*ಸ್ಪೋರ್ಟ್ಸ್ ಇಂಡಿಯಾ ಮಧ್ಯಪ್ರವೇಶ: ತಡರಾತ್ರಿ ಮತ್ತೂಂದು ವಿಮಾನದಲ್ಲಿ ಯಾನ
Advertisement
ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಹೊರಟಿದ್ದ ಕಾಮನ್ವೆಲ್ತ್ ಚಿನ್ನ ವಿಜೇತರಾದ ಮಣಿಕಾ ಬಾತ್ರಾ ಸಹಿತ ರಾಷ್ಟ್ರೀಯ ಕ್ರೀಡಾಳುಗಳಿಗೇ ಏರ್ ಇಂಡಿಯಾ ವಿಮಾನ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ.ಆಸ್ಟ್ರೇಲಿಯನ್ ಓಪನ್ ವಿಶ್ವ ಟೇಬಲ್ ಟೆನಿಸ್ ಸರಣಿಯಲ್ಲಿ ಪಾಲ್ಗೊಳ್ಳಲು, ಮೊದಲೇ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು, ರವಿವಾರ ಭಾರತೀಯ ಸ್ಪರ್ಧಿಗಳ 17 ಜನರ ತಂಡ ಒಟ್ಟಾಗಿ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಆದರೆ ಏರ್ ಇಂಡಿಯಾ ಈ ಪೈಕಿ ಕೇವಲ 10 ಮಂದಿಗೆ ಮಾತ್ರ ವಿಮಾನಕ್ಕೆ ಪ್ರವೇಶಾವಕಾಶ ನೀಡಿದೆ. ಇನ್ನುಳಿದ 7 ಮಂದಿ ತಡವಾಗಿ ಬಂದಿದ್ದಾರೆ ಎಂಬ ನೆಪವೊಡ್ಡಿ ಹೊರಕೂರಿಸಿತು. ಪರಿಣಾಮ ಸೋಮವಾರದಿಂದ ಶುರುವಾಗುವ ಕೂಟದ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಕ್ರೀಡಾಪಟುಗಳು ಕಂಗಾಲಾದರು.
ಈ ಬೆಳವಣಿಗೆ ಬಳಿಕ ಎಚ್ಚೆತ್ತುಕೊಂಡ ಸ್ಪೋರ್ಟ್ಸ್ ಇಂಡಿಯಾ (ಭಾರತೀಯ ಕ್ರೀಡಾಪ್ರಾಧಿಕಾರದ ಹೊಸ ಹೆಸರು) ಪ್ರಧಾನ ಕಾರ್ಯದರ್ಶಿ ನೀಲಂ ಕಪೂರ್ ಮಧ್ಯಪ್ರವೇಶಿಸಿದರು. ಉಳಿದ 7 ಮಂದಿಗೆ ರವಿವಾರ ತಡರಾತ್ರಿಯೇ ಮತ್ತೂಂದು ವಿಮಾನದಲ್ಲಿ ಮೆಲ್ಬರ್ನ್ಗೆ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಟ್ಟರು. ಅದನ್ನು ಮಣಿಕಾ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
Related Articles
ನಾವು ಏರ್ ಇಂಡಿಯಾ ಕೌಂಟರ್ ಬಳಿ ಹೋದಾಗ, ನಿಮ್ಮಲ್ಲಿ 10 ಮಂದಿಗೆ ಮಾತ್ರ ಪ್ರವೇಶ ಸಿಗುತ್ತದೆ. ಉಳಿದ 7 ಮಂದಿಗೆ ಸಾಧ್ಯವಿಲ್ಲ. ಎಲ್ಲ ಆಸನಗಳು ಭರ್ತಿಯಾಗಿವೆ ಎಂದರು. ವಿಷಯ ಕೇಳಿ ಆಘಾತವಾಯಿತು. ನಮ್ಮೆಲ್ಲ ಟಿಕೆಟ್‌ಗಳನ್ನು ಬಾಮರ್ ಲಾರಿ ಸಂಸ್ಥೆ ಬುಕ್ ಮಾಡಿತ್ತು ಎಂದು ಮಣಿಕಾ ಬಾತ್ರಾ ಟ್ವೀಟ್ ಮಾಡಿದ್ದಾರೆ.
Advertisement
ಏರ್ ಇಂಡಿಯಾ ಹೇಳುವುದೇನು?ಕ್ರೀಡಾಪಟುಗಳ ಬಗ್ಗೆ ನಮಗೆ ಗೌರವವಿದೆ. ಆದರೆ ನಮಗೆ ಪದ್ಧತಿ ಪ್ರಕಾರ ತಂಡದ ಕುರಿತು ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಜತೆಗೆ ಸ್ಪರ್ಧಿಗಳೂ ತಡವಾಗಿ ಬಂದರು. ಬುಕಿಂಗ್ ಮಾಡುವಾಗಲೂ ಬೇರೆ ಬೇರೆ ಪಿಎನ್‌ಆರ್‌ಗಳಿದ್ದವು. ಆದ್ದರಿಂದ ಅವರಿಗೆ ಆಸನ ನೀಡಲಾಗಲಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟೀಕರಣ ನೀಡಿದೆ.
ಸ್ಪೋರ್ಟ್ಸ್ ಇಂಡಿಯಾ ಕಾರ್ಯದರ್ಶಿ ನೀಲಂ ಕಪೂರ್ ಅಭಿಪ್ರಾಯಗಳೂ ಏರ್ ಇಂಡಿಯಾ ಹೇಳಿಕೆಗೆ ಪೂರಕವಾಗಿವೆ. “ತಂಡ 12.40ಕ್ಕೆ ಮೆಲ್ಬರ್ನ್ಗೆ ಹೊರಡಬೇಕಿತ್ತು. ನಿಯಮಗಳ ಪ್ರಕಾರ ಹೊರಡುವ ಸಮಯಕ್ಕಿಂತ 3 ಗಂಟೆ ಮುನ್ನವೇ ನಿಲ್ದಾಣದಲ್ಲಿರಬೇಕಿತ್ತು. ಆದರೆ ಸ್ಪರ್ಧಿಗಳು ಸ್ವಲ್ಪ ತಡವಾಗಿ ನಿಲ್ದಾಣ ತಲುಪಿದ್ದಾರೆ (2 ಗಂಟೆ 10 ನಿಮಿಷ ಬಾಕಿಯಿತ್ತು)’ ಎನ್ನುವುದು ನೀಲಂ ಅಭಿಪ್ರಾಯ. ಆದರೆ ವಿಮಾನ ಟಿಕೆಟ್ ಬುಕ್ ಆದ ಮೇಲೂ ಸ್ವಲ್ಪ ತಡ ಎಂಬ ಕಾರಣಕ್ಕೆ ಆ ಟಿಕೆಟ್‌ಗಳನ್ನು ಬೇರೆಯವರಿಗೆ ಏರ್ ಇಂಡಿಯಾ ನೀಡಿದ್ದು ಹೇಗೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.