದಾಯಕ ಎಂದು ಕೆಲ ಪ್ರಯಾಣಿಕರು ತಿಳಿಸುತ್ತಾರೆ. ನಿಲ್ದಾಣವು ನಗರದಿಂದ ಹೊರ ವಲಯದಲ್ಲಿದ್ದು, ಹೆಚ್ಚು ಪ್ರಯಾಣಿಕರ ದಟ್ಟಣೆ ಉಂಟಾದರೆ, ನಿಗದಿತ ಅವಧಿಯಲ್ಲಿ ತಲುಪುವುದು ಕಿರಿಕಿರಿ ಆಗುತ್ತದೆ. ಆ್ಯಪ್‌ ಆಧಾರಿತ ಕ್ಯಾಬ್‌ಗಳನ್ನು ಬುಕಿಂಗ್‌ ಮಾಡಿಕೊಂಡು ಹೋಗಬೇಕು. ಆದರೆ ಬೇಡಿಕೆ ಹೆಚ್ಚಿದರೆ, ಅದು ಕೂಡ ದುಬಾರಿ ಆಗಬಹುದು ಎಂದು ಪ್ರಯಾಣಿಕ ಮಹೇಶ್‌ ತಿಳಿಸುತ್ತಾರೆ.

 

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next