Advertisement
ದಟ್ಟ ಮಬ್ಬಿನಿಂದಾಗಿ ಮಧ್ಯಾಹ್ನದ ಹೊತ್ತಿಗೆ ಕತ್ತಲೆ ಕವಿಯುತ್ತದೆ. ಕೆಲ ದಿನಗಳ ಹಿಂದೆ 50 ಮೀಟರ್ ದೂರದಲ್ಲಿರುವ ವಸ್ತುಗಳು ಕಾಣಿಸದೆ ಯಮುನಾ ಎಕ್ಸ್‌ಪ್ರೆಸ್ ಹೈವೇಯಲ್ಲಿ ಸರಣಿ ಅಪಘಾತವಾಗಿತ್ತು. ರವಿವಾರ ವಾತಾವರಣ ಇನ್ನಷ್ಟು ಹದಗೆಟ್ಟು ಆರೋಗ್ಯವಂತ ವ್ಯಕ್ತಿಗಳಿಗೂ ದಿಲ್ಲಿಯ ಗಾಳಿ ಯೋಗ್ಯವಲ್ಲ ಎಂಬ ಮಟ್ಟಕ್ಕಿಳಿದಿತ್ತು. 100 ಮೀಟರ್ ದೂರದಲ್ಲಿರುವ ವಸ್ತುಗಳು ಕೂಡ ಗೋಚರಿಸುತ್ತಿರಲಿಲ್ಲ. ಗಾಳಿಯಲ್ಲಿರುವ ಮಾಲಿನ್ಯದ ಮಟ್ಟವನ್ನು ತಿಳಿಸುವ ಪಿಎಂ 2.5 ಮತ್ತು ಪಿಎಂ 10ಮಟ್ಟ ಗರಿಷ್ಠ ಮಟ್ಟಕ್ಕೇರಿಯಾಗಿದೆ. ಸದ್ಯಕ್ಕೆ ಈ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಯಾವ ಮಾರ್ಗವೂ ಇಲ್ಲದಿರುವುದರಿಂದ ಚಳಿ ಕಡಿಮೆಯಾಗಿ ಮಾಲಿನ್ಯ ಸ್ವಯಂ ಕಡಿಮೆಯಾಗುವುದನ್ನು ಕಾಯುವುದೊಂದೇ ಪರಿಹಾರ.
ವಿದ್ಯುತ್ ಸ್ಥಾವರ ಮತ್ತು ಫ್ಯಾಕ್ಟರಿಗಳನ್ನು ಮುಚ್ಚುವುದು, ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸುವುದು, ಜನರಿಗೆ ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡುವುದು ಇತ್ಯಾದಿ ತತ್‌ಕ್ಷಣದ ಕ್ರಮ ಗಳನ್ನು ಕೈಗೊಳ್ಳಲಾಗುತ್ತದೆ. ಜನರು ದೀಪಾವಳಿಗೆ ಪಟಾಕಿ ಸುಡುವುದನ್ನು ನಿಷೇಧಿಸಿದರೆ ಮಾಲಿನ್ಯ ನಿಯಂತ್ರಣಕ್ಕೆ ಬರಬಹುದು ಎಂಬ ಸುಪ್ರೀಂಕೋರ್ಟಿನ ತೀರ್ಮಾನ ಕೂಡ ಸುಳ್ಳಾಗಿದೆ. ಕೈಗಾರಿಕೋದ್ಯಮ, ಇಟ್ಟಿಗೆ ನಿರ್ಮಾಣ, ವಾಹನಗಳು, ಡೀಸೆಲ್ ಜನರೇಟರ್‌ಗಳು, ಕಲ್ಲಿದ್ದಲು, ರಸ್ತೆಯ ಧೂಳು, ರೈತರು ಬತ್ತದ ಹುಲ್ಲು ಸುಡುವುದು ಹೀಗೆ ದಿಲ್ಲಿಯ ಮಾಲಿನ್ಯಕ್ಕೆ ಹಲವಾರು ಕಾರಣಗಳಿವೆ. ಹಾಗೆಂದು ಇವುಗಳು ಹೊಸ ಕಾರಣಗಳೇನೂ ಅಲ್ಲ. ದಿಲ್ಲಿಯ ವಾಯುಮಾಲಿನ್ಯಕ್ಕೆ ಶೇ.30 ಸ್ಥಳೀಯ ಕಾರಣವಾದರೆ ಶೇ.70 ಹೊರಗಿನ ಕಾರಣಗಳಿವೆ. ಹೀಗಾಗಿ ಇದು ದಿಲ್ಲಿಯ ಸರಕಾರ ಅಥವಾ ಕೇಂದ್ರ ಸರಕಾರ ಮಾತ್ರ ಪರಿಹರಿಸಬಹುದಾದ ಸಮಸ್ಯೆಯಲ್ಲ. ಅಂತೆಯೇ ರಾಜಕೀಯ ಲಾಭಕ್ಕಾಗಿ ಪರಸ್ಪರರನ್ನು ದೂಷಿಸಿದರೂ ಪರಿಹಾರ ಸಿಗುವುದಿಲ್ಲ. ಟಿವಿಯ ಚರ್ಚಾಕೊಠಡಿಗಳಲ್ಲಿ ಕುಳಿತು ಕಂಠಶೋಷಣೆ ಮಾಡಿದರೆ ಅಥವಾ ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆದರೆ ವಾಯು ಮಾಲಿನ್ಯವೇನೂ ಕಡಿಮೆ ಯಾಗುವುದಿಲ್ಲ. ದಿಲ್ಲಿಯನ್ನು ಜನವಾಸಕ್ಕೆ ಸಹನೀಯಗೊಳಿಸುವ ನಗರ ಮಾಡಬೇಕೆಂದಿದ್ದರೆ ವಾಯುಮಾಲಿನ್ಯಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ. ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕಾದರೆ ಸಮಸ್ಯೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು ಮತ್ತು ಸಂಬಂಧಪಟ್ಟ ಎಲ್ಲರೂ ಈ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆ ಯಲ್ಲಿ ಸಹಭಾಗಿಗಳಾಗಬೇಕು. ನೀತಿ ರೂಪ ಕರು ಹವಾನಿಯಂತ್ರಿತ ಕೊಠಡಿಯಿಂದ ಹೊರಬಂದು ವಾಸ್ತವ ಪರಿಸ್ಥಿತಿ ಯನ್ನು ಅರಿತು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಇಲ್ಲ ವಾದರೆ ದಿಲ್ಲಿಯ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ದೇಶದ ಉಳಿದ ನಗರಗಳ ಕಥೆಯೂ ಹಾಗೆಯೇ ಆಗುತ್ತದೆ.