ಕಲಬುರಗಿ: ರಾಷ್ಟ್ರ ರಾಜಧಾನಿ ದೆಹಲಿಗೆ ಕಲಬುರಗಿಯಿಂದ ವಿಮಾನಯಾನ ಸೇವೆ ಬುಧವಾರದಿಂದ ಆರಂಭವಾಗಿದೆ. ಇಲ್ಲಿನ ವಿಮಾನ ನಿಲ್ದಾಣದಿಂದ ವಾರದಲ್ಲಿ ಮೂರು ದಿನ ದೆಹಲಿ (ಹಿಂಡನ್)ಗೆ ಸ್ಟಾರ್ ಏರ್ ಸಂಸ್ಥೆ ವಿಮಾನ ಹಾರಾಟ ಆರಂಭಿಸಿದೆ.
ಬುಧವಾರ ಬೆಳಿಗ್ಗೆ 10.20ಕ್ಕೆ ಮೊದಲ ವಿಮಾನ ದೆಹಲಿಗೆ ಹೊರಟಿತು. ಮಧ್ಯಾಹ್ನ 12.40ಕ್ಕೆ ಹಿಂಡನ್ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ಮಧ್ಯಾಹ್ನ 1.10ಕ್ಕೆ ಹಿಂಡನ್ ನಿಂದ ಹಾರಾಟ ಆರಂಭಿಸಿ ಮಧ್ಯಾಹ್ನ 3.30ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದೆ. ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ ಕಲಬುರಗಿ-ದೆಹಲಿ ಮಧ್ಯೆ ವಿಮಾನ ಸಂಚರಿಸಲಿದೆ.
ಮೊದಲ ವಿಮಾನ ಹಾರಾಟಕ್ಕೆ ಸಂಸದ ಡಾ. ಉಮೇಶ್ ಜಾಧವ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಮಾನ ಟಿಕೆಟ್ ಹಸ್ತಾಂತರಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಾಧವ್, ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಯಾದ ಒಂದು ವರ್ಷದಲ್ಲೇ ಸಾಕಷ್ಟು ಸಕ್ರಿಯ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಡೆದುಕೊಂಡಿದೆ. ಸದ್ಯ ಬೆಂಗಳೂರು, ದೆಹಲಿಗೆ ವಿಮಾನ ಸಂಚಾರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಕಲಬುರಗಿ- ಹೈದರಾಬಾದ್ ಹಾಗೂ ಮುಂಬೈ, ತಿರುಪತಿಗೆ ಸಂಚಾರ ಆರಂಭವಾಗಲಿದೆ ಎಂದರು.
ಇದನ್ನೂ ಓದಿ: ಕೋವಿಡ್ ನಿಯಂತ್ರಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ : ಪ್ರಿಯಾಂಕ್ ಖರ್ಗೆ ಟೀಕೆ
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ವಿಮಾನ ನಿಲ್ದಾಣದ ನಿರ್ದೇಶಕ ಎಸ್. ಜ್ಞಾನೇಶ್ವರರಾವ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್ ಇದ್ದರು.
ಮೊದಲ ವಿಮಾನದಲ್ಲಿ ಕಲಬುರಗಿಯಿಂದ ದೆಹಲಿಗೆ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಸೇರಿ 25 ಜನ ಪ್ರಯಾಣಿಕರು ಪ್ರಯಾಣಿಸಿದರು.
ಇದನ್ನೂ ಓದಿ: ಪರಿಹಾರ ಕೊಡಲು ಸರಕಾರದ ಬಳಿ ದುಡ್ಡಿಲ್ಲ! ಜಾತಿ ನಿಗಮ ಪ್ರಾಧಿಕಾರಕ್ಕೆ ದುಡ್ಡು ಎಲ್ಲಿಂದ ಬಂತು?