ದೇವನಹಳ್ಳಿ: ತಾಲೂಕಿನ ಸಾದಹಳ್ಳಿ ಗೇಟ್ ಟೋಲ್ ಹತ್ತಿರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಐಎಎಲ್ ಸರ್ವಿಸ್ ಪ್ರೊವೈಡಿಂಗ್ ಎಂಪ್ಲಾಯಿಸ್ ಯೂನಿಯನ್ (ಏರ್ ಇಂಡಿಯಾ ಸ್ಯಾಟ್ಸ್ ಘಟಕ) ವತಿಯಿಂದ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಏರಿ ಇಂಡಿಯಾ ಸ್ಯಾಟ್ಸ್ ಕಂಪನಿಯಲ್ಲಿ ಸುಮಾರು ಮೂರು ಸಾವಿರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 44 ಕಾರ್ಮಿಕರನ್ನು ಕೆಲಸದಿಂದ ಅಮಾನತು ಮಾಡಿ ಕಾರ್ಮಿಕರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ನಮ್ಮ ಬೇಡಿಕೆಗಳು ಈಡೇರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಪ್ಲಾಯಿಸ್ ಯೂನಿಯನ್ (ಏರ್ ಇಂಡಿಯಾ ಸ್ಯಾಟ್ಸ್ ಘಟಕ) ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಡಿಯಾ ಸ್ಯಾಟ್ಸ್‌ನಲ್ಲಿ ಸಂಘಕ್ಕೆ ಮಾನ್ಯತೆ ನೀಡಬೇಕು. ಅಮಾನತಿನ ಹೆಸರಿನಲ್ಲಿ ಸಂಸ್ಥೆಯಿಂದ ಹೊರಗಿರುವ ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ಉಳಿದ ಎಲ್ಲಾ ಕಾರ್ಮಿಕರಿಗೆ ಎಂದಿನಂತೆ ಕೆಲಸ ನೀಡಬೇಕು.
ಆಡಳಿತ ಮಂಡಳಿಯವರು ಏಕಪಕ್ಷೀಯವಾಗಿ ಕಡಿಮೆ ವೇತನ ಹೆಚ್ಚಿಸಿರುವುದನ್ನು ಹಿಂಪಡೆಯಬೇಕು. ಕಾರ್ಮಿಕ ಮುಖಂಡರ ಜೊತೆ ಚರ್ಚಿಸಿ ನ್ಯಾಯಯುತವಾದ ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಕಾರ್ಮಿಕರು ಪ್ರತಿಭಟನೆ ಮಾಡುತ್ತಿದ್ದರೂ ಏರ್ ಇಂಡಿಯಾ ಸ್ಯಾಟ್ಸ್ ಯಾವುದೇ ರೀತಿ ಬೇಡಿಕೆ ಈಡೇರಿಸಿಲ್ಲ.
ವಜಾಗೊಂಡಿರುವ ಕಾರ್ಮಿಕರಿಗೆ ಪುನಃ ಕೆಲಸಕೊಡುವಂತೆ ಮಾತುಕತೆ ಮಾಡಿ, ಆಡಳಿತ ಮಂಡಳಿ ಕೆಲಸ ನೀಡುತ್ತೇವೆ ಎಂದು ಭರವಸೆ ನೀಡಿದ್ದು, ಈ ಮಾತುಕತೆ ಆದಮೇಲೆ ಇಲ್ಲಿವರೆಗೂ ಆಡಳಿತ ಮಂಡಳಿ ಯಾವುದೇ ಒಬ್ಬ ಕಾರ್ಮಿಕನನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ.
ಇದು ಸಂಘ ಹಾಗೂ ಕಾರ್ಮಿಕ ವಿರೋಧಿ ನೀತಿ ಎಂಬುದಾಗಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಶಿವಶಂಕರ್, ಶಶಿಕುಮಾರ್, ಕಾರ್ಯದರ್ಶಿ ಪ್ರತಾಪಸಿಂಹ, ಖಜಾಂಚಿ ನಾಗರಾಜ್ ಮತ್ತಿತರರಿದ್ದರು.