ಕೊಲಂಬೋ : ಕೊಲಂಬೋ ಮತ್ತು ವಾರಾಣಸಿ ನಡುವೆ ಈ ವರ್ಷ ಆಗಸ್ಟ್‌ನಿಂದ ಏರಿಂಡಿಯ ನೇರ ವಿಮಾನ ಹಾರಾಟ ಆರಂಭಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.
ಶ್ರೀಲಂಕೆಗೆ ಎರಡು ದಿನಗಳ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ವೈಶಾಖ ದಿನಾಚರಣೆಯಲ್ಲಿ ಪಾಲ್ಗೊಂಡು, ಉಭಯ ದೇಶಗಳ ನಡುವಿನ ಬಾಂಧ್ಯವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೊಲಂಬೋ-ವಾರಾಣಸಿ ಏರಿಂಡಿಯಾ ನೇರ ವಿಮಾನ ಹಾರಾಟವು ಮುಖ್ಯ ಪಾತ್ರವನ್ನು ವಹಿಸಲಿದೆ ಎಂದು ಹೇಳಿದರು. ಲಂಕೆಯ ಬೌದ್ಧರ ಅತ್ಯಂತ ದೊಡ್ಡ ಹಬ್ಬವಾಗಿರುವ ವೈಶಾಖ ದಿನಾಚರಣೆಗೆ ಅಂತಾರಾಷ್ಟ್ರೀಯ ಮಹತ್ವ ಪ್ರಾಪ್ತವಾಗಿದೆ.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಲಂಕೆಯ ಪ್ರಧಾನಿ ರಣಿಲ್ ವಿಕ್ರಮಸಿಂಘ ಅವರು ಅಬ್ಬರದ ಸಾಂಪ್ರದಾಯಿಕ ಸಂಭ್ರಮೋಲ್ಲಾಸಗಳ ನಡುವೆ ಸ್ವಾಗತಿಸಿದರು.
ಸಮಾರಂಭದಲ್ಲಿ ಮಾತನಾಡುತ್ತಾ ಕೊಲಂಬೋ-ವಾರಾಣಸಿ ನಡುವೆ ನೇರ ಏರಿಂಡಿಯ ವಿಮಾನ ಹಾರಾಟವನ್ನು ಪ್ರಕಟಿಸಿದ ಪ್ರಧಾನಿ ಮೋದಿ, “ನನ್ನ ತಮಿಳು ಸಹೋದರ – ಸಹೋದರಿಯರು ಕೂಡ ಈಗಿನ್ನು ಕಾಶೀ ವಿಶ್ವನಾಥನ ಪುಣ್ಯ ಭೂಮಿಯಾಗಿರುವ ವಾರಾಣಸಿಗೆ ಭೇಟಿ ನೀಡುವರು’ ಎಂದು ಹೇಳಿದರು.
“ಲಂಕೆಯೊಂದಿಗಿನ ನಮ್ಮ ಬಾಂಧವ್ಯದಲ್ಲಿ ಮಹೋನ್ನತ ಅವಕಾಶಗಳ ಹೊಸ್ತಿಲಲ್ಲಿ ನಾವೀಗ ನಿಂತಿದ್ದೇವೆ’ ಎಂದು ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ಸಿರಿಸೇನಾ ಅವರ ಆಹ್ವಾನದ ಮೇರೆಗೆ ಲಂಕೆಗೆ ಭೇಟಿ ನೀಡುತ್ತಿದ್ದು 2015ರ ಮಾರ್ಚ್ ಬಳಿಕದ ಎರಡನೇ ಭೇಟಿ ಇದಾಗಿದೆ.