ಹೊಸದಿಲ್ಲಿ: ಟೊರೊಂಟೊದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಜುಲೈ 8 ರಂದು ಪ್ರಯಾಣಿಕನೊಬ್ಬ ವಿಮಾನದ ಸಿಬಂದಿ ಮತ್ತು ಇತರ ಕೆಲವು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದು, ಶೌಚಾಲಯದ ಬಾಗಿಲನ್ನು ಹಾನಿಗೊಳಿಸಿದ್ದಾನೆ ಎಂದು ಏರ್‌ಲೈನ್ಸ್ ಬುಧವಾರ ತಿಳಿಸಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಕೃತ್ಯ ಎಸಗಿದ ನೇಪಾಳದ ಪ್ರಜೆಯನ್ನು ಭದ್ರತಾ ಏಜೆನ್ಸಿಗಳಿಗೆ ಹಸ್ತಾಂತರಿಸಲಾಗಿದೆ.
“ಜುಲೈ 08 ರಂದು ಟೊರೊಂಟೊ-ದೆಹಲಿ ವಿಮಾನ ಹಾರಾಟದ ಸಮಯದಲ್ಲಿ ಸ್ವೀಕಾರಾರ್ಹವಲ್ಲದ ವರ್ತನೆ ಪ್ರದರ್ಶಿಸಿದ್ದು, ಶೌಚಾಲಯದಲ್ಲಿ ಧೂಮಪಾನ ಮಾಡಿ, ಶೌಚಾಲಯದ ಬಾಗಿಲನ್ನು ಹಾನಿಗೊಳಿಸಿ, ಸಿಬ್ಬಂದಿ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಕ್ತಾರರ ಪ್ರಕಾರ, ಪ್ರಯಾಣಿಕನಿಗೆ ಸಿಬಂದಿ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಅಂತಿಮವಾಗಿ ಅವರ ಆಸನದ ಮೇಲೆ ನಿಗ್ರಹಿಸಲಾಯಿತು. ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಫ್‌ಐಆರ್‌ನ ಪ್ರಕಾರ, ಪ್ರಯಾಣಿಕನು ಟೇಕ್ ಆಫ್ ಆದ ನಂತರ ತನ್ನ ಸೀಟನ್ನು ಬದಲಾಯಿಸಿದ ಮತ್ತು ಎಕಾನಮಿ ಕ್ಲಾಸ್ ಸಿಬಂದಿಯನ್ನು ನಿಂದಿಸಲು ಪ್ರಾರಂಭಿಸಿದ, ನಂತರ ಅವನಿಗೆ ಎಚ್ಚರಿಕೆ ನೀಡಲಾಯಿತು. ಸ್ಮೋಕ್ ಅಲರ್ಟ್ ಆಫ್ ಆದ ನಂತರ ಶೌಚಾಲಯದೊಳಗೆ ಸಿಗರೇಟ್ ಲೈಟರ್‌ನೊಂದಿಗೆ ಸಿಕ್ಕಿಬಿದ್ದಿದ್ದಾನೆ.
ಇತ್ತೀಚಿನ ದಿನಗಳಲ್ಲಿ ವಿಮಾನಗಳಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಯ ಹಲವಾರು ಘಟನೆಗಳು ನಡೆಯುತ್ತಿವೆ.