Advertisement

ದೀಪಾವಳಿ ವೇಳೆ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಕೆ

07:53 PM Nov 24, 2020 | mahesh |

ಉಡುಪಿ: ಹೆಚ್ಚಿದ ಪರಿಸರ ಜಾಗೃತಿ, ಪಟಾಕಿ ಬಳಕೆ ಕಡಿಮೆ ಕಾರಣದಿಂದಾಗಿ ಈ ಬಾರಿ ದೀಪಾವಳಿ ಸಂದರ್ಭ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿರುವುದು ಕಂಡು ಬಂದಿದೆ.

Advertisement

ಜಿಲ್ಲಾಡಳಿತದ ಸೂಚನೆಯಂತೆ ಉಡುಪಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕೇಂದ್ರವು ದೀಪಾವಳಿ ಹಬ್ಬದ ಪೂರ್ವ ಮತ್ತು ದೀಪಾವಳಿ ಅವಧಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಗೊತ್ತಾಗಿದೆ.

ಎಕ್ಯೂಐ 40ಕ್ಕೆ
ದೀಪಾವಳಿ ಪೂರ್ವದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಏರ್‌ ಕ್ವಾಲಿಟಿ ಇಂಡೆಕ್ಸ್‌) 53 ಇದ್ದರೆ, ದೀಪಾವಳಿ ಸಮಯದಲ್ಲಿ ಅದು 40ಕ್ಕೆ ಇಳಿಕೆಯಾಗಿದೆ. ಮಣಿಪಾಲದ ಜನವಸತಿ ಪ್ರದೇಶವಾದ ದಶರಥನಗರದಲ್ಲಿ ನ. 9ರಂದು ವಾಯು ಮಾಲಿನ್ಯ ಗುಣಮಟ್ಟದ ಮೌಲ್ಯಮಾಪನ ನಡೆಸಲಾಗಿತ್ತು.

ದೀಪಾವಳಿ ದಿನಗಳಲ್ಲಿ ಕಡಿಮೆ
ದೀಪಾವಳಿ ಮೊದಲು 24 ತಾಸುಗಳ ಕಾಲ ನಡೆಸಿದ ನಾಲ್ಕು ಮಾನದಂಡಗಳ ಮೌಲ್ಯಮಾಪನದ ವೇಳೆ ಗಾಳಿಯಲ್ಲಿ ಪಿಎಂ10 ಸೂಕ್ಷ್ಮ ಕಣಗಳು 53, ಪಿಎಂ 2.5 ಸೂಕ್ಷ್ಮ ಕಣಗಳು 34, ಎಸ್‌ಒ2 (ಗಂಧಕದ ಡೈಆಕ್ಸೈಡ್‌) ಸೂಕ್ಷ್ಮ ಕಣಗಳು 8 ಮತ್ತು ಎನ್‌ಒ2 (ಸಾರಜನಕ ಡೈಆಕ್ಸೈಡ್‌) ಸೂಕ್ಷ್ಮ ಕಣಗಳು 10 ಕಂಡು ಬಂದಿವೆ. ದೀಪಾವಳಿಯ ಮೂರು ದಿನ ಮಾಲಿನ್ಯವು ತೀರಾ ಕಡಿಮೆಯಾಗಿದೆ. ನ. 14ರಂದು ಪಿಎಂ10 ಸೂಕ್ಷ್ಮ ಕಣಗಳು 43, ಪಿಎಂ 2.5 ಸೂಕ್ಷ್ಮ ಕಣಗಳು 22, ಎಸ್‌ಒ2 ಸೂಕ್ಷ್ಮ ಕಣಗಳು 7 ಮತ್ತು ಎನ್‌ಒ2 ಸೂಕ್ಷ್ಮ ಕಣಗಳು 10, ನ. 15ರಂದು ಪಿಎಂ10 ಸೂಕ್ಷ್ಮ ಕಣಗಳು 51, ಪಿಎಂ 2.5 ಸೂಕ್ಷ್ಮ ಕಣಗಳು 22, ಎಸ್‌ಒ2 ಸೂಕ್ಷ್ಮ ಕಣಗಳು 7 ಮತ್ತು ಎನ್‌ಒ2 ಸೂಕ್ಷ್ಮ ಕಣಗಳು 10 ಹಾಗೂ ನ. 16ರಂದು ಪಿಎಂ10 ಸೂಕ್ಷ್ಮ ಕಣಗಳು 40, ಪಿಎಂ 2.5 ಸೂಕ್ಷ್ಮ ಕಣಗಳು 20, ಎಸ್‌ಒ2 ಸೂಕ್ಷ್ಮ ಕಣಗಳು 6 ಮತ್ತು ಎನ್‌ಒ2 ಸೂಕ್ಷ್ಮ ಕಣಗಳು 10 ಪ್ರಮಾಣದಲ್ಲಿ ಕಂಡು ಬಂದಿವೆ.

