ನವದೆಹಲಿ:ಇತ್ತೀಚೆಗೆ ಖರೀದಿ ಮಾಡಲಾಗಿರುವ 470 ವಿಮಾನಗಳ ಒಟ್ಟು ವೆಚ್ಚ 5.79 ಲಕ್ಷ ಕೋಟಿ ರೂ.ಗಳು. ವರ್ಷಾಂತ್ಯಕ್ಕೆ ವಿಸ್ತಾರ ಏರ್‌ಲೈನ್ಸ್ ಹಾಗೂ ಏರ್‌ಇಂಡಿಯಾ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ವಿಲೀನದ ಬಳಿಕ ವಿಸ್ತಾರ ಹೆಸರನ್ನು ಕೈಬಿಡಲಾಗುತ್ತದೆ ಎಂದು ಟಾಟಾ ಸನ್ಸ್ ಮಾಲೀಕತ್ವದ ಏರ್ ಇಂಡಿಯಾದ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿದ್ದಾರೆ.
ಏರ್‌ಬಸ್ ಮತ್ತು ಬೋಯಿಂಗ್ ಕಂಪನಿಗಳಿಂದ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿನ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್ ಇಂಡಿಯಾಕ್ಕೆ ಮತ್ತೂಮ್ಮೆ ಗುರುತಿಸಿಕೊಳ್ಳಲು ಎಲ್ಲಾ ರೀತಿಯ ಸಾಮರ್ಥ್ಯಗಳು ಇವೆ. ಏರ್‌ಇಂಡಿಯಾ ಹೆಸರು ಜಗತ್ತಿನಾದ್ಯಂತ ಜನಪ್ರಿಯವಾಗಿದೆ.
ಹೀಗಾಗಿ, ಏರ್ ಇಂಡಿಯಾ ಬ್ರ್ಯಾಂಡ್ ಹೆಸರು ಉಳಿಸಿಕೊಂಡು, ವಿಸ್ತಾರ ಹೆಸರನ್ನು ಕೈಬಿಡಲಾಗುತ್ತದೆ ಎಂದು ಹೇಳಿದ್ದಾರೆ. ಜತೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಎಐಎಕ್ಸ್ ಕನೆಕ್ಟ್‌ನ ವಿಲೀನ ಪ್ರಕ್ರಿಯೆಗಳೂ ವಿವಿಧ ಹಂತಗಳಲ್ಲಿವೆ ಎಂದು ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿದ್ದಾರೆ.
ಮಹಾರಾಜನಿಗೆ ಹೊಸ ಸಂಗಾತಿ!
ಏರ್ ಇಂಡಿಯಾದ ಐತಿಹಾಸಿಕ ಲೋಗೋ “ಮಹಾರಾಜ’ನನ್ನು ಉಳಿಸಿಕೊಳ್ಳಲಾಗುತ್ತದೆ. ಅದರಲ್ಲಿ ಬದಲಾವಣೆ ಮಾಡುವುದಿಲ್ಲ. ಆದರೆ, ಆತನಿಗೆ ಹೊಸ ರೂಪವನ್ನಂತೂ ನೀಡಲಾಗುತ್ತದೆ. ಜತೆಗೆ ಮಹಾರಾಜನಿಗೆ ಹೊಸ ಸಂಗಾತಿಯೂ ಶೀಘ್ರವೇ ಸಿಗುವ ಸಾಧ್ಯತೆಯೂ ಇರಲಿದೆ ಎಂದರು.
ನೇಮಕಗಳ ಬಗ್ಗೆ ಮಾತನಾಡಿ ಅವರು, 1,200 ಗ್ರೌಂಡ್ ಸ್ಟಾಫ್ ಗಳನ್ನು ನೇಮಿಸಲಾಗಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ 4,200 ಕ್ಯಾಬಿನ್ ಕ್ರೂé ಟ್ರೈನಿಗಳನ್ನು ನೇಮಿಸಿಕೊಳ್ಳಲಾಗುತ್ತದೆ ಎಂದರು.