ಉಡುಪಿ ವಾತಾವರಣ ಉತ್ತಮ
ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಎಕ್ಯೂಐ 0-50 ಇದ್ದರೆ ಆ ವಾತಾವರಣ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಹಾಗೆ ನೋಡುವುದಾದರೆ ಮಣಿಪಾಲ ದಂತಹ ನಗರದಲ್ಲಿ ಕೈಗಾರಿಕಾ ಪ್ರದೇಶ‌ ಸನಿಹವೇ ಎಕ್ಯೂಐ 50ಕ್ಕಿಂತ ಕಡಿಮೆ ದಾಖಲಾಗಿದೆ. ಆದ್ದರಿಂದ ಉಡುಪಿಯ ವಾತಾವರಣವು ಉತ್ತಮವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

Advertisement

ಶಬ್ದಮಾಲಿನ್ಯಕ್ಕೆ ಬಿದ್ದಿಲ್ಲ ಕಡಿವಾಣ
ದಶರಥನಗರದಲ್ಲಿಯೇ ಶಬ್ದಮಾಲಿನ್ಯ ಅಂದಾಜಿಸುವ ಕೇಂದ್ರ ಸ್ಥಾಪಿಸಲಾಗಿತ್ತು. ಇದು ನಾಲ್ಕು ದಿನಗಳಲ್ಲಿ ಸಂಜೆ 6ರಿಂದ ರಾತ್ರಿ 12 ಗಂಟೆಯವರೆಗೆ ಮೇಲ್ವಿಚಾರಣೆ ನಡೆಸಿತು. ಈ ಅವಧಿಯಲ್ಲಿ ನ. 9ರಂದು ಸರಾಸರಿ 55 ಡೆಸಿಬಲ್‌, 14ರಂದು 63.5 ಡೆಸಿಬಲ್‌, 15ರಂದು 64.8 ಡೆಸಿಬಲ್‌ ಮತ್ತು 16ರಂದು 65.4 ಡೆಸಿಬಲ್‌ ಶಬ್ದ ದಾಖಲಾಗಿದೆ. ಅಂದರೆ ಸಾಮಾನ್ಯ ದಿನಕ್ಕಿಂತ ದೀಪಾವಳಿ ಅವಧಿಯಲ್ಲಿ 10 ಡೆಸಿಬಲ್‌ ತೀವ್ರತೆ ಹೆಚ್ಚಾಗಿದೆ. ರಾತ್ರಿಯಾಗುತ್ತಿದ್ದಂತೆ ಶಬ್ದದ ತೀವ್ರತೆ ಹೆಚ್ಚಾಗಿರುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿದೆ.

ಮೌಲ್ಯಮಾಪನ ಫಲಿತಾಂಶಕ್ಕೆ ಹಲವು ಕಾರಣ
ಜನವಸತಿ ಪ್ರದೇಶದಲ್ಲಿಯೇ ಮೌಲ್ಯಮಾಪನ ಮಾಡಿದ್ದೇವೆ. ಶಬ್ದ ಮಾಲಿನ್ಯದಲ್ಲಿ ಹೆಚ್ಚಳವಾಗಿದೆ. ಆದರೆ ವಾಯುಮಾಲಿನ್ಯದಲ್ಲಿ ಇಳಿಕೆ ಕಂಡಿದೆ. ಸಾಮಾನ್ಯ ದಿನಗಳಲ್ಲಿ ವಾಹನ ಓಡಾಟ, ಕೈಗಾರಿಕೆಯಿಂದ ವಾಯುಮಾಲಿನ್ಯ ಇದ್ದಿರಬಹುದು. ದೀಪಾವಳಿ ರಜಾ ಅವಧಿಯಲ್ಲಿ ಕೈಗಾರಿಕೆಗಳಿಗೆ ರಜೆ, ವಾಹನಗಳಲ್ಲಿ ಜನರ ಓಡಾಟ ಕಡಿಮೆಯಾಗಿರುವ ಸಾಧ್ಯತೆ ಇದೆ. ಉಡುಪಿಯ ವಾಯು ಗುಣಮಟ್ಟ ಉತ್ತಮವಾಗಿದೆ.
-ವಿಜಯ ಹೆಗಡೆ, ಪರಿಸರ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next